fbpx

ಮಾನವೀಯತೆಯ ಚಾಂಪಿಯನ್! Positive News @ Corona Time

ಬೆಂಗಳೂರಿನ ಬನಶಂಕರಿಯ ಐಟಿ ಉದ್ಯೋಗಿ ಮಹಮ್ಮದ್ ಅಜ್ಮಾಲ್ ಅಂತರಾಷ್ಟ್ರೀಯ ಖ್ಯಾತಿಯ ವೆಯ್ಟ್ ಲಿಫ್ಟರ್. ಎರಡು ವರ್ಷಗಳ ಹಿಂದೆ ಇಂಟರ್ ನೇಷನಲ್ ಚಾಂಪಿಯನ್ ಶಿಪ್ ವೊಂದರಲ್ಲಿ 295 ಕೆಜಿ ಭಾರ ಎತ್ತಿ ದಾಖಲೆ ಮಾಡಿದ್ದರು. ಕಳೆದ ಡಿಸೆಂಬರ್ ನಲ್ಲಿ ಮಾಸ್ಕೋದಲ್ಲಿ ನಡೆದ ‘ವರ್ಲ್ಡ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್’ನ 110 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಈಗ ಮಹಮ್ಮದ್ ಅಜ್ಮಾಲ್ ಕೊರೋನಾ ಸೋಂಕು ತಗಲಿ ಸತ್ತವರ ಶವಗಳನ್ನು ಎತ್ತುವ ಮೂಲಕ ಮಾನವೀಯತೆಯ ಚಾಂಪಿಯನ್ ಆಗಿ ಸಮಾಜಕ್ಕೆ ನೆರವಾಗುತ್ತಿದ್ದಾರೆ!

ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಹೇರಲ್ಪಟ್ಟು ವಲಸೆ ಕಾರ್ಮಿಕರು ಬೀದಿಗೆ ಬಿದ್ದಾಗ ಅಜ್ಮಾಲ್ ಇತರ ಸಾಮಾಜಿಕ ಕಾರ್ಯಕರ್ತರೊಂದಿಗೆ ಸೇರಿ ಅವರಿಗೆ ಆಹಾರ ವಸ್ತುಗಳನ್ನು ಒದಗಿಸಿಕೊಡುವ ಕೆಲಸ ಮಾಡಿದರು. ಲಾಕ್ ಡೌನ್ ಸಡಿಲಗೊಂಡು ವಲಸೆ ಕಾರ್ಮಿಕರೆಲ್ಲ ತಮ್ಮ ನೆಲೆ ಸೇರಿಕೊಂಡ ನಂತರ ಅಜ್ಮಾಲ್ ತಾನು ಉದ್ಯೋಗ ಮಾಡುತ್ತಿದ್ದ ಐಟಿ ಕಂಪೆನಿ ಸೇರಿಕೊಂಡು ಮುಂದಿನ ಚಾಂಪಿಯನ್ ಶಿಪ್ ಗೆ ತಯಾರಿ ನಡೆಸತೊಡಗಿದರು. ಆಗ ಇನ್ನೊಂದು ದುರಂತ ತೆರೆದುಕೊಳ್ಳ ತೊಡಗಿತು. ಕೋವಿಡ್ ಸೋಂಕು ತಗಲಿ ಸತ್ತವರ ಅಂತ್ಯ ಕ್ರಿಯೆಗೆ ಅವರ ಹತ್ತಿರದ ಸಂಬಂಧಿಕರೇ ಬಾರದೆ ಅನಾಥ ಶವಗಳಾಗಿ ಸ್ಮಶಾನ ಸೇರುತ್ತಿರುವ ಘಟನೆಗಳು ಅಜ್ಮಾಲ್ ರನ್ನು ವಿಚಲಿತಗೊಳಿಸಿದವು. ಆಗ ಅವರು ಬೆಂಗಳೂರು ನಗರದಲ್ಲಿ ಕೋವಿಡ್ ಶವಗಳ ಅಂತ್ಯ ಸಂಸ್ಕಾರ ನಡೆಸುತ್ತಿರುವ ‘ಮರ್ಸಿ ಏಂಜಲ್ಸ್’ ಎಂಬ ಸಾಮಾಜಿಕ ಸಂಸ್ಥೆಗೆ ಸ್ವಯಂ ಸೇವಕರಾಗಿ ಸೇರಿದರು.

ಮೊನ್ನೆ ಹೀಗೆ ಕೋವಿಡ್ ನಿಂದ ಇಳಿವಯಸ್ಸಿನ ಕ್ರಿಶ್ಚಿಯನ್ ವ್ಯಕ್ತಿಯೊಬ್ಬರು ಸತ್ತಾಗ ಶವಸಂಸ್ಕಾರಕ್ಕೆ ಅವರ ಕುಟುಂಬಿಕರ್ಯಾರೂ ಬಾರದೆ ಅಜ್ಮಾಲ್ ಮತ್ತು ಇನ್ನಿಬ್ಬರು ಸಾಮಾಜಿಕ ಕಾರ್ಯಕರ್ತರು ಕೆಲಸ ಮುಗಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು. “ಪ್ರಾಕ್ಟಿಸ್ ಸೆಸ್ಸನ್ ಗಳಲ್ಲಿ ಆನೇಕ ಬಾರಿ 300 ಕೆಜಿಗೂ ಹೆಚ್ಚು ಭಾರವನ್ನು ಎತ್ತಿದ್ದೇನೆ. ಆದರೆ, ಬಂಧು ಬಳಗ ಎಲ್ಲ ಇದ್ದು ಹೀಗೆ ಅನಾಥರಂತೆ ಸಾಯುವವರ ಶವಗಳನ್ನು ಹೊರುವಾಗ ಆಗುವ ನೋವು ಹೇಳಿಕೊಳ್ಳಲಾಗುದಷ್ಟು ಭಾರವಾಗಿರುತ್ತದೆ” ಎಂದು ಹೇಳುವ ಮಹಮ್ಮದ್ ಅಜ್ಮಾಲ್ ನಿಜವಾದ ಹೀ ಮ್ಯಾನ್!

Panju Gangolli

Please follow and like us:
error
error: Content is protected !!