ಮಾಧ್ಯಮ ಪ್ರತಿನಿಧಿಗಳಿಗೂ ವೈದ್ಯಕೀಯ ವಿಮೆ ವಿಚಾರ: ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಮೇ 8: ಮಾಧ್ಯಮ ಪ್ರತಿನಿಧಿಗಳಿಗೂ ಕೊರೋನ ವೈದ್ಯಕೀಯ ವಿಮೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಹೈಕೋರ್ಟ್ ತುರ್ತು ನೋಟಿಸ್ ಜಾರಿಗೊಳಿಸಿದೆ.

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಯಿತು.

ಅರ್ಜಿದಾರರ ಮನವಿಗೆ ಉತ್ತರ ನೀಡುವಂತೆ ಹೈಕೋರ್ಟ್ ನೋಟಿಸ್ ಹೊರಡಿಸಿದ್ದು, ವೈದ್ಯಕೀಯ ವಿಮೆಯಲ್ಲಿ ಮಾಧ್ಯಮದವರನ್ನು ಸೇರಿಸಲು ಸಾಧ್ಯವೇ ತಿಳಿಸಿ ಎಂದು ಪ್ರಶ್ನಿಸಿದೆ. ಇನ್ನು ಮಾಸ್ಕ್, ಸ್ಯಾನಿಟೈಸರ್ ಮತ್ತು ರಕ್ಷಣಾ ಕಿಟ್ ನೀಡುವ ವಿಚಾರವಾಗಿ ಮಾಧ್ಯಮದವರು ಖಾಸಗಿ ಸಂಸ್ಥೆಯಲ್ಲಿ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಅವರ ರಕ್ಷಣೆ ಮಾಡುವುದು ಮ್ಯಾನೇಜ್‍ಮೆಂಟ್‍ಗಳ ಜವಾಬ್ದಾರಿಯಾಗಿರುತ್ತದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. ಅಷ್ಟೇ ಅಲ್ಲದೆ, ಆಯಾ ಮ್ಯಾನೇಜ್‍ಮೆಂಟ್ ಕಂಪೆನಿಗಳು ಸೂಕ್ತ ರಕ್ಷಣಾ ಸೌಲಭ್ಯಗಳನ್ನು ನೀಡಬೇಕು. ಒಂದು ವೇಳೆ ಕೊಟ್ಟಿಲ್ಲ ಅಂದರೆ ಅವರ ವಿಚಾರಣೆ ಅನಿವಾರ್ಯವಾಗಲಿದೆ. ಈಗ ಸರಕಾರ ಈ ಬಗ್ಗೆ ನೋಟಿಸ್‍ಗೆ ಉತ್ತರ ನೀಡಲಿ ಎಂದು ಹೇಳಿ, ಮೇ 12ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಲಾಯಿತು.

ಮಾಧ್ಯಮ ಪ್ರತಿನಿಧಿಗಳಿಗೂ ಕೊರೋನ ವೈದ್ಯಕೀಯ ವಿಮೆ ನೀಡಬೇಕು ಎಂದು ಕೋರಿ ಹೈಕೋರ್ಟ್‍ಗೆ ಕೋರಮಂಗಲ ನಿವಾಸಿ ಜಾಕಬ್ ಜಾರ್ಜ್ ಅರ್ಜಿ ಹಾಕಿದ್ದರು.

ಮಾಧ್ಯಮದವರು ಸರಕಾರದ ಪರವಾಗಿ ಮತ್ತು ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಕೊರೋನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿಯಂತೆ ಮಾಧ್ಯಮದವರಿಗೂ ಕೊರೋನ ಸೋಂಕಿನಿಂದ ಮೃತಪಟ್ಟರೆ 50 ಲಕ್ಷ ಪರಿಹಾರ ನೀಡಬೇಕು. ಮತ್ತು ಅವರ ಕುಟುಂಬಕ್ಕೆ ಕಂಪೆನಿಗಳು 50 ಲಕ್ಷ ಪರಿಹಾರ ನೀಡಬೇಕು. ಫೀಲ್ಡ್ ನಲ್ಲಿ ಕೆಲಸ ಮಾಡುವ ಪ್ರತಿನಿಧಿಗಳಿಗೆ ರಕ್ಷಣಾ ಕಿಟ್ ನೀಡಬೇಕು ಎಂದು ಕೇಂದ್ರ, ರಾಜ್ಯ ಮತ್ತು ಮೀಡಿಯಾ ಕಂಪೆನಿಗಳ ಪಾರ್ಟಿ ಮಾಡಿ ಪಿಐಎಲ್ ಹಾಕಿದ್ದರು. ಅರ್ಜಿದಾರರ ಪರ ವಕೀಲ ಎಚ್.ಅನಿಲ್‍ ಕುಮಾರ್ ವಾದಿಸಿದ್ದರು.

Please follow and like us:
error