ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕೆ ವಿವಿಧ ತಂಡಗಳು ಹಾಗೂ ಸಮಿತಿಗಳು :

Koppal News

ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ 20 ಫ್ಲೈಯಿಂಗ ಸ್ಕ್ವಾಡ್, 106 ಸೆಕ್ಟರ್ ಆಫಿಸರ್, 11 ಸ್ಟಾಟಿಕ್ ಸರ್‌ವೆಲೆಂನ್ಸ್ ಟೀಮ್, 05 ಸಹಾಯಕ ವೆಚ್ಚ ವೀಕ್ಷಕರು, 05 ಲೆಕ್ಕ ಪರಿಶೋದನಾ ತಂಡ, 05 ವಿ.ವಿ.ಟಿ. ಮತ್ತು 15 ವಿ.ಎಸ್.ಟಿ. ತಂಡಗಳನ್ನು ರಚಿಸಲಾಗಿದೆ. ಜಿಲ್ಲಾ ಮಾದರಿ ನೀತಿ ಸಂಹಿತೆ ಘಟಕ, ವೆಚ್ಚ ಮೇಲ್ವೀಚಾರಣಾ ಘಟಕ, ಜಿಲ್ಲಾ ಮಟ್ಟದ ವೆಚ್ಚ ಮೇಲ್ವೀಚಾರಣಾ ಸಮಿತಿ, ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವೀಚಾರಣಾ ಸಮಿತಿ, ಮಾಧ್ಯಮ ಪ್ರಮಾಣೀಕರಣ ಘಟಕ, ಮಾಧ್ಯಮ ಮೇಲ್ವೀಚಾರಣಾ ಘಟಕ, ದೂರು ಮೇಲ್ವೀಚಾರಣಾ ಘಟಕ ಮತ್ತು ಜಿಲ್ಲಾ ಸಂಪರ್ಕದ ಕೇಂದ್ರ (1950), ಸಿ-ವಿಜಿಎಲ್, ನಗದು ಪುನರ್ ಪರಿಶೀಲನಾ ಸಮಿತಿ ಸೇರಿದಂತೆ ಒಟ್ಟು ಒಂಬತ್ತು ಸಮಿತಿಗಳನ್ನು ರಚಿಸಲಾಗಿದೆ.
ಚೆಕ್‌ಪೋಸ್ಟ್ ಗಳ ವಿವರ : ಕೊಪ್ಪಳ ಜಿಲ್ಲೆಯಾದ್ಯಂತ ರಚಿಸಲಾದ ಒಟ್ಟು 11 ಚೆಕ್‌ಪೋಸ್ಟ್ ಗಳ ವಿವರ ಇಂತಿದೆ. ಕುಷ್ಟಗಿ ಪೋಲೀಸ್ ಠಾಣಾ ವ್ಯಾಪ್ತಿಯ ಕ್ಯಾದಿಗುಪ್ಪ, ಹನುಮಸಾಗರ ಠಾಣಾ ವ್ಯಾಪ್ತಿಯ ಹನುಮನಾಳ, ತಾವರಗೇರಾ ಠಾಣಾ ವ್ಯಾಪ್ತಿಯ ಕಿಲ್ಲಾರಹಟ್ಟಿ, ಕಾರಟಗಿ ಠಾಣಾ ವ್ಯಾಪ್ತಿಯ ಚನ್ನಳ್ಳಿ ಕ್ರಾಸ್, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕಡೆಬಾಗಿಲು ಬ್ರಿಡ್ಜ್, ಹಾಗೂ ಚಿಕ್ಕಜಂತಕಲ್, ಕುಕನೂರು ಠಾಣಾ ವ್ಯಾಪ್ತಿಯ ಬನ್ನಿಕೊಪ್ಪ, ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯ ಸಂಕನೂರು ಕ್ರಾಸ್ ಹಾಗೂ ಬಂಡಿ ಕ್ರಾಸ್, ಮುನಿರಾಬಾದ್ ಠಾಣಾ ವ್ಯಾಪ್ತಿಯ ಮೂನ್‌ಲೈಟ್ ಢಾಬಾ ಹತ್ತಿರ ಮತ್ತು ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗಟ್ಟಿಯಲ್ಲಿ ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ.
ಪರಿಸರ ಸ್ನೇಹಿ ಪ್ರಚಾರ ಸಾಮಗ್ರಿಗಳ ಬಳಕೆ : ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣೆ ಪ್ರಚಾರಕ್ಕೆ ಪರಿಸರ ಸ್ನೇಹಿ ಸಾಮಗ್ರಿಗಳನ್ನು ಉಪಯೋಗಿಸಲು ಕೋರಲಾಗಿದೆ. ಪರಿಸರಕ್ಕೆ ಅಪಾಯಕಾರಿಯಾಗಿರುವ ಪ್ಲಾಸ್ಟಿಕ್ ಹಾಗೂ ಪಾಲಿಥಿನ್ ಮೂಲಕ ತಯಾರಿಸಲಾದ ಯಾವುದೇ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಉಪಯೋಗಿಸಬಾರದು. ಪರಿಸರ ಸಂರಕ್ಷಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಒತ್ತು ನೀಡಬೇಕು.
ಧ್ವನಿವರ್ಧಕಗಳ ಬಳಕೆಗೆ ನಿರ್ಭಂದನೆ : ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಯಾವುದೇ ಜನರ ಶಾಂತಿಗೆ ಭಂಗ ತರುವಂತಹ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳಬಾರದು. ಚುನಾವಣೆ ಪ್ರಚಾರಕ್ಕೆ ತಡ ರಾತ್ರಿ ಧ್ವನಿವರ್ಧಕಗಳ ಬಳಕೆಯಿಂದಾಗಿ ವಿದ್ಯಾರ್ಥಿಗಳಿಗೆ, ಅನಾರೋಗ್ಯ ವ್ಯಕ್ತಿಗಳಿಗೆ ಗಂಭೀರವಾಗಿ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ರಾತ್ರಿ 10-00 ಗಂಟೆಯ ನಂತರ ಬೆಳಿಗ್ಗೆ 06-00 ಗಂಟೆ ವರೆಗೆ ಯಾವುದೇ ಧ್ವನಿವರ್ಧಕಗಳನ್ನು ಉಪಯೋಗಿಸುವುದು ನಿಷೇಧಿಸಿದೆ. ಹಾಗೂ ಆರೋಗ್ಯ ಧಾಮಗಳು, ವೃದ್ದಾಶ್ರಮ, ಆಸ್ಪತ್ರೆ, ಶಾಲಾ, ಕಾಲೇಜುಗಳ ಹತ್ತಿರ ಧ್ವನಿವರ್ಧಕಗಳನ್ನು ಬಳಕೆ ಮಾಡುವಂತಿಲ್ಲ. ಆದ್ದರಿಂದ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಧ್ವನಿವರ್ಧಕಗಳ ಬಳಕೆ ಕಡಿಮೆ ಮಾಡಿ ಶಬ್ದ ಮಾಲಿನ್ಯ ಹರಡುವುದನ್ನು ಕಡಿಮೆ ಮಾಡಬೇಕು.
ಚುನಾವಣಾ ವೆಚ್ಚ : ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಗರಿಷ್ಠ ರೂ. 70 ಲಕ್ಷಗಳಿಗೆ ಮಿತಿಗೊಳಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಚುನಾವಣೆ ವೆಚ್ಚ ಭರಿಸಲು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಒಂದು ಪ್ರತ್ಯೇಕವಾದ ಹೊಸ ಖಾತೆಯನ್ನು ತೆರೆಯಬೇಕು. ಎಲ್ಲಾ ವೆಚ್ಚಗಳನ್ನು ಪ್ರತ್ಯೇಕವಾಗಿ ತೆರೆದ ಖಾತೆಯಿಂದಲೇ ಭರಿಸಬೇಕು. ರೂ. 10 ಸಾವಿರ ಮೇಲ್ಪಟ್ಟು ಯಾವುದೇ ವೆಚ್ಚ ಭರಿಸಿದ್ದಲ್ಲಿ, ಅದನ್ನು ನಗದು ರಹಿತವಾಗಿ ಆರ್‌ಟಿಜಿಎಸ್, ಚೆಕ್, ಡಿಡಿ, ನೆಫ್ಟ್ ಅಥವಾ ಇತರೆ ಎಲೆಕ್ಟ್ರಾನಿಕ್ ವಿಧಾನದ ಮೂಲಕ ಪಾವತಿಸಬೇಕು.