ಮಾಜಿ ಸಿಎಂ ಕುಮಾರಸ್ವಾಮಿ, ನಿಜಗುಣಾನಂದ ಸ್ವಾಮೀಜಿ ಸೇರಿ ಹಲವರಿಗೆ ಕೊಲೆ ಬೆದರಿಕೆ ಪತ್ರ

ಬೆಂಗಳೂರು, ಜ.24: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜನ ಸಾಮಾನ್ಯರಲ್ಲಿ ಮೂಢನಂಬಿಕೆ, ಕಂದಾಚಾರ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಬೆಳಗಾವಿ ಜಿಲ್ಲೆಯ ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ, ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ದಿನೇಶ್ ಅಮೀನ್‌ಮಟ್ಟು, ನಟ ಪ್ರಕಾಶ್ ರಾಜ್, ಬೃಂದಾ ಕಾರಟ್, ಬಿ.ಟಿ.ಲಲಿತಾ ನಾಯಕ್ ಸೇರಿದಂತೆ 15 ಮಂದಿಯನ್ನು ಇದೇ ತಿಂಗಳ 29ರಂದು ‘ಸಂಹಾರ’ ಮಾಡುವುದಾಗಿ ದಾವಣಗೆರೆಯಿಂದ ಅನಾಮಧೇಯ ಬೆದರಿಕೆ ಪತ್ರವೊಂದು ಬೈಲೂರು ಮಠಕ್ಕೆ ಬಂದಿದೆ.

ಪತ್ರದಲ್ಲಿರುವ ವಿವರ: ನಿಜಗುಣಾನಂದ ಸ್ವಾಮಿಗಳೇ ನಿಮ್ಮನ್ನು ಮತ್ತು ನಿಮ್ಮ ಜೊತೆ ಇರುವ ಧರ್ಮದ್ರೋಹಿಗಳನ್ನು, ದೇಶದ್ರೋಹಿಗಳನ್ನು 2020ರ ಜನವರಿ 29ರಿಂದ ನಿಮ್ಮ ಸಂಹಾರಕ್ಕೆ ಮುಹೂರ್ತ ನಿಶ್ಚಯವಾಗಿದೆ. ನಿಮ್ಮ ಅಂತಿಮ ಯಾತ್ರೆಗೆ ಸಿದ್ಧರಾಗಿ ನಿಜಗುಣಾನಂದ ಸ್ವಾಮಿಗಳೇ(ಕೇವಲ ನೀವು ಮಾತ್ರವಲ್ಲ) ಮುಂದೆ ನೋಡಿ ನಿಮ್ಮ ಜೊತೆ ಅಂತಿಮ ಯಾತ್ರೆಗೆ ಇವರನ್ನು ನೀವು ಸಿದ್ಧ ಮಾಡಬೇಕು. ಇವರಿಗೆ ನೀವೇ ಹೇಳಿ(ನಿಜಗುಣಾನಂದ ಅಸುರಿ ಸ್ವಾಮಿ) ಎಂದು ಪತ್ರದಲ್ಲಿ ಬೆದರಿಕೆ ಒಡ್ಡಲಾಗಿದೆ.

ಬಜರಂಗದಳದ ಮಾಜಿ ನಾಯಕ ಮಹೇಂದ್ರ ಕುಮಾರ್, ನಿಜಗುಣಾನಂದ ಅಸುರಿ ಸ್ವಾಮಿ, ನಿಡುಮಾಮಿಡಿ ವೀರಭದ್ರಚನ್ನಮಲ್ಲ ಸ್ವಾಮೀಜಿ, ನಟ ಪ್ರಕಾಶ್ ರಾಜ್, ಜ್ಞಾನಪ್ರಕಾಶ್ ಸ್ವಾಮೀಜಿ, ನಟ ಚೇತನ್‌ ಕುಮಾರ್, ಬಿ.ಟಿ.ಲಲಿತಾನಾಯಕ್, ಪ್ರೊ.ಮಹೇಶ್‌ ಚಂದ್ರಗುರು, ಕೆ.ಎಸ್ ಭಗವಾನ್, ದಿನೇಶ್ ಅಮಿನ್‌ ಮಟ್ಟು, ಚಂದ್ರಶೇಖರ ಪಾಟೀಲ್, ಡುಂಡಿ ಗಣೇಶ್, ರೌಡಿ ಅಗ್ನಿಶ್ರೀಧರ್, ಬೃಂದಾ ಕಾರಟ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ನಿಮ್ಮನ್ನೆಲ್ಲ ಸಂಹಾರ ಮಾಡೇ ಮಾಡುತ್ತೇವೆ ಎಂದು ಅನಾಮಧೇಯ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.

ನನ್ನನ್ನು ಹತ್ಯೆ ಮಾಡುವುದಾಗಿ ಹಲವಾರು ತಿಂಗಳಿನಿಂದ ಬೆದರಿಕೆಗಳು ಬರುತ್ತಿವೆ. ಯಾರೊಬ್ಬರೂ ನನ್ನ ಜೊತೆ ನೇರವಾಗಿ ಮಾತನಾಡಿಲ್ಲ, ಮಠದಲ್ಲಿರುವ ನನ್ನ ಶಿಷ್ಯರ ದೂರವಾಣಿಗಳಿಗೆ ಕರೆ ಮಾಡಿ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿಯನ್ನು ಭೇಟಿ ಮಾಡಿ, ವಿಷಯವನ್ನು ಅವರ ಗಮನಕ್ಕೆ ತರಲಾಗಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ ಎಂದು ನಿಜಗುಣಾನಂದ ಸ್ವಾಮೀಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Please follow and like us:
error