ಮಾಜಿ ಸಚಿವ ಎಂ.ಸಿ. ಮನಗೂಳಿ ನಿಧನ

ಬೆಂಗಳೂರು, : ಮಾಜಿ ಸಚಿವ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದ ಶಾಸಕ, ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಎಂ.ಸಿ. ಮನಗೂಳಿ ಅವರು ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.

ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಓರ್ವ ಪುತ್ರಿ, ನಾಲ್ವರು ಪುತ್ರರು ಸಹಿತ ಅಪಾರ ಸಂಖ್ಯೆಯ  ಅಭಿಮಾನಿಗಳು ಹಾಗೂ ಒಡನಾಡಿಗಳನ್ನು ಅಗಲಿದ್ದಾರೆ.ತೀವ್ರ ಉಸಿರಾಟದ ತೊಂದರೆಯಿಂದ ಇಲ್ಲಿನ ಬನ್ನೇರುಘಟ್ಟ ರಸ್ತೆಯಲ್ಲಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಗುರುವಾರ ಬೆಳಗಿನ ಜಾವ 1ಗಂಟೆಯ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಎರಡೂ ಬಾರಿ ಶಾಸಕರಾಗಿದ್ದ ಅವರು 1994ರ ಜೆ.ಎಚ್.ಪಟೇಲ್ ಸಂಪುಟ ಮತ್ತು 2018ರ ಕುಮಾರಸ್ವಾಮಿ ನೇತೃತ್ವದಲ್ಲಿನ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರದಲ್ಲಿ ಸಚಿವರಾಗಿದ್ದರು.ಅತ್ಯಂತ ಸರಳ ವ್ಯಕ್ತಿತ್ವದ ಮನಗೂಳಿ ಅವರು, ಪಕ್ಷಾತೀತವಾಗಿ ಎಲ್ಲ ರಾಜಕೀಯ ಮುಖಂಡರೊಂದಿಗೆ ಒಡನಾಟ ಹೊಂದಿದ್ದರು. ಜ.9ರಂದು ಏರ್ ಲಿಫ್ಟ್ ಮೂಲಕ ಕಲಬುರಗಿ ವಿಮಾನ ನಿಲ್ದಾಣದಿಂದ ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು.

ಪಾರ್ಥೀವ ಶರೀರವನ್ನು ಬೆಂಗಳೂರಿನಲ್ಲಿ ಕೆಲಕಾಲ ಸಾರ್ವಜನಿಕರ ದರ್ಶನಕ್ಕೆ ಆಸ್ಪತ್ರೆಯಲ್ಲಿ ಇರಿಸಿದ ಬಳಿಕ ರಸ್ತೆ ಮೂಲಕ ಸಿಂದಗಿಗೆ ಕೊಂಡೊಯ್ಯಲಾಗುವುದು ಎಂದು ತಿಳಿದುಬಂದಿದೆ. ಮಾಜಿ ಸಚಿವ ಹಾಗೂ ಹಾಲಿ ಶಾಸಕ ಮನಗೂಳಿಯವರ ಅಗಲಿಕೆಯಿಂದ ನಮ್ಮ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಜೆಡಿಎಸ್ ಸಂತಾಪ ಸೂಚಿಸಿದೆ.

Please follow and like us:
error