ಮಹಾರಾಷ್ಟ್ರ ರಾಜಕೀಯ ಪ್ರಹಸನಕ್ಕೆ ಮತ್ತೊಂದು ಟ್ವಿಸ್ಟ್

ಮುಂಬೈ, ನ.26: ಮಹಾರಾಷ್ಟ್ರ ರಾಜಕೀಯ ಪ್ರಹಸನಕ್ಕೆ ಮತ್ತೊಂದು ಮಹತ್ವದ ತಿರುವು ದೊರಕಿದ್ದು, ಎನ್‌ಸಿಪಿ ಹಾಗೂ ಕಾಂಗ್ರೆಸ್ ಮುಖಂಡರು ರಾಜ್ಯಪಾಲ ಬಿ.ಎಸ್.ಕೊಶ್ಯಾರಿ ಅವರಿಗೆ ಮನವಿ ಸಲ್ಲಿಸಿ ಸರ್ಕಾರ ರಚನೆಗೆ ತಮಗೆ ಆಹ್ವಾನ ನೀಡಬೇಕು ಎಂದು ಹಕ್ಕು ಮಂಡಿಸಿದ್ದಾರೆ. ಶನಿವಾರ ಪ್ರಮಾಣ ವಚನ ಸ್ವೀಕರಿಸಿದ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಬಹುಮತ ಇಲ್ಲ; ಇದು ಯಾವುದೇ ಕ್ಷಣದಲ್ಲಿ ಪತನವಾಗಬಹುದು ಎಂದು ರಾಜಭವನಕ್ಕೆ ಭೇಟಿ ನೀಡಿದ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಮುಖಂಡರು ಪ್ರತಿಪಾದಿಸಿದ್ದಾರೆ. ವಿಶ್ವಾಸಮತ ಯಾಚನೆ ವೇಳೆ ಫಡ್ನವೀಸ್ ಸರ್ಕಾರ ಪತನವಾಗಲಿದೆ ಎಂದು ಹೇಳಿದ್ದಾರೆ.

ಸಾಕಷ್ಟು ಶಾಸಕರ ಬೆಂಬಲ ಇಲ್ಲ ಎಂಬ ಕಾರಣಕ್ಕೆ ಕಳೆದ ತಿಂಗಳು ರಾಜ್ಯಪಾಲರ ಆಹ್ವಾನವನ್ನು ಫಡ್ನವೀಸ್ ತಿರಸ್ಕರಿಸಿದ್ದರು ಎಂದು ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಾಳಾ ಸಾಹೇಬ್ ತೋರಟ್ ಹಾಗೂ ಶಿವಸೇನೆ ಶಾಸಕಾಂಗ ಪಕ್ಷದ ಮುಖಂಡ ಏಕನಾಥ್ ಶಿಂಧೆ ಸಹಿ ಮಾಡಿರುವ ಒಂದು ಪುಟದ ಮನವಿಪತ್ರದಲ್ಲಿ ವಿವರಿಸಲಾಗಿದೆ.

ಇದೀಗ ಅವರು ಪ್ರಮಾಣ ವಚನ ಸ್ವೀಕರಿಸಿರುವುದರಿಂದ ಅವರು ಬಹುಮತ ಸಾಬೀತುಪಡಿಸಬೇಕಾಗುತ್ತದೆ. ಇಂದಿಗೂ ಅವರಿಗೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಅವರು ಅದಕ್ಕೆ ವಿಫಲವಾದಲ್ಲಿ ಶಿವಸೇನೆ ಸರ್ಕಾರ ರಚನೆಗೆ ಹಕ್ಕು ಮಂಡಿಸುತ್ತಿದೆ ಎಂದು ಹೇಳಲಾಗಿದೆ.

ಈ ಪತ್ರದ ಜತೆ 162 ಮಂದಿ ಶಾಸಕರು ಶಿವಸೇನೆ ನೇತೃತ್ವದ ಸರ್ಕಾರವನ್ನು ಬೆಂಬಲಿಸುತ್ತಾರೆ ಎಂಬ ಪತ್ರಕ್ಕೆ ಅವರ ಸಹಿಗಳನ್ನು ಕೂಡಾ ನೀಡಲಾಗಿದೆ. ನಮಗೆ ಸಾಕಷ್ಟು ಸಂಖ್ಯಾಬಲ ಇದೆ. ತಕ್ಷಣ ಸರ್ಕಾರ ರಚನೆಗೆ ನಮ್ಮನ್ನು ಆಹ್ವಾನಿಸಬೇಕು ಎಂದು ಶಿಂಧೆ ಹೇಳಿದರು.

ಶಾಸಕರು ಅಫಿಡವಿಟ್ ಮತ್ತು ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಫಡ್ನವೀಸ್ ಸರ್ಕಾರ ಯಾವುದೇ ಕ್ಷಣದಲ್ಲಿ ಪತನವಾಗಬಹುದು ಎಂದು ಪಾಟೀಲ್ ಮತ್ತು ಚವ್ಹಾಣ್ ತಿಳಿಸಿದರು.

Please follow and like us:
error