ಮಹಾರಾಷ್ಟ್ರದ ಶೇ.80ರಷ್ಟು ಕೊರೋನ ಸೋಂಕಿತರಲ್ಲಿ ರೋಗಲಕ್ಷಣ ಇಲ್ಲ: ಉದ್ದವ್ ಠಾಕ್ರೆ

ಮುಂಬೈ: ಮಹಾರಾಷ್ಟ್ರದಲ್ಲಿ ಶೇಕಡ 80ರಷ್ಟು ಕೊರೋನ ಸೋಂಕಿತರಲ್ಲಿ ರೋಗಲಕ್ಷಣ ಕಂಡುಬಂದಿಲ್ಲ ಎಂದು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹೇಳಿದ್ದಾರೆ.

ದೇಶದಲ್ಲೇ ಗರಿಷ್ಠ ಸಂಖ್ಯೆಯ (7,628) ಪ್ರಕರಣಗಳು ರಾಜ್ಯದಿಂದ ವರದಿಯಾಗಿದ್ದು, ಇದು ದೇಶದ ಒಟ್ಟು ಸೋಂಕಿತರ ಸಂಖ್ಯೆಯ ಶೇಕಡ 25ರಷ್ಟು. ಬಹುತೇಕ ಪ್ರಕರಣಗಳು ದೇಶದ ಆರ್ಥಿಕ ರಾಜಧಾನಿ ಮುಂಬೈನಿಂದ ವರದಿಯಾಗಿವೆ.

ರಾಜ್ಯದಲ್ಲಿ ಲಾಕ್‍ ಡೌನ್ ವಿಸ್ತರಿಸುವ ಸಂಬಂಧ ಮಾಸಾಂತ್ಯದಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಉದ್ದವ್ ಠಾಕ್ರೆ ಹೇಳಿದ್ದಾರೆ. ತಕ್ಷಣಕ್ಕೆ ಕೆಲ ವಹಿವಾಟು ಪುನರಾರಂಭವಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿ, ನಿಧಾನವಾಗಿ ಸಹಜತೆಗೆ ಹೇಗೆ ಮರಳಬಹುದು ಎನ್ನುವ ಬಗ್ಗೆ ಕಾರ್ಯಯೋಜನೆ ರೂಪಿಸಲಿದ್ದೇವೆ ಎಂದು ಹೇಳಿದ್ದಾರೆ.

ತುರ್ತು ಅಗತ್ಯತೆಗಳ ಬಗ್ಗೆ ಪ್ರಸ್ತಾವಿಸಿದ ಅವರು, ವೈದ್ಯರು ತಮ್ಮ ಕ್ಲಿನಿಕ್‍ ಗಳನ್ನು ಆರಂಭಿಸಬೇಕು. ಡಯಾಲಿಸಿಸ್ ಕೇಂದ್ರಗಳು ಕಾರ್ಯಾರಂಭ ಮಾಡಬೇಕು ಎಂದು ಸೂಚಿಸಿದರು. ತಾಳ್ಮೆಯಿಂದ ಇರುವುದು ಬಿಟ್ಟರೆ ಅನ್ಯ ಮಾರ್ಗ ಇಲ್ಲ ಎಂದು ಅವರು ಲಾಕ್‍ಡೌನ್ ಪದವನ್ನು ಉಲ್ಲೇಖಿಸದೇ ವಿವರಿಸಿದರು.

ಕೊರೋನ ವೈರಸ್ ದಿಢೀರನೇ ಹೋಗದು. ಯಾರ ಪ್ರತಿರೋಧ ಶಕ್ತಿಯ ಬಗ್ಗೆಯೂ ಪುರಾವೆ ಸಿಗುವುದಿಲ್ಲ. ಹೈ ರಿಸ್ಕ್ ಜನರನ್ನು ಸುರಕ್ಷಿತವಾಗಿ ಇಡಬೇಕಾಗಿದೆ. ಮಾಸ್ಕ್‍ ಗಳನ್ನು ಧರಿಸುವ ಜತೆಗೆ ಗುಂಪುಗಳನ್ನು ರಚಿಸಬಾರದು. ಮನೆಗಳಲ್ಲೇ ವ್ಯಾಯಾಮ ಮಾಡಬೇಕು. ಲಕ್ಷಣಗಳು ಕಂಡುಬಂದರೆ ಜ್ವರ ಕ್ಲಿನಿಕ್ ‍ಗಳಿಗೆ ಭೇಟಿ ನೀಡಬೇಕು. ರೋಗ ಲಕ್ಷಣವನ್ನು ನಿರ್ಲಕ್ಷಿಸಿ, ಸ್ವಯಂ ಚಿಕಿತ್ಸೆಯ ಸಾಹಸ ಮಾಡಬೇಡಿ ಎಂದು ಕಿವಿಮಾತು ಹೇಳಿದರು

Please follow and like us:
error