ಮರುಜೀವ ಪಡೆದ ಸೋರ್ಸ್

ಗೋವಾದ ಆರಂಬೋಲ್ ಎಂಬಲ್ಲಿನ ಸೆಬಾಸ್ಟಿಯಾನ ಫೆರ್ನಾಂಡೀಸ್ ರ ಜಮೀನಿನಲ್ಲಿರುವ ಈ ಆಲದ ಮರಕ್ಕೆ 200 ವರ್ಷ ಪ್ರಾಯ. ಸೆಬಾಸ್ಟಿಯಾನ ಈ ಮರದ ನೆರಳಲ್ಲಿ ಎಳೆ ತೆಂಗಿನಕಾಯಿ ಕೆತ್ತಿ ಕೊಟ್ಟು ಪ್ರವಾಸಿಗರ ದಣಿವನ್ನು ಇಂಗಿಸುತ್ತಿದ್ದರು. ಸಂಜೆ ಹೊತ್ತು ಪ್ರವಾಸಿಗರು ಇವರ ಮನೆಯಿಂದ ಹಾಡು ಹಾಕಿಸಿಕೊಂಡು ತಡರಾತ್ರಿವರೆಗೂ ಇದರಡಿ ಕುಣಿದು ಹೋಗುತಿದ್ದರು. ಪ್ರತೀ ಬಾರಿ ಹೀಗೆ ಕುಣಿದು ಹೋಗುವಾಗ ಯಾರೂ ಮರಕ್ಕೆ ಕೃತಜ್ಞತೆ ಹೇಳಲು ಮರೆಯುತ್ತಿರಲಿಲ್ಲ. ಅವರೇ ಈ ಮರಕ್ಕೆ ಒಂದು ಹೆಸರನ್ನೂ ಕೊಟ್ಟಿದ್ದರು- ದಿ ಸೋರ್ಸ್ ಅಂತ. ಎರಡು ವಾರಗಳ ಹಿಂದೆ ಬಿದ್ದ ಭಾರೀ ಮಳೆಗೆ ಸೋರ್ಸ್ ಬುಡ ಸಮೇತ ಉರುಳಿ ಬಿತ್ತು. ಸಾಯುತ್ತಿರುವ ಸೋರ್ಸನ್ನು ನೋಡಿ ಸೆಬಾಸ್ಟಿಯಾನ ತನ್ನ ಬಂಧುವೊಬ್ಬರನ್ನು ಕಳೆದುಕೊಂಡಂತೆ ಅತ್ತರು.

ಸೋರ್ಸ್ ಬಿದ್ದ ಸುದ್ದಿ ಎಲ್ಲೆಡೆ ಹರಡಿ ಇದರಡಿ ಹಾಡಿ ಕುಣಿದು ಆನಂದಿಸಿದ ಲಂಡನ್, ಬರ್ಲಿನ್ ಮೊದಲಾದ ದೇಶ ವಿದೇಶಗಳ ಪ್ರವಾಸಿಗರು ಇದಕ್ಕೆ ಮರುಜೀವ ನೀಡಲು ಮುಂದೆ ಬಂದರು. ಕ್ಲೌಡ್ ಫಂಡಿಂಗ್ ಮೂಲಕ ಎರಡು ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಿದರು. ಆಗಸ್ಟ್ 16 ರಂದು ಹೊಂಡ ತೋಡಿ, ಈಗ ಎಲ್ಲೆಡೆ ರಸ್ತೆ ನಿರ್ಮಾಣಕ್ಕಾಗಿ ಮರಗಳನ್ನು ಉರುಳಿಸಿ ಕೊಲ್ಲಲು ಬಳಸುವ ಬೃಹತ್ ಕ್ರೇನಿನ ಸಹಾಯದಿಂದ ಸೋರ್ಸನ್ನು ಎತ್ತಿ ಅದರಲ್ಲಿ ನಿಲ್ಲಿಸಿದರು. ಇಷ್ಟಾಗುವಾಗ ಇದರ ಪೊಟರೆಯಿಂದ ಗಾಬರಿಯಿಂದ ಹೊರ ಇಣುಕುತ್ತಿದ್ದ ಬಿಳೀ ಬಣ್ಣದ ಹಾವು ಸೋರ್ಸ್ ನಿಲ್ಲುತ್ತಿದ್ದಂತೆ ನೆಮ್ಮದಿಯಿಂದ ಒಳ ಸೇರಿಕೊಂಡಿತು. ಇದರ ಬುಡದಲ್ಲಿ ಆಶ್ರಯ ಪಡೆದಿದ್ದ ಏಳು ಬೀದಿ ನಾಯಿಗಳು ವಾಪಾಸ್ ಬಂದು ಸೋರ್ಸ್ ಈಗ ಚೇತರಿಸಿಕೊಳ್ಳುತ್ತಿದೆ.

Panju Ganguli

Please follow and like us:
error