ಮಬ್ಬು ಹರಿಯುವುದೇನಾ; ಹಬ್ಬ ವಾಗುವುದೇನಾ ?  – ಮತ್ತೊಮ್ಮೆ ಕನ್ನಡದ ನುಡಿ ಹಬ್ಬ ಬಂದಿದೆ

    ಕರೋನಾ ಮತ್ತು ಕನ್ನಡದ ಈ ಕಾಲಘಟ್ಟದಲ್ಲಿ, ನಾಗಮಂಡಲಕ್ಕಾಗಿ  ಗೋಪಾಲ್ ಯಾಜ್ಞಿಕ್ ಬರೆದ, ಸಂಗೀತಾ ಕಟ್ಟಿ ಯವರು ಹಾಡಿದ  ಸಿ. ಅಶ್ವಥ್ ರಾಗ ಸಂಯೋಜನೆಯ ‘ ಮಬ್ಬು ಹರಿಯುವುದೇನಾ? ಹಬ್ಬ ವಾಗುವುದೇನಾ?’ ಗೀತೆಯ ಸಾಲುಗಳು ಅದೇಕೋ ನನ್ನ ಕಿವಿಯಲ್ಲಿ ಅನುರಣಿಸುತ್ತಿವೆ .

ಕನ್ನಡದ ಸಂದರ್ಭದಲ್ಲಿ ಹೇಳುವುದಾದರೆ ಅನೇಕ  ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಕೇಂದ್ರ ಸಾಹಿತ್ಯ, ನಾಟಕ, ಲಲಿತ ಕಲಾ ಅಕಾಡೆಮಿ ಪುರಸ್ಕಾರಗಳಿಗೆ ಭಾಜನರಾದ ಬಹಳಷ್ಟು ಪ್ರತಿಭಾನ್ವಿತರಿದ್ದಾರೆ. ದ್ರೋಣಾಚಾರ್ಯ,ಏಕಲವ್ಯ, ಅರ್ಜುನ ಪ್ರಶಸ್ತಿ ಪಡೆದ ಅನೇಕ ಕ್ರೀಡಾ ಪಟು ಗಳಿದ್ದಾರೆ . ಆದರೂ  ಇವೆಲ್ಲವುಗಳಗಳ ನಡುವೆಯೂ     “ಕಾನನವೇನೋ ಸುಂದೆರ ಗಹನ; ಆದರೆ  ನನಗಿದೆ ವಚನ ಬಂಧನ. ನಡೆಯಲೇ ಬೇಕಿದೆ ನಿದ್ರೆಗೂ ಮುನ್ನ;   ಮೈಲು ಮೈಲು ಗಳ ದಾರಿಯನ. ( ದ ವುಡ್ಸ್ ಆರ್ ಲವ್ಲೀ ಡಾರ್ಕ್ ಅಂಡ್ ಡೀಪ್; ಬಟ್ ಐ ಹ್ಯಾವ್  ಪ್ರೋಮಿಸೆಸ್ ಟು ಕೀಪ್; ಮೈಲ್ಸ್ ಟು ಗೋ  ಬಿಫೋರ್ ಐ ಸ್ಲೀಪ್ ; ಅಂಡ್ ಮೈಲ್ಸ್ ಟು ಗೋ ಬಿಫೋರ್ ಯಐ ಸ್ಲೀಪ್.”) ಅನ್ನುವ ರಾಬರ್ಟ್ ಫ್ರಾಸ್ಟ್ ನ  ಕವಿತೆಯ ಸಾಲುಗಳು  ಕನ್ನಡಿಗರ ನಿರಾತಂಕ ನೆಮ್ಮದಿಯ ಭಾವಕ್ಕೆ ಸವಾಲು  ಹಾಕುತ್ತವೆ  ಅನಿಸುತ್ತದೆ .

ಕನ್ನಡದ ಬಳಕೆಯನ್ನು ಬಹುತೇಕ  ಕೈ ಬಿಟ್ಟ  ‘ನಾನ್  ಪ್ರಾಕ್ಟಿಸಿಂಗ್ ಕನ್ನಡಿಗರ’  ‘ಕನ್ನಡ ಮಕ್ಕಳ’ ಸಂಖ್ಯೆ  ಗಣನೀಯವಾಗಿ ಹೆಚ್ಚುತ್ತಿದೆ  ನವೆಂಬರ್ ಮಾಸದ ರಾಜ್ಯೋತ್ಸವ ಆಚರಣೆಗಳು ಕನ್ನಡದ ಅಸ್ಮಿತೆ ಮತ್ತು ಆತ್ಮಾಭಿಮಾನವನ್ನು ಬೆಳೆಸುವ, ಕಾಪಿಡುವ ದಿಕ್ಕಿನಲ್ಲಿ ಒಂದಿಷ್ಟು ಚಿಂತಿಸುವ ಆತ್ಮ ನಿರೀಕ್ಷಣೆಯ ಕಾಲವಾಗಿದೆ.

ಕರ್ನಾಟಕದ ಹೊರಗಡೆ  ರಾಷ್ಟ್ರೀಯ ಸೇವಾ ಯೋಜನೆ ಯ ಪ್ರಾದೇಶಿಕ ಅಧಿಕಾರಿಯಾಗಿ  ಹನ್ನೆರಡು ವರ್ಷಗಳ ಕಾಲ ಕೆಲಸ ಮಾಡಿ, ದೇಶದ  ಉದ್ದಗಲಕ್ಕೂ ನಡೆದ ಸಭೆ, ಶಿಬಿರ, ಸಮಾರಂಭಗಳಲ್ಲಿ ಭಾಗವಹಿಸಿದ ನನ್ನ ಅನ್ಯ ಭಾಷಿಕ ಅನುಭವಗಳನ್ನು ಮಾತ್ರ  ಇಲ್ಲಿ ಹಂಚಿಕೊಳ್ಳ ಬಯಸುತ್ತೇನೆ

ಕನ್ನಡದ ಸಂದರ್ಭದಲ್ಲಿ ಹೇಳುವುದಾದರೆ  ಇಂಗ್ಲಿಷ್ ಒಂದೇ ಸಾಲದೆಂಬಂತೆ,  ಹಿಂದಿ  ಸೇರಿದಂತೆ ನೆರೆ  ರಾಜ್ಯಗಳ   ಭಾಷೆಗಳಾದ ಮರಾಟಿ , ತಮಿಳು ,ತೆಲುಗು ಮತ್ತು ಮಲೆಯಾಳಂ ಗಳ  ದಬ್ಬಾಳಿಕೆ ಯನ್ನೂ ಸಹಿಸಿಕೊಳ್ಳ ಬೇಕಾಗಿದೆ  ಮತ್ತು ಎದುರಿಸಬೇಕಿದೆ . ದೈನಂದಿನ ಜೀವನಕ್ಕೆ ಅನಿವಾರ್ಯ ಅನಿಸದ ಹೊರತು ಯಾರೂ ಹೊಸ ಭಾಷೆ ಕಲಿಯುವ ಉತ್ಸಾಹ ತೋರುವುದಿಲ್ಲ . ನಮಗೇ ಬೇಡವಾದದ್ದು  ಉಳಿದವರಿಗೇಕೆ ?

ಪುಣೆ ಯಲ್ಲಿ  ಪಿ .ಎಂ . ಟಿ.  ಅಥವಾ ಪಿ . ಸಿ. ಎಂ.ಟಿ. ಬಸ್ ಹತ್ತಿ  ನಿರ್ವಾಹಕನಿಗೆ ’ ಕಾರ್ಪೋರೇಶನ್’ ಗೆ ಟಿಕೆಟ್ ಕೇಳಿ .ಆತ  ನಿಮ್ಮನ್ನು ಕೆಕ್ಕರಿಸಿ ನೋಡುತ್ತಾ ನಯವಿಲ್ಲದೇ  ಮ. ನ .ಪಾ . ಕಾ ? ( ಮಹಾ ನಗರ್ ಪಾಲಿಕಾ ನಾ  ) ಎಂದು ಕೇಳುತ್ತಾನೆ. ಈಗ ನೀವೊಂದು ಮರಾಟಿ ಪದ ಕಲಿತಿರಿ. ನಿರ್ವಾಹಕನ ಆತಿಥ್ಯದ ಅನುಭವವೂ ಆಯಿತು .ಮತ್ತೆ ನೀವೆಂದೂ’ ಕಾರ್ಪೋರೇಶನ್’ ಅನ್ನುವ ಧೈರ್ಯ ಮಾಡಲಾರಿರಿ.

ಹಾಗೇ ಬಸ್ಸಿನಲ್ಲಿ  ಓಡಾಡುವಾಗ  ಉತ್ರ ,ಟಿಕೆಟ್ ಕಾಡಲಿ ಕಾ , ಸರ್ಕ , ಪುಡೇ ಝಾ, ಘ್ಯಾ,  ಧ್ಯಾ , ಥಂಬಾ, ಮಾಘೇ ,ಬಸ, ಕುಟೆ, ಕುಟೂನ್ – ಕೇಳುತ್ತಾ ಕೇಳುತ್ತಾ ಮೂರು ದಿನದ ನಿಮ್ಮ ಬಸ್ ಪ್ರಯಾಣದಲ್ಲಿ ಸಾಕಷ್ಟು ಮರಾಟಿ ಕಲಿತುಬಿಡುತ್ತೀರಿ. ದಿನಸಿ ಅಂಗಡಿಗೆ ಹೋಗಿ  ‘ ರೈಸ್ ಟೂ ಕೆ ಜಿ’ . ಅನ್ನಿ .ಅವನು ಅಕ್ಕಿಯನ್ನು ತೋರಿಸಿ ತಂಡೂಲ್ ದೋ ಕಿಲೋ ಕಾ ?  ಎಂದು ಕೇಳಿ  ನಿಮಗೆ ಮರಾಟಿ ಕಲಿಸುತ್ತಾನೆ. ನಿಮಗೆ ಮತ್ತೊದು ಮರಾಟಿ ಪದ ಬಂದಂತಾಯಿತು .

 

ಇನ್ನೊಂದು ಅಷ್ಟೇನೂ ಒಳ್ಳೆಯದಲ್ಲದ  ಅನುಭವ . ಮುಂಬೈ ನ ಮಲಾಡ್ ನ ರಸ್ತೆಯ ಬದಿ ಅಂಗಡಿಯಲ್ಲಿ ಕಣ್ಣಿಗೆ ಬಿದ್ದ ‘ಕರ್ನಾಟಕ ಮಲ್ಲ ‘ ಕನ್ನಡ ದೈನಿಕವನ್ನು ಕೊಳ್ಳಲು ಕೇಳುತ್ತೇನೆ , ಅಂಗಡಿಯ ಮರಾಟಿ  ಒಡತಿ ನನ್ನನ್ನು  ನೋಡುತ್ತಾ ಅವಳ ಮಗಳಿಗೆ ಹೇಳುತ್ತಾಳೆ ‘ ತಿಥೆ ಪಹಾ. ತೇವಡಚಾ ಮದ್ರಾಸಿ ಪೇಪರ್ ಬಾಹೆರ್ ಕಾಡೂನ್ ಇಥೆ ಫೆಕೂನ್ ಧ್ಯಾ  ( ಅಲ್ನೋಡು ಅಲ್ಲಿರೋ ಮದ್ರಾಸಿ ಪೇಪರ್ ನ ಹೊರಗೆ ತೆಗೆದು ಇಲ್ಲಿ ಬಿಸಾಡು  ಅನ್ನುತ್ತಾ ಳೆ .)  ಕನ್ನಡಿಗರ ಬಗ್ಗೆ ಅಸಹನೆ ಅಲ್ಲಿ ಬೆಳೆಸಿಕೊಂಡು ಬಂದ ಒಂದು ಪ್ರವೃತ್ತಿ ಆಗಿದೆ . ೧೯೬೬-೬೭ ರಲ್ಲಿ ಮುಂಬೈ ನ ರಸ್ತೆಗಳಲ್ಲಿ ಲುಂಗಿ ಉಟ್ಟು ಓಡಾಡಲು ಬಹಳ ಧೈರ್ಯ ಬೇಕಿತ್ತು .

 

ಮಹಾರಾಷ್ಟ್ರದಲ್ಲಿ ಯಾರೇ ಆಡಳಿತಕ್ಕೆ ಬರಲಿ ಅವರೆಲ್ಲರೂ ಹೃದಯಾಂತರಾಳದಲ್ಲಿ ಶಿವಸೈನಿಕರೇ ಆಗಿರುತ್ತಾರೆ. ಮಹಾರಾಷ್ಟ್ರದ ಅಸ್ಮಿತೆ  ಮತ್ತು ಹಿತರಕ್ಷಣೆ ಅಲ್ಲಿನ ಎಲ್ಲ ಪಕ್ಷಗಳ  ಅಘೋಷಿತ ‘ಅಜೆಂಡಾ’ ಆಗಿರುತ್ತದೆ .

 

ಮಹಾರಾಷ್ಟ್ರದಲ್ಲಿ ಅಥವಾ ಗುಜರಾತ್ ನಲ್ಲಾಗಲೀ  ಅಲ್ಲಿನ ಸಾಹಿತ್ಯ ಪರಿಷತ್ ಹೊರತು ಪಡಿಸಿ ಬೇರೇ  ಯಾವುದೇ ಭಾಷಾ ಅಭಿವೃದ್ಧಿ ಪ್ರಾಧಿಕಾರ ,ರಕ್ಷಣಾವೇದಿಕೆ ,ಕಾವಲು ಸಮಿತಿ , ಇಲಾಖೆ  ಅಥವಾ  ಶಕ್ತಿ ಕೇಂದ್ರ ವಾಗಲಿ ಇರುವುದು ನನಗೆ ತಿಳಿದಿಲ್ಲ . ಆ ಎಲ್ಲಾ ಕೆಲಸಗಳನ್ನೂ  ಅಲ್ಲಿನ ಭಾಷಿಕರೇ  ‘ನೋಡಿ’ ಕೊಳ್ಳುತ್ತಾರೆ.ಕೇಂದ್ರ ಸರ್ಕಾರದ ಎನ್. ಎಸ್. ಎಸ್. ಸಲಹಗಾರನಾಗಿ  ಮಹಾರಾಷ್ಟ್ರ ದಲ್ಲಿ  ಕಾರ್ಯ ನಿರ್ವಹಿಸುತ್ತಿರುವಾಗ  ಎಲ್ಲ  ವಿಶ್ವ ವಿದ್ಯಾಲಯಗಳಲ್ಲೂ ಮರಾಠಿಯಲ್ಲಿ ಸಭೆ ನಡೆಯುತ್ತಿತ್ತು.  ಹಾಗೊಂದು  ಸಭೆಯಲ್ಲಿ ಪುಣೆ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ. ಶ್ರೀಧರ್ ಗುಪ್ತೆ ‘ ಅಪಣ ಅಂಚೆ ಶೇಜಾರಿಲ ರಾಜ್ಯಾತಿಲ ಅಹಾತ ತುಮ್ಹಾಲ ಮರಾಠಿ  ಮಾಹಿತ ಅಸೇಲ ಪಾಯಿಜೆ’  (ನೀವು ನಮ್ಮ  ನೆರೆರಾಜ್ಯದಿಂದ ಬಂದವರು. ನಿಮಗೆ  ಮರಾಠಿ ಗೊತ್ತಿರಲೇ ಬೇಕು) ಎಂದು

ತೀರ್ಮಾನಿಸಿಬಿಟ್ಟರು .ಕನ್ನಡಿಗರ ಬಗ್ಗೆ ಅದೆಂಥ ಧೃಡ  ವಿಶ್ವಾಸ !      ಗುಜರಾತ್ ನಲ್ಲಿಯೂ ಅಲ್ಲಿನ ಎನ್.ಎಸ್.ಎಸ್. ಪ್ರಾದೇಶಿ ಕ ಕೇಂದ್ರದಲ್ಲಿ  ಅಧಿಕಾರ ವಹಿಸಿಕೊಂಡ ಕೂಡಲೇ ಅಂದಿನ ಶಿಕ್ಷಣ ಮಂತ್ರಿ ಶ್ರೀ  ನರಹರಿ ಅಮೀನ್ ರವರನ್ನು ಭೇಟಿ ಯಾಗಲು ಹೋದಾಗ  ಅವರು ಸೌಜನ್ಯದಿಂದಲೇ           ’ಹೂಂ ಜಾಣೂಂಚು ಕೆ ತಮೆ ಗುಜರಾತಿ  ಬೊಲಿ ಸಕತಾ ನಥಿ. ಪರಂತು ಹೂಂ ಪಕ್ತ ತಮಣೆ ಗುಜರಾತಿಮಾ ಜ ಬೋಲಿ ಸಕುಂಚು.( ನಿಮಗೆ ಗುಜರಾತಿ ಗೊತ್ತಿಲ್ಲ ಎಂದು ಗೊತ್ತಾಯಿತು. ಆದರೆ ನಾನು  ನಿಮಗೆ ಗುಜರಾತಿನಲ್ಲಿ ಮಾತ್ರ ಮಾತನಾಡಬಲ್ಲೆ) ಅಂದರು. ಅಲ್ಲಿದ್ದ ನಾಲ್ಕು ವರ್ಷಗಳಲ್ಲಿ ಅಲ್ಲಿನ  ‘ಗುಜರಾತ್ ಸಮಾಚಾರ್ ‘ ಓದ ಬಲ್ಲವನಾಗಿದ್ದೆ

ಆ ಎರಡೂ ರಾಜ್ಯಗಳೂ ನನಗೆ  ಅಲ್ಲಿನ ಭಾಷೆ ಕಲಿಯಬೇಕಾದ  ” ಅನಿವಾರ್ಯತೆ “  ಹುಟ್ಟಿಸಿದವು.

ಆದರೆ ಕೇರಳದಲ್ಲಿನ ಅನುಭವವೇ ಬೇರೆ. ಕೇರಳ ವಿಶ್ವ ವಿದ್ಯಾಲಯದ ಎನ್. ಎಸ್ .ಎಸ್ . ಸಂಯೋಜಕರ ಬಳಿ ಮಲೆಯಾಳಂ ಕಲಿಯುವ ಆಸಕ್ತಿಯನ್ನ ಹೇಳಿದಾಗ ಅವರು ಹೇಳಿದ ಮಾತು ಇಂದಿಗೂ ನಮಗೊಂದು  ಪಾಠವದೀತು ಅನಿಸುತ್ತದೆ     ‘ ನೀವು ಇಂಗ್ಲೀಷ್ ನಲ್ಲಿಯೇ ಮಾತನಾಡಿ . ಮಲೆಯಾಳಂ ಭಾಷೆಯನ್ನು  ಕಲಿಯುವ ಅಗತ್ಯ ಇಲ್ಲ.  ಅದು ನಾವು ನಮಗಾಗಿ ಮಾಡಿಕೊಂಡ ಭಾಷೆ .ನಮ್ಮ ಸಂಸ್ಕೃತಿ , ನುಡಿಗಟ್ಟು, ಹಬ್ಬ ,ಉತ್ಸವ ,ನಾಟಕ, ನರ್ತನ, ಕಲೆ ಸಾಹಿತ್ಯ    ಆಚಾರ,  ಆಹಾರ, ವಿಚಾರ,  ಗುಟ್ಟು, ಗೌಪ್ಯ ಗಳನ್ನು ಕಾಪಾಡಿಕೊಳ್ಳಲು ಸೃಷ್ಟಿಸಿಕೊಂಡದ್ದು. ಅದನ್ನೇ  ಊಟ ಹಾಗೂ  ಉಸಿರಾಗಿಸಿಕೊಂಡಿರುವ ಕೋಟ್ಯಾಂತರ ಜನರಿದ್ದೇವೆ ಅಷ್ಟೇ ಸಾಕು.’ ಅಂದದ್ದು   ಪ್ರತಿಯೊಂದು ಭಾಷಯೂ ತನ್ನ ಅರ್ಥವನ್ನ ತನ್ನದೇ ಆದ ಸಂಸ್ಕೃತಿ ಯಿಂದ ಪಡೆದುಕೊಳ್ಳುತ್ತದೆ ಅನ್ನುವ ಮಾತನ್ನು ಸಮರ್ಥಿಸುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಮಲೆಯಾಳಿ ಮಾರ್ದನಿಸದ ಜಾಗ ಹುಡುಕುವುದು ಕಷ್ಟ . ಹೋಗಲಿ ಬಿಡಿ. ಅವರೆಲ್ಲಿ, ನಾವೆಲ್ಲಿ .

ನನ್ನ ಎಲ್ಲ ಇತಿ ಮಿತಿ ಗಳ ನಡುವೆಯೂ ಈ ಮೂರೂ ರಾಜ್ಯಗಳಲ್ಲಿಯೂ ನನಗೆ ಅದ್ಭುತ ಸಹಕಾರ ಸಿಕ್ಕಿತು .     ಆದರೆ ೨೦೦೧ ರಿಂದ ನನ್ನ ನಿವೃತ್ತಿಯವರೆಗೂ ೨೦೦೯ ರಲ್ಲಿನ ನನ್ನ ಕರ್ನಾಟಕದ ಅನುಭವ ಮೇಲಿನ ಎಲ್ಲಕ್ಕೂ ತದ್ವಿರುದ್ಧ ವಾದದ್ದು  ಬೇಸರದ ಸಂಗತಿ.  ಕಾಲೇಜುಗಳಲ್ಲಿ ಎನ್.ಎಸ್.ಎಸ್.  ಕಾರ್ಯಕ್ರಮ ಅಧಿಕಾರಿಗಳನ್ನು ಮತ್ತು ಸ್ವಯಂ ಸೇವಕರನ್ನು ಕುರಿತು ಇಂಗ್ಲಿಷ್ ನಲ್ಲಿ ಮಾತನಾಡಬೇಕೆಂದು ಬಂದ ಕೋರಿಕೆಯನ್ನು ‘ ನನಗೆ ಅದಕ್ಕೆ ಅವಶ್ಯವಾದಷ್ಟು ಇಂಗ್ಲಿಷ್ ಬರುವುದಿಲ್ಲ’ ಎಂದು ವಿನಯ ಪೂರ್ವಕ  ಹೇಳಿಬಿಡುತ್ತಿದ್ದೆ.  ಮಹಾತ್ಮಾಗಾಂಧಿ ಜೀ ಅವರು  ‘ನನ್ನ ದೇಶ ಬಾಂಧವರನ್ನು ಕುರಿತು  ಅವರದೂ ಅಲ್ಲದ, ನನ್ನದೂ ಅಲ್ಲದ , ನನ್ನ ದೇಶದ್ದೂ ಅಲ್ಲದ ಬೇರೊಂದು ಭಾಷೆಯಲ್ಲಿ ಮಾತನಾಡ ಬೇಕಾಗಿ  ಬಂದಾಗಲೆಲ್ಲಾ  ನನಗೆ ಅತೀವ ಅಪಮಾನ ಹಾಗೂ ಲಜ್ಜೆ ಅನಿಸುತ್ತದೆ’ ಅನ್ನುವ ಮಾತು ಸ್ವಾತಂತ್ರ್ಯ ಬಂದು  ೭೩ ವರ್ಷಗಳೇ ಕಳೆದರೂ ಬದಲಾಗದ ವ್ಯಥೆಯಾಗಿ ಉಳಿದಿದೆ .

ನನ್ನ ಖಾತೆ ಇರುವುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಶಾಖೆ ಯೊಂದರಲ್ಲಿ . ಅಲ್ಲಿನ ಸಿಬ್ಬಂದಿ ಎಲ್ಲರೂ ಮಹಿಳೆಯರು ಮತ್ತು  ಕನ್ನಡ ಬಾರದವರು .  ಸ್ಥಳೀಯ ಭಾಷಾ ಜ್ಞಾನದ ಅಗತ್ಯತೆಯನ್ನು ಮನಗಾಣಿಸುವ ಉದ್ದೇಶದಿಂದ ನಾನು  ಚೆಕ್ಕಿನಲ್ಲಿ ಬೇಕಂತಲೇ ಒಂದು ರೂ ಕಡಿಮೆ ಮಾಡಿ   ‘ಸ್ವಂತಕ್ಕೆ’   ‘ ಒಂಭತ್ತು ಸಾವಿರದ ಒoಭೈನೂರಾ ತೊಂಭತ್ತ ಒಂಭತ್ತು ರೂಪಾಯಿಗಳು ಮಾತ್ರ ‘ ಎಂದು ಬರೆದು ಕೊಟ್ಟು ಕಾಯುತ್ತಾ ಕುಳಿತೆ . ಸ್ವಲ್ಪ ಸಮಯದಲ್ಲೇ  ಕೌಂಟರ್ ನಲ್ಲಿ ಸಂಚಾಲನ ಉಂಟಾಯಿತು .  ಕಡೆಗೆ ಚೆಕ್ ಹಿಡಿದುಕೊಂಡು ಕೌಂಟರ್ ನ ಮಹಿಳೆ ಮ್ಯಾನೇಜರ್ ಕ್ಯಾಬಿನ್ ಗೆ ಹೋದಳು. ಮ್ಯಾನೇಜರ್ ಹಿಂದೆ ಮುಂದೆ ತಿರುಗಿಸುತ್ತಾ  “ ಏ ಕಿಸನೇ ಲಿಖಾ ಹೈ, ಸಿಗ್ನೇಚರ್  ತೋ  ಅಂಗ್ರೇಜೀ ಮೇ ಕಿಯಾ  ಹಾಯ್, ಚೆಕ್ ಭೀ ಅಇಸೆ ಲಿಖ್ ಸಕ್ತಾಥ ನಾ ‘ ಅಂತ ಗೊಣಗಿದಳು . ನನ್ನನ್ನು ಕ್ಯಾಬಿನ್ ಗೆ  ಕರೆದು ಕೂರಿಸಿ ಕೇಳಿದಾಗ ನನ್ನ ಉದ್ದೇಶ ವಿವರಿಸಿದೆ.  ಆಕೆ ವಿನಮ್ರವಾಗಿ  ‘ಜಲ್ದಿಸೆ ಜಲ್ದಿ ಮೇ ಕನ್ನಡ ಶೀಕ್ಲೂಂಗಿ’ ಅನ್ನುತ್ತಾ ತಡವಾದ ಬಗ್ಗೆ ವಿಷಾದಿಸಿದಳು.

ನಾನು ಕ್ಯಾಬಿನ್ ನಿಂದ ಹೊರ ಬರುತ್ತಿದ್ದಂತೆ ನಾನೇನೋ ಅಪರಾಧ ಮಾಡಿದ್ದೇನೆ ಅನ್ನುವಂತೆ  ಅಲ್ಲಿದ್ದ ಕೆಲವರು ಏನಾಯ್ತು ಸಾರ್ ಅಂದರು . ಕನ್ನಡಕ್ಕಾಗಿ ಹೀಗೆ ಮಾಡಬೇಕಾಗಿ ಬಂದದ್ದನ್ನು ಹೇಳಿದೆ. ಕನ್ನಡ ತಾಯಿಯ ಪುಣ್ಯ ಚೆನ್ನಾಗಿತ್ತು ಅನಿಸುತ್ತದೆ . ಮುಂದಿನ ಐದಾರು ದಿನಗಳಲ್ಲಿ ಕನ್ನಡದಲ್ಲಿ  ‘ ಚೆಕ್’ ‘  ‘ ಪೆ ಇನ್ ಸ್ಲಿಪ್’   ಆರ್. ಟಿ. ಜಿ. ಎಸ್.  ಗಳ ಸಂಖ್ಯೆ ಸ್ವಲ್ಪ ಹೆಚ್ಚಿತು . ಮ್ಯಾನೇಜರ್ ತತ್ಕಾಲಕ್ಕೆ ಬೇರೆ ಶಾಖೆಯಿಂದ ಇಲ್ಲಿಗೆ ಕನ್ನಡ ಬಲ್ಲ ಒಬ್ಬರನ್ನು ಡೆಪ್ಯೂಟ್  ಮಾಡುವಂತೆ ಬರೆದ ಪರಿಣಾಮ ಒಬ್ಬ ಕನ್ನಡಿಗ ಸ್ವಲ್ಪ ಕಾಲವಾದರೂ ಈ ಶಾಖೆಗೆ ಬರುವಂತೆ ಆಯಿತು. ರಾಷ್ಟ್ರೀಕರಣಗೊಂಡ ಕೇಂದ್ರ ಸರಕಾರದ ಎಲ್ಲ    ಬ್ಯಾಂಕ್ ಗಳಲ್ಲೂ ಹಿಂದಿ ಅನುಷ್ಠಾನಕ್ಕಾಗಿ ಹಿಂದಿ ಆಫೀಸರ್ ಗಳನ್ನು  ತಪ್ಪದೆ ನೇಮಕ ಮಾಡಿಕೊಳ್ಳಲಾಗುತ್ತಿದೆ .  ನನ್ನ ಈ ಪ್ರಯೋಗವನ್ನು ಎಲ್ಲ ಕನ್ನಡಿಗರೂ  ನಿರಂತರವಾಗಿ ಮಾಡಿದ್ದೇ  ಆದರೆ ಅದರ  ಪರಿಣಾಮವನ್ನು ಊಹಿಸಿಕೊಳ್ಳಿ !

 

ಡಾ . ಹೆಚ್ .ಎಸ್. ಸುರೇಶ್ ೯೪೪೮೦೨೭೪೦೦

 

 

 

Please follow and like us:
error