ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ರಾಜೀನಾಮೆ

15 ತಿಂಗಳ ಕಾಂಗ್ರೆಸ್ ಸರಕಾರ ಪತನ

ಭೋಪಾಲ್, ಮಾ.20: ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಶುಕ್ರವಾರ ಮಧ್ಯಾಹ್ನ ಕರೆದ ಪತ್ರಿಕಾಗೋಷ್ಠಿಯಲ್ಲಿ ರಾಜೀನಾಮೆ ನಿರ್ಧಾರ ಪ್ರಕಟಿಸಿದರು. ಈ ಮೂಲಕ ಕಳೆದ 15 ತಿಂಗಳುಗಳ ಕಾಲ ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಪತನಗೊಂಡಿದೆ.

ಶುಕ್ರವಾರ ಸಂಜೆ 5 ಗಂಟೆಯೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಕಮಲನಾಥ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. 22 ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದಾಗಿ ಬಹುಮತದ ಕೊರತೆ ಎದುರಿಸುತ್ತಿದ್ದ ಮುಖ್ಯಮಂತ್ರಿ ಕಮಲನಾಥ್ ಬಹುಮತ ಸಾಬೀತಿಗೆ ಮೊದಲೇ ರಾಜೀನಾಮೆ ಸಲ್ಲಿಸಿದ್ದಾರೆ.

ನಾವು ಒಂದೂವರೆ ವರ್ಷ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ 15 ವರ್ಷಗಳ ಕಾಲ ರಾಜ್ಯವನ್ನು ಆಳಿದ್ದ ಬಿಜೆಪಿ ನಮ್ಮ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿತ್ತು. ನಮ್ಮ ಪಕ್ಷದ 22 ಶಾಸಕರನ್ನು ಬೆಂಗಳೂರಿನ ಹೊಟೇಲ್‌ನಲ್ಲಿ ಒತ್ತೆ ಸೆರೆಯಲ್ಲಿ ಇಡಲಾಗಿತ್ತು. ನಾವು ರಾಜ್ಯದಲ್ಲಿ ಮಾಫಿಯಾಗಳ ವಿರುದ್ಧ ಹೋರಾಟ ನಡೆಸಿದ್ದೆವು. ಕಠಿಣ ಕ್ರಮ ಕೈಗೊಂಡಿದ್ದೆವು. ಇದು ಬಿಜೆಪಿಗೆ ಇಷ್ಟವಾಗಲಿಲ್ಲ. ಬಿಜೆಪಿಗೆ ನಮ್ಮ ಸಾಧನೆಯನ್ನು ಅಡಗಿಸಿಡಲು ಸಾಧ್ಯವಿಲ್ಲ. ನಾವು ಕಳೆದ 15 ತಿಂಗಳುಗಳ ಕಾಲ ರಾಜ್ಯದ ಅಭಿವೃದ್ಧಿಗಾಗಿ ಕಠಿಣವಾಗಿ ಶ್ರಮಿಸಿದ್ದೆವು. ನಮ್ಮ ಸರಕಾರ ಸುಳ್ಳು ಭರವಸೆ ನೀಡಿರಲಿಲ್ಲ. ನಮಗೆ ಮತದಾರರು ಐದು ವರ್ಷಗಳ ಜನಾದೇಶ ನೀಡಿದ್ದರು. ಆದರೆ, ಮಧ್ಯಪ್ರದೇಶದ ಜನತೆಗೆ ಬಿಜೆಪಿ ದ್ರೋಹ ಎಸಗಿದೆ. ಕಾಂಗ್ರೆಸ್ ಸರಕಾರದಲ್ಲಿ ಮಧ್ಯಪ್ರದೇಶ ಅಭಿವೃದ್ಧ್ದಿಯಾಗುತ್ತಿರುವುದನ್ನು ಸಹಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಬಿಜೆಪಿ ಪ್ರಜಾಪ್ರಭುತ್ವವನ್ನು ಕಗ್ಗೊಲೆಗೈದಿದೆ ಎಂದು ಕಮಲನಾಥ ಆರೋಪಿಸಿದರು.

 

Please follow and like us:
error