ಮಧ್ಯಪ್ರದೇಶ, ಉತ್ತರಪ್ರದೇಶದಲ್ಲಿ ಅಪಘಾತ: 14 ಕಾರ್ಮಿಕರ ಸಾವು

ಭೋಪಾಲ್,  : ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದಲ್ಲಿ 24 ಗಂಟೆಯೊಳಗೆ ನಡೆದ ಎರಡು ಪ್ರಮುಖ ರಸ್ತೆ ಅಪಘಾತದಲ್ಲಿ ವಲಸೆ ಕಾರ್ಮಿಕರು ಮೃತಪಟ್ಟಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಎರಡು ರಸ್ತೆ ಅಪಘಾತದಲ್ಲಿ ಒಟ್ಟು 14 ಕಾರ್ಮಿಕರು ಮೃತಪಟ್ಟಿದ್ದು, ಮಧ್ಯಪ್ರದೇಶದ ಗುನಾದಲ್ಲಿ 8 ಹಾಗೂ ಉತ್ತರಪ್ರದೇಶದ ಮುಝಾಫರ್‌ನಗರ್‌ನಲ್ಲಿ ಆರು ಕಾರ್ಮಿಕರು ಮೃತಪಟ್ಟಿದ್ದಾರೆ.

ಮಧ್ಯಪ್ರದೇಶದ ಗುನಾ ನಗರದಲ್ಲಿ ಗುರುವಾರ ಬೆಳಗ್ಗಿನ ಜಾವ ವೇಗವಾಗಿ ಬಂದ ಬಸ್‌ವೊಂದು ಟ್ರಕ್‌ವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ 8 ವಲಸೆ ಕಾರ್ಮಿಕರು ಮೃತಪಟ್ಟರೆ, 54ಕ್ಕೂ ಅಧಿಕ ಕಾರ್ಮಿಕರಿಗೆ ಗಾಯವಾಗಿದೆ.

ಉತ್ತರಪ್ರದೇಶದಲ್ಲಿ ವೇಗವಾಗಿ ಸಾಗುತ್ತಿದ್ದ ಸರಕಾರಿ ಬಸ್ ಕಾರ್ಮಿಕರ ಗುಂಪಿನ ಮೇಲೆ ಹರಿದುಹೋದ ಪರಿಣಾಮ ಆರು ಕಾರ್ಮಿಕರು ಮೃತಪಟ್ಟಿದ್ದಾರೆ.ಟ್ರಕ್‌ನಲ್ಲಿ ಸುಮಾರು 70 ಕಾರ್ಮಿಕರು ಮಹಾರಾಷ್ಟ್ರದಿಂದ ಉತ್ತರಪ್ರದೇಶಕ್ಕೆ ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ 3 ಗಂಟೆ ಸುಮಾರಿಗೆ ಗುನಾದ ಬೈಪಾಸ್ ರೋಡ್‌ನಲ್ಲಿ ಬಸ್ ಹಾಗೂ ಟ್ರಕ್ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ. ಹೆಚ್ಚಿನ ಕಾರ್ಮಿಕರು ಉತ್ತರಪ್ರದೇಶದ ಉನ್ನಾವೊ ಜಿಲ್ಲೆಯವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ಗುನಾದಿಂದ ಅಹಮದಾಬಾದ್‌ಗೆ ತೆರಳುತ್ತಿತ್ತು. ಬಸ್ಸಿನಲ್ಲಿ ಕೇವಲ ಚಾಲಕ ಮತ್ತು ಕ್ಲೀನರ್ ಮಾತ್ರ ಇದ್ದರು.

ಬುಧವಾರ ರಾತ್ರಿ ನಡೆದ ಮತ್ತೊಂದು ದುರಂತ ಘಟನೆಯಲ್ಲಿ ಮುಝಾಫರ ನಗರ ಜಿಲ್ಲೆಯ ಹೆದ್ದಾರಿಯ ಟೋಲ್‌ಪ್ಲಾಝಾ ಬಳಿ ನಿಯಂತ್ರಣ ಕಳೆದುಕೊಂಡಿದ್ದ ಉತ್ತರ ಪ್ರದೇಶದ ಸರಕಾರಿ ಬಸ್‌ವೊಂದು ಪಂಜಾಬ್‌ನಿಂದ ಬಿಹಾರದ ಗೋಪಾಲ್‌ಗಂಜ್‌ಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ 6 ಜನ ಕಾರ್ಮಿಕರ ಮೇಲೆ ಹರಿದಿದೆ. ಆರು ಜನ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದರೆ, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಚಾಲಕ ಖಾಲಿ ಬಸ್‌ನ್ನು ಚಲಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Please follow and like us:
error