fbpx

ಮಧ್ಯಂತರ ಚುನಾವಣೆ ನಡೆದರೆ ಕಾಂಗ್ರೆಸ್ ಅಧಿಕಾರಕ್ಕೆ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ನ. 25: ‘ಯಡಿಯೂರಪ್ಪರ ಅನೈತಿಕ ಸರಕಾರ ಉಪಚುನಾವಣೆಯ ಫಲಿತಾಂಶದ ನಂತರ ಪತನವಾಗಿ, ಮಧ್ಯಂತರ ಚುನಾವಣೆ ನಡೆದರೆ ನೂರಕ್ಕೆ ನೂರು ನಮ್ಮ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತದೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಬಿಜೆಪಿಯ ರೆಸಾರ್ಟ್ ರಾಜಕಾರಣ, ಕುದುರೆ ವ್ಯಾಪಾರ ನೋಡಿ ರಾಜ್ಯದ ಜನ ಬೇಸತ್ತಿದ್ದಾರೆ’ ಎಂದು ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದ್ದಾರೆ.

‘ಮಹಾರಾಷ್ಟ್ರದಲ್ಲಿ ಮಧ್ಯರಾತ್ರಿ ರಾಷ್ಟ್ರಪತಿ ಆಡಳಿತ ವಾಪಾಸು ತೆಗೆದುಕೊಂಡು, ಬೆಳಗಾಗುವುದರೊಳಗಾಗಿ ಬಿಜೆಪಿಯವರು ಬಹುಮತ ಇಲ್ಲದ ಸರಕಾರ ರಚನೆ ಮಾಡಿರುವುದು ಪ್ರಜಾಪ್ರಭುತ್ವವನ್ನು ಅಣಕ ಮಾಡಿದಂತಿದೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಬಾಗಿಲು ಹಾಕಿದ್ದೇ ಮೋದಿ ಸಾಧನೆ: ‘ದೇಶಕ್ಕಾಗಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಲೇ ಕಾಂಗ್ರೆಸ್ ಸ್ಥಾಪಿಸಿದ ಬಿಎಸ್‌ಎನ್‌ಎಲ್, ಬಿಇಎಂಎಲ್, ಎಚ್‌ಎಂಟಿ, ಏರ್ ಇಂಡಿಯಾ ಸಂಸ್ಥೆಗಳನ್ನು ಒಂದೊಂದಾಗಿ ಬಾಗಿಲು ಹಾಕಿಸುತ್ತಿದ್ದಾರೆ. ಹೀಗೇ ಆದರೆ ಕಾಂಗ್ರೆಸ್ ಸ್ಥಾಪಿಸಿದ ಸಂಸ್ಥೆಗಳ ಬಾಗಿಲು ಹಾಕಿಸಿದ್ದೊಂದೇ ಪ್ರಧಾನಿ ಮೋದಿ ಸಾಧನೆಯಾಗಲಿದೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಟೀಕಿಸಿದ್ದಾರೆ.

Please follow and like us:
error
error: Content is protected !!