ಮಂಗ, ಹಸು,ಸಿಂಹಗಳನ್ನು ಸಂಸ್ಕೃತ & ತಮಿಳಿನಲ್ಲಿ ಮಾತನಾಡುವಂತೆ ಮಾಡಬಲ್ಲೆ -ನಿತ್ಯಾನಂದನ ಹೊಸ ಪವಾಡ

ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಹೊಸ ಪವಾಡ ಕೇಳಿ ನಕ್ಕುಬಿಡಿ..!

ಹೊಸದಿಲ್ಲಿ, ಸೆ.20: ಭಕ್ತೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಇದೀಗ ಮತ್ತೊಂದು ವಿವಾದ ಎಬ್ಬಿಸಿದ್ದಾರೆ. ಮಂಗ, ಹಸು ಹಾಗೂ ಸಿಂಹಗಳನ್ನು ಕೂಡಾ ಸಂಸ್ಕೃತ ಮತ್ತು ತಮಿಳಿನಲ್ಲಿ ಮಾತನಾಡುವಂತೆ ಮಾಡಬಲ್ಲೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾರೆ.

ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೊಸ ಲುಕ್‌ನೊಂದಿಗೆ ಕಾಣಿಸಿಕೊಂಡಿರುವ ನಿತ್ಯಾನಂದ, ಪ್ರೇಕ್ಷಕರಿಗೆ ಈ ವಿಚಿತ್ರ ಭರವಸೆ ನೀಡಿದಾಗ, ಪ್ರೇಕ್ಷಕರು ಪ್ರಚಂಡ ಕರತಾಡನದೊಂದಿಗೆ ಸ್ವಾಗತಿಸಿದರು.

“ನಾನು ಪ್ರಾತ್ಯಕ್ಷಿಕೆ ಮಾಡುತ್ತೇನೆ.. ಮಂಗಗಳು ಮತ್ತು ನಾವು ಹೊಂದಿರುವ ಹಲವು ಅಂಗಗಳನ್ನು ಹೊಂದಿದರ ಇತರ ಕೆಲ ಪ್ರಾಣಿಗಳಲ್ಲಿ ಕೂಡಾ ಅತೀಂದ್ರಿಯ ಸಂಶೋಧನೆ ಮೂಲಕ, ಈ ಅಂಗಾಂಗಗಳು ಬೆಳೆಯುವಂತೆ ಮಾಡಬಹುದು. ಅದನ್ನು ಸಾಧಿಸಿ ತೋರಿಸುತ್ತೇನೆ, ವೈಜ್ಞಾನಿಕ, ವೈದ್ಯಕೀಯ ಪರೀಕ್ಷೆ ಮತ್ತು ಸಂಶೋಧನೆ ಮೂಲಕ ದೃಢಪಡಿಸುತ್ತೇನೆ” ಎಂದು ಹೇಳುತ್ತಿರುವ ವೀಡಿಯೊ ವೈರಲ್ ಆಗಿದೆ.

ಆಕಸ್ಮಿಕವಾಗಿ ಪರೀಕ್ಷೆಗೆ ಒಳಪಡಿಸಿದ ಸಾಫ್ಟ್‌ವೇರ್‌ನ ನೆರವಿನಿಂದ ಈ ಸಂಶೋಧನೆ ಮಾಡಲಾಗಿದೆ ಎಂದು ಹೇಳಿದ್ದಾರೆ. “ಈ ಸಾಫ್ಟ್‌ವೇರನ್ನು ನಿನ್ನೆ ಪರೀಕ್ಷೆಗೆ ಒಳಪಡಿಸಿದ ನಂತರ ನಾನಿದನ್ನು ಘೋಷಿಸುತ್ತಿದ್ದೇನೆ. ನಿನ್ನೆ ನಾನು ಆಕಸ್ಮಿಕವಾಗಿ ಇದನ್ನು ಪರಿಶೀಲಿಸಿದೆ. ಇದು ಪರಿಪೂರ್ಣವಾಗಿ ಕೆಲಸ ಮಾಡುತ್ತದೆ. ಬರೆದಿಟ್ಟುಕೊಳ್ಳಿ, ಒಂದು ವರ್ಷದೊಳಗೆ ನಾನಿದನ್ನು ನಿರೂಪಿಸಬಲ್ಲೆ” ಎಂದು ಹೇಳಿದ್ದಾರೆ.