ಬೆಳಗಾವಿ, ಡಿ. 22: ಮಹಾರಾಷ್ಟ್ರ ಮುಖ್ಯಮಂತ್ರಿ ಏನೇ ಹೇಳಿದರೂ ಬೆಳಗಾವಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶ ಕನ್ನಡ ನಾಡಾಗಿಯೇ ಉಳಿಯಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ರವಿವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿಷಯ ಕುರಿತು ಉದ್ಧವ್ ಠಾಕ್ರೆ ಹೇಳಿಕೆಯನ್ನು ಖಂಡಿಸಿ, ಅವರು ಹೇಳಿದ್ದೆಲ್ಲಾ ಇಲ್ಲಿ ನಡೆಯುವುದಿಲ್ಲ. ಈ ಭೂಮಿ ಮೇಲೆ ಜನರು ಇರುವರೆಗೂ ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶ ಕರ್ನಾಟಕದಲ್ಲಿಯೇ ಇರುತ್ತದೆ ಎಂದು ತಿಳಿಸಿದರು.
ಇತ್ತೀಚಿಗೆ ನಡೆದ ಉಪ ಚುನಾವಣೆಯಲ್ಲಿ 12 ಸ್ಥಾನಗಳನ್ನು ನಾವು ಗೆದ್ದಿದ್ದೇವೆ. ನೂತನ ಶಾಸಕರು ಎಲ್ಲರೂ ಪ್ರಮಾಣ ವಚನ ಸ್ವೀಕರಿಸಿದ್ದಾಗಿದೆ. ಕೆಲವೇ ದಿನಗಳಲ್ಲಿ ಸಚಿವ ಸಂಪುಟವೂ ವಿಸ್ತರಣೆಯಾಗಲಿದೆ. ಅದಕ್ಕಾಗಿ ಸ್ವಲ್ಪ ಕಾಯಬೇಕು ಅಷ್ಟೇ ಎಂದು ಅವರು ಹೇಳಿದರು.
ದೇಶದಲ್ಲಿ ನಮ್ಮ ಪಕ್ಷ ಸೂಕ್ತ ಆಡಳಿತ ನಡೆಸುತ್ತಿದೆ. ಪಕ್ಷದ ಯಾವುದೇ ಚಟುವಟಿಕೆಗಳು ಹಾಗೂ ತೀರ್ಮಾನ ಕೈಗೊಳ್ಳುವ ವಿಷಯದಲ್ಲಿ ರಾಷ್ಟ್ರಮಟ್ಟದಲ್ಲಿ ಚಿಂತನೆ ನಡೆಯುತ್ತದೆ. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದ ಚಟುವಟಿಕೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವರು ಎಂದರು.
ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ಕೇಳಿದರೆ ನಾನು ಪ್ರತಿಕ್ರಿಯೆ ನೀಡಬಲ್ಲೆ. ಹಾದಿಬೀದಿಯಲ್ಲಿ ಡಿಸಿಎಂ ಹುದ್ದೆ ಬಗ್ಗೆ ಹೇಳಿಕೆ ನೀಡುವವರಿಗೆ ನಾನೇನು ಪ್ರತಿಕ್ರಿಯೆ ನೀಡಲಿ ಎಂದು ಸ್ವಪಕ್ಷೀಯ ಶಾಸಕರಾದ ರೇಣುಕಾಚಾರ್ಯ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು.
ಮಂಗಳೂರು ಗೋಲಿಬಾರ್ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅಮಾಯಕರನ್ನು ಗೋಲಿಬಾರ್ ಮಾಡಿ ನಾವು ಸಾಯಿಸಿಲ್ಲ. ಯಾರು ದೇಶದ್ರೋಹ, ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೋ, ಅವರನ್ನು ಹತ್ತಿಕ್ಕಲಾಗಿದೆ. ಈ ವಿಷಯದಲ್ಲಿ ಕಾಂಗ್ರೆಸ್ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದೆ ಎಂದು ದೂರಿದರು.