ಭೀಮಾ-ಕೋರೆಗಾಂವ್ ಚಳವಳಿ: ದಲಿತರ ವಿರುದ್ಧದ ಪ್ರಕರಣ ಕೈಬಿಡಲು ನಿರ್ಧಾರ

ಮುಂಬೈ, ಡಿ.4: ಕಳೆದ ಜನವರಿಯಲ್ಲಿ ನಡೆದ ಭೀಮಾ- ಕೊರೇಗಾಂವ್ ಹಿಂಸಾಚಾರದ ಸಂಬಂಧ ದಲಿತ ಮುಖಂಡರ ವಿರುದ್ಧ ದಾಖಲಿಸಿರುವ ಅಪರಾಧ ಪ್ರಕರಣಗಳನ್ನು ಸಾಧ್ಯವಾದಷ್ಟು ಬೇಗ ಕೈಬಿಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭರವಸೆ ನೀಡಿದ್ದಾರೆ.

ಎನ್‌ಸಿಪಿ ಮುಖಂಡರಾದ ಜಯಂತ್ ಪಾಟೀಲ್ ಹಾಗೂ ಛಗನ್ ಭುಜಬಲ್, ಶಾಸಕ ಪ್ರಕಾಶ್ ಗಜ್‌ಭಾಯ್ ಅವರನ್ನೊಳಗೊಂಡ ನಿಯೋಗಕ್ಕೆ ಠಾಕ್ರೆ ಈ ಆಶ್ವಾಸನೆ ನೀಡಿದರು. 2018ರ ಜನವರಿ 2 ಹಾಗೂ 3ರಂದು ನಡೆದ ಹಿಂಸಾಚಾರದ ಸಂಬಂಧ ದಲಿತ ಮುಖಂಡರ ವಿರುದ್ಧ ದಾಖಲಿಸಿರುವ ಅಪರಾಧ ಪ್ರಕರಣಗಳನ್ನು ಕೈಬಿಡಬೇಕು ಎಂದು ಎನ್‌ಸಿಪಿ ನಿಯೋಗ ಆಗ್ರಹಿಸಿತ್ತು.

ಮುಂಬೈನ ಅರೇ ಕಾಲನಿಯಲ್ಲಿ ಮರ ಕಡಿಯುವ ವಿರುದ್ಧ ಹಾಗೂ ನಾನಾರ್ ಶುದ್ಧೀಕರಣ ಘಟಕಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದವರ ವಿರುದ್ಧದ ಪ್ರಕರಣಗಳನ್ನು ತಕ್ಷಣ ಕೈಬಿಡುವಂತೆ ಠಾಕ್ರೆ ಗೃಹ ಇಲಾಖೆಗೆ ಅಧಿಕಾರ ವಹಿಸಿಕೊಂಡ ದಿನವೇ ಸೂಚನೆ ನೀಡಿದ್ದರು.

“ಭೀಮಾ-ಕೊರೇಗಾಂವ್ ಹೋರಾಟಗಾರರು ಹಾಗೂ ಇಂದು ಮಿಲ್ ಪ್ರತಿಭಟನೆ ನಡೆಸಿದವರ ವಿರುದ್ಧದ ಪ್ರಕರಣಗಳನ್ನು ಕೈಬಿಡುವ ಸಂಬಂಧ ಕಾನೂನು ಜಾರಿ ಏಜೆನ್ಸಿಗಳು ಈಗಾಗಲೇ ಪ್ರಕ್ರಿಯೆ ಆರಂಭಿಸಿವೆ. ಈ ಎಲ್ಲರ ಮೇಲೂ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಆದ್ದರಿಂದ ತಕ್ಷಣ ಪ್ರಕರಣ ಕೈಬಿಡುವಂತೆ ಸಿಎಂಗೆ ಮನವಿ ಮಾಡಿದೆವು. ಇದಕ್ಕೆ ಠಾಕ್ರೆ ಒಪ್ಪಿಕೊಂಡಿದ್ದಾರೆ” ಎಂದು ಗಜ್‌ಭಾಯ್ ಹೇಳಿದ್ದಾರೆ.

ಭೀಮಾ ಕೊರೇಗಾಂವ್ ಪ್ರಕರಣಗಳು, ಜನವರಿ ಹಿಂಸಾಚಾರಕ್ಕೆ ಮುನ್ನ ನಡೆದ ಎಲ್ಗಾರ್ ಪರಿಷತ್ ಸಭೆಗೆ ಸಂಬಂಧಿಸಿದ ಪ್ರಕರಣಗಳಿಗಿಂತ ಭಿನ್ನ. ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ನಕ್ಸಲರ ಜತೆ ನಂಟು ಹೊಂದಿದ ಆರೋಪದಲ್ಲಿ ಒಂಬತ್ತು ಮಂದಿ ಹೋರಾಟಗಾರರನ್ನು ಬಂಧಿಸಲಾಗಿದೆ. ಈ ಸಭೆಯಲ್ಲಿ ನಡೆದ ಪ್ರಚೋದನಕಾರಿ ಭಾಷಣದಿಂದ ಜನವರಿ 1ರ ಜಾತಿ ಸಂಘರ್ಷ ನಡೆದಿತ್ತು ಎನ್ನುವುದು ಪುಣೆ ಪೊಲೀಸರ ವಾದವಾಗಿತ್ತು.

Please follow and like us:
error