‘ಭಾರತ್ ಬಂದ್‍’ ಜನಜೀವನ ಸ್ತಬ್ಧ ಸಾಧ್ಯತೆ : ರಾಜ್ಯದಲ್ಲಿ 100ಕ್ಕೂ ಅಧಿಕ ಸಂಘ-ಸಂಸ್ಥೆಗಳಿಂದ ಬೆಂಬಲ

ಬೆಂಗಳೂರು, : ಕೇಂದ್ರ ಸರಕಾರದ ರೈತ ವಿರೋಧಿ ನೀತಿ, ಕಾರ್ಪೋರೇಟ್ ಪರ ಮೂರು ಕೃಷಿ ಕಾನೂನು ಹಾಗೂ ಕರಾಳ ವಿದ್ಯುತ್ ಮಸೂದೆ-2020 ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಇಂದಿನ “ಅಖಿಲ ಭಾರತ್ ಬಂದ್”ಗೆ ವಿವಿಧ ರಾಜಕೀಯ ಪಕ್ಷಗಳು ಒಳಗೊಂಡಂತೆ 100ಕ್ಕೂ ಅಧಿಕ ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿರುವ ಹಿನ್ನೆಲೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಜನಜೀವನ ಸ್ತಬ್ಧಗೊಳ್ಳುವ ಸಾಧ್ಯತೆ ಹೆಚ್ಚಿದೆ.

ರೈತರು ರಾಜ್ಯ ವ್ಯಾಪ್ತಿಯಲ್ಲಿ ಹೆದ್ದಾರಿ ಮತ್ತು ರಸ್ತೆ ತಡೆ ಸೇರಿದಂತೆ ಹಲವು ರೀತಿಯಲ್ಲಿ ಪ್ರತಿಭಟನೆ ನಡೆಯುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಸರಕಾರಿ ಸಂಸ್ಥೆಗಳಿಗೆ ರಜೆ ಘೋಷಿಸಿಲ್ಲ. ಇನ್ನು, ಸಾರಿಗೆ ನಿಗಮಗಳ ಸಿಬ್ಬಂದಿ ನೈತಿಕ ಬೆಂಬಲ ನೀಡಿದ್ದರೂ ಬಂದ್‍ನಲ್ಲಿ ಭಾಗವಹಿಸುವುದಿಲ್ಲ. ನಮ್ಮ ಮೆಟ್ರೋ ಮತ್ತು ಸಾರಿಗೆ ಸಂಸ್ಥೆ ಬಸ್‍ಗಳು ಎಂದಿನಂತೆ ಸಂಚರಿಸಲಿವೆ. ಗಲಭೆಗಳು ನಡೆದರೆ ಪರಿಸ್ಥಿತಿ ನೋಡಿಕೊಂಡು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ರಾಜ್ಯ ಲಾರಿ ಮಾಲಕರ ಸಂಘ, ಓಲಾ–ಊಬರ್ ಚಾಲಕರ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘ, ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘಟನೆ, ದಲಿತ ಸಂಘಟನೆಗಳು, ಆಟೊ ಯೂನಿಯನ್, ಜೈ ಭಾರತ್ ಚಾಲಕರ ಸಂಘ ಸೇರಿದಂತೆ ಹಲವು ಸಂಘಟನೆಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಟ್ಯಾಕ್ಸಿ ಮತ್ತು ಆಟೊ ಸಂಚಾರದಲ್ಲಿ ವ್ಯತ್ಯಯವಾಗುವ ಸಂಭವವಿದೆ.

ಹಾಲು, ಹಣ್ಣು, ತರಕಾರಿ, ಆರೋಗ್ಯ ಸೇವೆ, ಔಷಧಿ ಅಂಗಡಿಗಳು, ಪೆಟ್ರೋಲ್ ಬಂಕ್‍ಗಳು, ಮಾರುಕಟ್ಟೆಗಳು ತೆರೆದಿರುತ್ತವೆ. ಗ್ರಾಹಕರ ಹಿತದೃಷ್ಟಿಯಿಂದ ಹೊಟೇಲ್‍ಗಳನ್ನು ಮುಚ್ಚುವುದಿಲ್ಲ ಎಂದು ಹೊಟೇಲ್ ಮಾಲಕರ ಸಂಘ ಹೇಳಿದೆ. ಆದರೂ ಪರಿಸ್ಥಿತಿ ಅನುಗುಣವಾಗಿ ಈ ಸೇವೆಗಳಲ್ಲಿ ಏರುಪೇರಾಗುವ ಸಾಧ್ಯತೆಯಿದೆ.

ಬಂದ್ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಬಿಗಿ ಭದ್ರತೆ

ಡಿ.8ರಂದು ರಾಜ್ಯದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ನಿಲ್ದಾಣ, ಮೆಟ್ರೊ ರೈಲು ನಿಲ್ದಾಣಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗುತ್ತಿದೆ.

ಏನಿರುತ್ತದೆ?

ಬೆಂಗಳೂರು ನಗರದಲ್ಲಿ ಬಿಎಂಟಿಸಿ, ಮೆಟ್ರೊ ರೈಲು ಸಂಚಾರ ಎಂದಿನಂತಿರುತ್ತದೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಸಾರಿಗೆ ಸಂಸ್ಥೆಗಳ ಅಧಿಕಾರಿಗಳು ತಿಳಿಸಿದ್ದಾರೆ.ಸರಕಾರಿ ಸಂಸ್ಥೆಗಳೂ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಹೊಟೇಲ್ ಮಾಲಕರ ಸಂಘವು ಬಂದ್‍ಗೆ ನೈತಿಕ ಬೆಂಬಲ ಮಾತ್ರ ನೀಡಿದ್ದು, ಇವುಗಳ ಸೇವೆಯೂ ಎಂದಿನಂತೆ ಇರಲಿದೆ. ಇನ್ನು, ಆರೋಗ್ಯ ಸೇವೆ, ಔಷಧ ಅಂಗಡಿ, ಹಾಲು, ಪತ್ರಿಕೆಗಳು ಲಭ್ಯ ಇರಲಿವೆ.

ಏನಿರುವುದಿಲ್ಲ?

ಆಟೊ ಚಾಲಕರು- ಮಾಲಕರ ಸಂಘ, ಓಲಾ- ಉಬರ್ ಚಾಲಕರ ಸಂಘ ಬಂದ್‍ಗೆ ಬೆಂಬಲ ನೀಡಿದ್ದು, ಇವುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಬೀದಿ–ಬದಿ ವ್ಯಾಪಾರಸ್ಥರ ಸಂಘವೂ ಬಂದ್‍ಗೆ ಬೆಂಬಲ ನೀಡಿರುವುದರಿಂದ ತರಕಾರಿ ಮತ್ತಿತರ ಅಗತ್ಯ ವಸ್ತುಗಳ ಸೇವೆ ಸಿಗುವ ಸಾಧ್ಯತೆ ಇಲ್ಲ. ಪ್ರತಿಭಟನೆ ತೀವ್ರಗೊಂಡರೆ ಬಸ್‍ಗಳ ಸೇವೆಯಲ್ಲಿಯೂ ವ್ಯತ್ಯಯವಾಗುವ ಸಾಧ್ಯತೆ ಇದೆ.

Please follow and like us:
error