ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಕನ್ನಡಿಗ ಸುನೀಲ್ ಜೋಶಿ ಆಯ್ಕೆ

ಹೊಸದಿಲ್ಲಿ, ಮಾ.4: ಭಾರತೀಯ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಹೊಸ ಮುಖ್ಯಸ್ಥರನ್ನಾಗಿ ಭಾರತದ ಮಾಜಿ ಸ್ಪಿನ್ನರ್ ಸುನೀಲ್ ಜೋಶಿ ಅವರನ್ನು ನೇಮಕ ಮಾಡಲಾಗಿದೆ ಎಂದು ಬಿಸಿಸಿಐ ಬುಧವಾರ ಘೋಷಿಸಿದೆ.

ಮದನ್‌ಲಾಲ್, ರುದ್ರಪ್ರತಾಪ್ ಸಿಂಗ್ ಹಾಗೂ ಸುಲಕ್ಷಣ ನಾಯಕ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ)ಬುಧವಾರ ಮುಂಬೈನಲ್ಲಿರುವ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಸಭೆ ನಡೆಸಿತು. ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿಗೆ(ಪುರುಷರ ವಿಭಾಗ)ಹೊಸ ಸದಸ್ಯರುಗಳನ್ನು ನೇಮಿಸಿತು. ಸೀನಿಯರ್ ಆಯ್ಕೆ ಸಮಿತಿಗೆ ಸುನೀಲ್ ಜೋಶಿ ಹಾಗೂ ಮಾಜಿ ವೇಗದ ಬೌಲರ್ ಹರ್ವಿಂದರ್ ಸಿಂಗ್ ಹೆಸರುಗಳನ್ನು ಸಿಎಸಿ ಶಿಫಾರಸು ಮಾಡಿದೆ. ಸುನೀಲ್ ಜೋಶಿ ಹಾಗೂ ಹರ್ವಿಂದರ್ ಆಯ್ಕೆ ಸಮಿತಿಯಲ್ಲಿ ದೇವಂಗ್ ಗಾಂಧಿ, ಸರನ್‌ದೀಪ್ ಸಿಂಗ್ ಹಾಗೂ ಜತಿನ್ ಪರಂಜಪೆ ಅವರನ್ನು ಸೇರಿಕೊಳ್ಳಲಿದ್ದಾರೆ.

ಹಿರಿಯ ಪುರುಷರ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸುನೀಲ್ ಜೋಶಿ ಇರಬೇಕೆಂದು ಸಿಎಸಿ ಶಿಫಾರಸು ಮಾಡಿದೆ. ಒಂದು ವರ್ಷದ ಅವಧಿಯ ನಂತರ ಅಭ್ಯರ್ಥಿಗಳನ್ನು ಸಿಎಸಿ ಪರಿಶೀಲಿಸುತ್ತದೆ ಹಾಗೂ ಬಿಸಿಸಿಐಗೆ ಶಿಫಾರಸು ಮಾಡುತ್ತದೆ ಎಂದು ಮಾಧ್ಯಮ ಪ್ರಕಟನೆಯೊಂದು ತಿಳಿಸಿದೆ.

‘‘ಹಿರಿಯ ಪುರುಷರ ಆಯ್ಕೆ ಸಮಿತಿಯ ಅಧ್ಯಕ್ಷ ಹುದ್ದೆಗೆ ಸುನೀಲ್ ಜೋಶಿ ಹೆಸರನ್ನು ಸಮಿತಿಯು ಶಿಫಾರಸು ಮಾಡಿದೆ.ಒಂದು ವರ್ಷದ ಅವಧಿಯಲ್ಲಿ ಅಭ್ಯರ್ಥಿಗಳನ್ನು ಪರಿಶೀಲಿಸಲಿರುವ ಸಿಎಸಿ ಆ ನಂತರ ಬಿಸಿಸಿಐಗೆ ಶಿಫಾರಸು ಮಾಡಲಿದೆ’’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಹೇಳಿದ್ದಾರೆ.

ಸುನೀಲ್ ಜೋಶಿ ದಕ್ಷಿಣ ವಲಯವನ್ನು ಪ್ರತಿನಿಧಿಸುತ್ತಿದ್ದ ಎಂಎಸ್‌ಕೆ ಪ್ರಸಾದ್‌ರಿಂದ ತೆರವಾದ ಸ್ಥಾನ ತುಂಬಲಿದ್ದಾರೆ. ಹರ್ವಿಂದರ್ ಸಿಂಗ್ ಕೇಂದ್ರ ವಲಯದಿಂದ ಆಯ್ಕೆಯಾಗಿದ್ದು, ಗಗನ್ ಖೋಡ ಬದಲಿಗೆ ಆಯ್ಕೆಯಾಗಿದ್ದಾರೆ.

ತನ್ನ ಶಿಫಾರಸುಗಳನ್ನು ಘೋಷಿಸಿದ ಸಿಎಸಿ ಸದಸ್ಯ ಮದನ್ ಲಾಲ್, ‘‘ನಾವು ಜವಾಬ್ದಾರಿಯುತ ಹುದ್ದೆಗೆ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಿದ್ದೇವೆ’’ ಎಂದರು. ಹೊಸ ಆಯ್ಕೆಗಾರರು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಿದ್ದಾರೆ. ಭಾರತ ಮಾ.12ರಂದು ದ.ಆಫ್ರಿಕಾ ವಿರುದ್ಧ ಧರ್ಮಶಾಲಾದಲ್ಲಿ ಮೊದಲ ಪಂದ್ಯವನ್ನು ಆಡಲಿದೆ. ಎರಡು ಹಾಗೂ ಮೂರನೇ ಪಂದ್ಯ ಲಕ್ನೋ(ಮಾ.15) ಹಾಗೂ ಕೋಲ್ಕತಾ(ಮಾ.18)ದಲ್ಲಿ ನಡೆಯಲಿದೆ.

Please follow and like us:
error