ಭಾರತದಲ್ಲಿ 70 ವರ್ಷ ಜೀವಿಸಿರುವುದು ಪೌರತ್ವ ಸಾಬೀತಿಗೆ ಸಾಕಾಗುವುದಿಲ್ಲವೇ: ನಾಸೀರುದ್ದಿನ್ ಶಾ ಪ್ರಶ್ನೆ

ಹೊಸದಿಲ್ಲಿ, ಜ.23: ಪೌರತ್ವ ಕಾಯ್ದೆಯ ಬಗ್ಗೆ ತನಗೇನೂ ಆತಂಕವಿಲ್ಲ, ಆದರೆ ಸಿಟ್ಟು ಇದೆ. ಇತರ ಹಲವು ಭಾರತೀಯರಂತೆ ತಾನು ಕೂಡಾ ಜನನ ಪ್ರಮಾಣ ಪತ್ರ ತೋರಿಸುವುದಿಲ್ಲ. ಈ ದೇಶದಲ್ಲಿ 70 ವರ್ಷ ಜೀವಿಸಿರುವುದು ಪೌರತ್ವ ಸಾಬೀತಿಗೆ ಸಾಕಾಗುವುದಿಲ್ಲವೇ ಎಂದು ನಟ ನಾಸೀರುದ್ದಿನ್ ಶಾ ಪ್ರಶ್ನಿಸಿದ್ದಾರೆ. ಓರ್ವ ಮುಸ್ಲಿಮನಾಗಿ ಈ ಮಾತು ಹೇಳುತ್ತಿಲ್ಲ, ಓರ್ವ ನಾಗರಿಕನಾಗಿ ಹೇಳುತ್ತಿದ್ದೇನೆ. ನನ್ನ ವಂಶದ ಐದು ತಲೆಮಾರಿನವರನ್ನು ಈ ಭೂಮಿಯಲ್ಲೇ ದಫನ ಮಾಡಲಾಗಿದೆ. ನಾನು ಸಾಮಾಜಿಕ ಮತ್ತು ಶೈಕ್ಷಣಿಕ ರಂಗದ ಮೂಲಕ ದೇಶಕ್ಕೆ ಕೊಡುಗೆ ನೀಡಿದ್ದೇನೆ. ನನ್ನಲ್ಲಿ ಜನ್ಮ ಪ್ರಮಾಣ ಪತ್ರವಿಲ್ಲದ ಕಾರಣ ಅದನ್ನು ಒದಗಿಸಲು ಆಗದು. ಹಾಗೆಂದ ಮಾತ್ರಕ್ಕೆ ನಮ್ಮನ್ನೆಲ್ಲಾ ಪೌರತ್ವ ಪಟ್ಟಿಯಿಂದ ಕೈಬಿಡಲಾಗುವುದೇ ? ಮುಸ್ಲಿಮರು ಆತಂಕ ಪಡುವ ಅಗತ್ಯವಿಲ್ಲ ಎಂಬ ಭರವಸೆಯ ಅಗತ್ಯ ನನಗಿಲ್ಲ. ನಾನು ಆತಂಕಿತನಾಗಿಲ್ಲ ಎಂದು ಶಾ ಹೇಳಿದರು.

ದೇಶದಲ್ಲಿ 70 ವರ್ಷ ಜೀವಿಸಿರುವುದು ಪೌರತ್ವ ಸಾಬೀತಿಗೆ ಪುರಾವೆಯಾಗದಿದ್ದಲ್ಲಿ ಬೇರೆ ಯಾವ ಪುರಾವೆ ಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ. ಇಂತಹ ಕಾನೂನನ್ನು ದೇಶದ ಮೇಲೆ ಹೇರಿರುವ ಬಗ್ಗೆ ನನಗೆ ಸಿಟ್ಟು ಇದೆ. ತನ್ನ ದೇಶದಲ್ಲಿ ಕಿರುಕುಳ, ದೌರ್ಜನ್ಯ ಸಹಿಸಲಾಗದೆ ಎಲ್ಲವನ್ನೂ ಬಿಟ್ಟು ಗಡಿದಾಟಿ ಬರುವ ವಲಸಿಗರಲ್ಲಿ ಜನ್ಮ ಪ್ರಮಾಣ ಪತ್ರ ಇರುತ್ತದೆಯೇ ಎಂದು ಶಾ ಪ್ರಶ್ನಿಸಿದ್ದಾರೆ. ಪೌರತ್ವ ಕಾಯ್ದೆ ವಿರೋಧಿಸಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಯನ್ನು ಉಲ್ಲೇಖಿಸಿದ ಅವರು, ತಮ್ಮನ್ನು ದಮನಿಸುವ ಪ್ರಯತ್ನದ ಬಗ್ಗೆ ಯುವಜನತೆ ಎಚ್ಚೆತ್ತುಕೊಂಡಿದ್ದಾರೆ ಎಂದರು. ವಿದ್ಯಾರ್ಥಿ ಸಮುದಾಯ, ಬುದ್ಧಿಜೀವಿಗಳಿಗೆ ಆಗುತ್ತಿರುವ ಅವಹೇಳನದಿಂದ ತನಗೆ ಅತೀವ ನೋವಾಗಿದೆ. ಈಗ ನಡೆಯುತ್ತಿರುವ ಪ್ರತಿಭಟನೆ ಯಾವುದೇ ನಾಯಕರಿಲ್ಲದೆ ಸ್ವಯಂಪ್ರೇರಣೆಯಿಂದ ನಡೆಯುತ್ತಿದೆ. ಯುವಜನರ ಆಕ್ರೋಶವನ್ನು ನಿರ್ಲಕ್ಷಿಸಿದರೆ ನೀವು ಸ್ವಯಂ ಅಪಾಯವನ್ನು ಸೃಷ್ಟಿಸಿದಂತಾಗುತ್ತದೆ ಎಂದರು.

ಪೌರತ್ವ ಕಾಯ್ದೆಯ ಬಗ್ಗೆ ಸಿನೆಮ ರಂಗದ ಖ್ಯಾತನಾಮರ ಮೌನದ ಬಗ್ಗೆ ಮಾತನಾಡಿದ ಶಾ, ಸಿನೆಮ ಉದ್ಯಮ ಆರಾಧಿಸುವ ದೇವರೆಂದರೆ ಅದು ಹಣ ಮಾತ್ರವಾಗಿದೆ. ಸಿನೆಮ ರಂಗ ಯಾವಾಗಲೂ ಅಧಿಕಾರದಲ್ಲಿರುವವರನ್ನು ಹಿಂಬಾಲಿಸುತ್ತದೆ. ಕೇಂದ್ರ ಸರಕಾರವನ್ನು ಖುಷಿಪಡಿಸಲು ಅವರು ಏನು ಬೇಕಾದರೂ ಮಾಡಲು ಸಿದ್ಧವಾಗಿರುತ್ತಾರೆ ಎಂದು ಹೇಳಿದರು.

 

Please follow and like us:
error