ಬುಧವಾರ ದೆಹಲಿ ವಿಮಾನ ನಿಲ್ದಾಣದಲ್ಲಿ 500ಕ್ಕೂ ಹೆಚ್ಚು ಮಂದಿಯನ್ನು ಪರೀಕ್ಷೆಗೆ ಗುರಿ ಪಡಿಸಲಾಗಿದೆ. ಕೊರೋನ ಸೋಂಕು ತಗುಲಿದ ವ್ಯಕ್ತಿಗಳ ಜತೆ ನೇರ ಸಂಪರ್ಕ ಹೊಂದಿದ್ದ 50 ಮಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಎರಡು ದಿನಗಳಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ 950 ಪ್ರಯಾಣಿಕರನ್ನು ಪರೀಕ್ಷೆಗೆ ಗುರಿಪಡಿಸಲಾಗಿದೆ. ಮಂಗಳವಾರ ರಾತ್ರಿ ಬ್ರಿಟನ್ನಿಂದ ಭಾರತಕ್ಕೆ ವಾಪಸ್ಸಾಗಿದ್ದ ಆರು ಮಂದಿಗೆ ಕೊರೋನ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದೆ.
ಮಂಗಳವಾರ ಬ್ರಿಟನ್ನಿಂದ ಎರಡು ವಿಮಾನಗಳು ದೆಹಲಿಗೆ ಆಗಮಿಸಿವೆ. ರಾತ್ರಿ 11.30ಕ್ಕೆ ಬಂದ ವಿಮಾಣದಲ್ಲಿ 240 ಪ್ರಯಾಣಿಕರಿದ್ದರೆ, 11.55ಕ್ಕೆ ಆಗಮಿಸಿದ ವಿಮಾನದಲ್ಲಿ 274 ಪ್ರಯಾಣಿಕರಿದ್ದರು. ಎಲ್ಲ 514 ಪ್ರಯಾಣಿಕರಿಗೆ ಕೇಂದ್ರ ಸರ್ಕಾರದ ಆದೇಶದಂತೆ ವಿಮಾನ ನಿಲ್ದಾಣದಲ್ಲೇ ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ಬ್ರಿಟನ್ನಲ್ಲಿ ವೇಗವಾಗಿ ಹರಡುತ್ತಿರುವ ‘ಸಾರ್ಸ್-ಕೋವ್-2’ ಭೀತಿ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.
ಡಿ. 23ರಿಂದ 31ರವರೆಗೆ ಬ್ರಿಟನ್ನಿಂದ ಆಗಮಿಸುವ ಎಲ್ಲ ವಿಮಾನಗಳನ್ನು ಭಾರತ ರದ್ದುಪಡಿಸಿತ್ತು. ಬ್ರಿಟನ್ನಿಂದ ಸೋಮವಾರದಿಂದೀಚೆಗೆ ನಾಲ್ಕು ವಿಮಾನಗಳು ಆಗಮಿಸಿದ್ದು, 984 ಪ್ರಯಾಣಿಕರ ಪೈಕಿ 11 ಮಂದಿಗೆ ಪಾಸಿಟಿವ್ ಕಾಣಿಸಿಕೊಂಡಿದೆ.