ಸರಕಾರದ ನಿಯಮ ಉಲ್ಲಂಘಿಸಿ ಭತ್ತ ಖರೀದಿಯಲ್ಲಿ ಗೋಲ್ ಮಾಲ್.
ಕ್ರಮ ತೆಗೆದುಕೊಳ್ಳುವಂತೆ ರೈತರ ಹಿತ ರಕ್ಷಣಾ ವೇದಿಕೆ ಆಗ್ರಹ
ಕೊಪ್ಪಳ : ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ಮಾರಾಟ ಬೆಲೆ(ಎಂಎಸ್ಪಿ) ಗಿಂತ ಕಡಿಮೆ ದರದಲ್ಲಿ ಭತ್ತ ಖರೀದಿ ಮಾಡುತ್ತಿರುವ ಖರೀದಿದಾರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯ ರೈತರ ಹಿತ ರಕ್ಷಣಾ ವೇದಿಕೆಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ಕೇಸರಹಟ್ಟಿ ಶರಣೆಗೌಡ ಜಿಲ್ಲೆಯ
ಗಂಗಾವತಿ ಎಪಿಎಂಸಿ ಕಾರ್ಯದರ್ಶಿ ಮತ್ತು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಭತ್ತಕ್ಕೆ 1888 ರೂ. ಬೆಲೆ ನಿಗದಿ ಮಾಡಿದೆ. ಇದರಂತೆ 75 ಕೆಜಿ ಭತ್ತಕ್ಕೆ ಕನಿಷ್ಠ 1300 ರೂ.ಗೆ ಖರೀದಿ ಮಾಡಬೇಕು. ಆದರೆ, ಸದ್ಯ ಕೇವಲ 800 ರಿಂದ 900 ರೂ. ಗೆ 75 ಕೆಜಿಯ ಒಂದು ಚೀಲ ಭತ್ತ ಖರೀದಿ ಮಾಡುತ್ತಿದ್ದಾರೆ. ಜೊತೆಗೆ ದಲ್ಲಾಳಿ, ಹಮಾಲಿ ಅಂತಾ ಎರಡು ಕೆಜಿ ಕಡಿತ ಮಾಡಲಾಗುತ್ತಿದ್ದು, ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಇದರಿಂದ ಕೂಡಲೇ ಭತ್ತ ಖರೀದಿ ಮಾಡುವವರಿಗೆ ಸೂಚನೆ ನೀಡಬೇಕು. ಸರ್ಕಾರ ನಿಗದಿ ಮಾಡಿದ ಬೆಲೆಗೆ ಭತ್ತ ಖರೀದಿ ಮಾಡಲು ಸೂಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಐದು ದಿನದ ಒಳಗಾಗಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಎಪಿಎಂಸಿ ಬಂದ್ ಮಾಡಿ, ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
