ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹೆಸರುಕಾಳನ್ನು ಖರೀದಿಸಲು ಕ್ರಮ ವಹಿಸಿ: ವಿಕಾಸ್ ಕಿಶೋರ್ ಸುರಳ್ಕರ್


ಕೊಪ್ಪಳ : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಹೆಸರುಕಾಳನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ಆರಂಭಿಸಿ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು 2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳು ಖರೀದಿಸುವ ಕುರಿತಾಗಿ ಆಯೋಜಿಸಲಾಗಿದ್ದ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ವರ್ಷ ಜಿಲ್ಲೆಯ ರೈತರು ಬೆಳೆದ ಹೆಸರುಕಾಳುಗಳನ್ನು ಖರೀದಿಸಲು ಅಗತ್ಯಾನುಸಾರ ಖರೀದಿ ಕೇಂದ್ರಗಳನ್ನು ಆರಂಭಿಸಿ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‌ಗೆ ರೂ.7,196/- ಗಳಿದ್ದು ಇದರಿಂದ ರೈತರಿಗೆ ಅನುಕೂಲವಾಗಲಿದೆ. ಗರಿಷ್ಠ 21,725 ಮೆಟ್ರಿಕ್ ಟನ್ ಹೆಸರುಕಾಳು ಖರೀದಿಸಬಹುದಾಗಿದ್ದು, ಶೀಘ್ರ ಖರೀದಿ ಕೇಂದ್ರ ಆರಂಭಿಸಿ. ಈಗಾಗಲೇ ಬಹುತೇಕ ರೈತರು ಹೆಸರುಕಾಳು ಗುಣಮಟ್ಟ ಹಾಳಾಗುವ ಭೀತಿಯಿಂದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ತಮ್ಮ ಉತ್ಪನ್ನವನ್ನು ಮಾರುತ್ತಿದ್ದು ಇದರಿಂದ ಅವರಿಗೆ ನಷ್ಟವಾಗುತ್ತದೆ. ಶ್ರಮವಹಿಸಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಒದಗಿಸಿಕೊಡುವ ಉದ್ದೇಶದಿಂದ ರೈತರಿಗೆ ಅನುಕೂಲ ಮಾಡಿಕೊಡಿ. ಎಕರೆಗೆ ಗರಿಷ್ಠ 4 ಕ್ವಿಂಟಾಲ್‌ನAತೆ ಪ್ರತಿ ರೈತರಿಂದ ಗರಿಷ್ಠ 4 ಕ್ವಿಂಟಾಲ್ ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳು ಖರೀದಿಸಬಹುದು ಎಂದು ಅವರು ಹೇಳಿದರು.
ಕೇವಲ ಹೆಸರುಕಾಳು ಮಾತ್ರವಲ್ಲದೆ ಈಗಾಗಲೇ ಸಜ್ಜೆ, ಮೆಕ್ಕೆಜೋಳ ಬೆಳೆಗಳು ಕಟಾವಿಗೆ ಬಂದಿದ್ದು, ಅವುಗಳನ್ನು ಖರೀದಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಖರೀದಿ ಕೇಂದ್ರ ಆರಂಭಿಸಲು ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ. ರೈತರಿಂದ ಖರೀದಿಸಲಾದ ಉತ್ಪನ್ನಕ್ಕೆ ನೀಡುವ ಬೆಂಬಲ ಬೆಲೆ ಮೊತ್ತವನ್ನು ಖರೀದಿ ಪ್ರಕ್ರಿಯೆಯ 2 ದಿನಗಳೊಳಗಾಗಿ ರೈತರ ಖಾತೆಗೆ ಜಮೆ ಮಾಡಬೇಕು. ರೈತರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯವಾಗಿದ್ದು, ಜಿಲ್ಲೆಯ ರೈತರ ಬ್ಯಾಂಕ್ ಖಾತೆಗಳ ಪಟ್ಟಿಯನ್ನು ನೀಡಿದಲ್ಲಿ ಬ್ಯಾಂಕ್ ವ್ಯವಸ್ಥಾಪಕರಿಂದ ರೈತರ ಖಾತೆಗೆ ಆಧಾರ್ ಜೋಡಣೆ ಕುರಿತು ಪರೀಶಿಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಬ್ಯಾಂಕ್ ಖಾತೆಗೆ ಇನ್ನೂ ಆಧಾರ್ ಜೋಡಣೆ ಮಾಡದೆ ಇರುವ ರೈತರನ್ನು ಗುರುತಿಸಿ ಆಧಾರ್ ಜೋಡಣೆಗೆ ಕ್ರಮ ಕೈಗೊಳ್ಳಿ ಎಂದು ಅವರು ಹೇಳಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಶಿವಕುಮಾರ್, ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ, ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಶ್ಯಾಮ್, ಪ್ರೊಡಕ್ಷನ್ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error