ಬೆಂಕಿ ಹಚ್ಚಲ್ಪಟ್ಟಿದ್ದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಸಾವು

ಹೊಸದಿಲ್ಲಿ: ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ 40 ಗಂಟೆಗಳ ಜೀವನ್ಮರಣ ಹೋರಾಟ ದಾರುಣ ಅಂತ್ಯ ಕಂಡಿದ್ದು, ಶುಕ್ರವಾರ ರಾತ್ರಿ 11.40ಕ್ಕೆ ಆಕೆ ಸಫ್ದರ್‍ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಹೃದಯಾಘಾತದಿಂದ ಆಕೆ ಮೃತಪಟ್ಟಿದ್ದಾಗಿ ವೈದ್ಯರು ಹೇಳಿದ್ದಾರೆ.

ಇದಕ್ಕೂ ಮುನ್ನ ಆಸ್ಪತ್ರೆಯ ಹೊರಗೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಂತ್ರಸ್ತೆಯ ಸಹೋದರ, “ನಾನು ನಿನ್ನೆ ಸಹೋದರಿಯನ್ನು ತಬ್ಬಿಕೊಂಡಾಗ ಆಕೆ ಹೇಳಿದ್ದು ಒಂದೇ ವಾಕ್ಯ; ‘ನನ್ನನ್ನು ರಕ್ಷಿಸಿ. ನಾನು ಸಾಯಲು ಬಯಸುವುದಿಲ್ಲ. ಆದರೆ ದಾಳಿಕೋರರನ್ನು ಬಿಡಬೇಡಿ. ಅವರನ್ನು ಗಲ್ಲಿಗೇರಿಸಬೇಕು’ ಎಂದು. ಯಾರನ್ನೂ ಬಿಡುವುದಿಲ್ಲ ಎಂದು ನಾನು ಆಶ್ವಾಸನೆ ಕೊಟ್ಟಿದ್ದೇನೆ” ಎಂದು ವಿವರಿಸಿದರು.

ಗುರುವಾರ 23 ವರ್ಷ ವಯಸ್ಸಿನ ಸಂತ್ರಸ್ತೆ ರಾಯಬರೇಲಿಯಲ್ಲಿ ತನ್ನ ವಕೀಲರನ್ನು ಭೇಟಿ ಮಾಡಲು ಹೋಗುತ್ತಿದ್ದಾಗ, ಅತ್ಯಾಚಾರ ಆರೋಪಿ ಸೇರಿದಂತೆ ಐದು ಮಂದಿ ಆಕೆಯ ಮೇಲೆ ದಾಳಿ ನಡೆಸಿದ್ದರು. ದೊಣ್ಣೆಯಿಂದ ಥಳಿಸಿ, ಇರಿದು, ಬೆಂಕಿ ಹಚ್ಚಿದ್ದರು. ಸಂತ್ರಸ್ತೆ ಬೆಂಕಿಯುಂಡೆಯ ಜತೆಯೇ ಚೀರುತ್ತಾ ನೆರವಿಗಾಗಿ ಓಡಿದ್ದರು.

ಆಕೆಯನ್ನು ರಕ್ಷಿಸುವ ವೇಳೆಗೆ ಶೇಕಡ 90ರಷ್ಟು ಸುಟ್ಟಗಾಯಗಳಾಗಿದ್ದವು. ಉನ್ನಾವೋದಿಂದ ಕಾನ್ಪುರ, ಲಕ್ನೋಗೆ ಕರೆತಂದ ಬಳಿಕ ವಿಮಾನದಲ್ಲಿ ಸಪ್ಧರ್‍ಜಂಗ್ ಆಸ್ಪತ್ರೆಗೆ ಕರೆತರಲಾಗಿತ್ತು.

ಹೈದಬಾರಾಬಾದ್ ಎನ್‍ಕೌಂಟರ್ ಬಗ್ಗೆ ಪ್ರತಿಕ್ರಿಯಿಸಿದ ಸಂತ್ರಸ್ತೆಯ ಸಹೋದರ, “ನನ್ನ ಸಹೋದರಿಯೂ ತ್ವರಿತ ನ್ಯಾಯ ಪಡೆಯಬೇಕು. ಅಲ್ಲಿ ನಡೆದದ್ದು ಸರಿ. ಎರಡು ಮೂರು ವರ್ಷಗಳ ಕಾಲ ಪ್ರಕರಣ ವಿಚಾರಣೆ ನಡೆದು ಕೊನೆಗೆ ಆರೋಪಿಗಳು ಮುಕ್ತರಾಗುವಂತಾಗಬಾರದು” ಎಂದು ಹೇಳಿದರು

Please follow and like us:
error