ಎಚ್.ವಿಶ್ವನಾಥರಿಗೆ ಮುಂದಿನ ದಿನಗಳಲ್ಲಿ ಬೇರೆ ಸ್ಥಾನಮಾನ ನೀಡಲಾಗುವುದು- ಸಚಿವ ಜಗದೀಶ್ ಶೆಟ್ಟರ್

ಹೈಕಮಾಂಡ್ ಹಂತದ ಮಾತುಕತೆ ಬಗ್ಗೆ ಬಹಿರಂಗ ಚರ್ಚೆ ಮಾಡಲ್ಲ  -ಜಿಂದಾಲ್ ಒಳಗಿರುವವರು ಇನ್ನು ಮೇಲೆ ಹೊರಬರುವಂತಿಲ್ಲ

ಚೀನಾ ಉತ್ಪನ್ನ ನಿಷೇಧ ಜನರ ಮನಸಲ್ಲಿ ಬಂದಿರುವುದೇ ಚೀನಾ ವಿರುದ್ಧದ ದೊಡ್ಡ ಸಮರ

ಕೊಪ್ಪಳ: ಚುನಾವಣೆ ಯಾವುದೇ ಇರಲಿ. ಪಕ್ಷದ ಹೈಕಮಾಂಡ್ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಸೇರಿದಂತೆ ಹಲವು ನಿರ್ಣಯ‌ ಕೈಗೊಳ್ಳುತ್ತದೆ. ಆ ಹಂತದ ಮಾತುಕತೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ಕೊಪ್ಪಳದ ಬಸಾಪುರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ ಹೈಕಮಾಂಡ್ ನಿರ್ಧಾರವನ್ನು ನಾವು ಒಪ್ಪುತ್ತೇವೆ. ಟಿಕೆಟ್ ಸಿಗದವರಿಗೆ ಮುಂದಿನ ದಿನಗಳಲ್ಲಿ ಬೇರೆ ಬೇರೆ ಸ್ಥಾನ-ಮಾನ ನೀಡಲಾಗುವುದು. ಎಚ್. ವಿಶ್ವನಾಥ್ ಸೇರಿದಂತೆ ಹಲವರು ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದರು. ಪಕ್ಷಕ್ಕಾಗಿ ತ್ಯಾಗ ಮಾಡಿದವರನ್ನು ನಾವು ಗೌರವಿಸುತ್ತೇವೆ ಎಂದರು.

ಬಳ್ಳಾರಿಯ ಜಿಂದಾಲ್‌ನಲ್ಲಿ ಕೊರೊನಾ ಸೋಂಕಿ‌ನ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಕಾರ್ಖಾನೆ ನಡೆಸಲಾಗುತ್ತಿತ್ತು. ಆದಾಗ್ಯೂ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಇನ್ನು‌ ಮೇಲೆ ಕಾರ್ಖಾನೆ ಒಳಗಿರುವವರು ಹೊರ ಬರದಂತೆ, ಅಲ್ಲಿದ್ದುಕೊಂಡೇ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ. ಕೆಲ ಇಂಡಸ್ಟ್ರೀಗಳನ್ನು ಬಂದ್ ಮಾಡಿದರೆ, ಅವುಗಳ ಪುನಾರಂಭಕ್ಕೆ 6 ತಿಂಗಳು ಇಲ್ಲವೇ ವರ್ಷಗಳ ಕಾಲ ಸಮಯ ಬೇಕಾಗುತ್ತದೆ. ಹಾಗಾಗಿ ಜಿಂದಾಲ್ ಕಾರ್ಖಾನೆ ಬಂದ್ ಮಾಡದೇ, ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸಲಾಗಿದೆ ಎಂದರು.

ದೇಶದ ಗಡಿಯಲ್ಲಿ ಚೀನಾ-ಭಾರತ ಸೈನಿಕರ ಸಂಘರ್ಷ ಕುರಿತು‌ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ. ಯುದ್ಧ ಮಾಡಬೇಕೋ? ಬೇಡವೋ? ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ಚೀನಾಕ್ಕೆ ತಕ್ಕ ಉತ್ಯರ ಕೊಡುತ್ತೇವೆ ಎಂದಿದ್ದು ಖಂಡಿತವಾಗಿ ಪ್ರತೀಕಾರದ ಪ್ರತ್ಯುತ್ತರ ನೀಡುತ್ತಾರೆ. ಚೀನಾ ಉತ್ಪನ್ನಗಳನ್ನು ನಿಷೇಧಿಸುವ, ಬಳಸದಿರುವ ಜಾಗೃತಿ ಬಂದಿದೆ. 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದ ಪ್ರತಿ ಪ್ರಜೆಯೂ ಈ ನಿರ್ಧಾರ ಮಾಡಿದರೆ ಚೀನಾ ಮಾರುಕಟ್ಟೆ ಸಹಜವಾಗಿ ಕುಸಿದು ಆರ್ಥಿಕ ಸಂಕಷ್ಟ ಅನುಭವಿಸಬೇಕಾಗುತ್ತದೆ. ಚೀನಾ ವಿರುದ್ಧ ಇದೇ ದೊಡ್ಡ ಸಮರ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಮುಖಂಡರಾದ ಸಿ.ವಿ.ಚಂದ್ರಶೇಖರ,ನವೀನ್ ಗುಳಗಣ್ಣನವರ್, ಅಮರೇಶ್ ಕರಡಿ ಸೇರಿದಂತೆ ಇತರರು ಇದ್ದರು.

Please follow and like us:
error