ಬೀದಿಗೆ ಬಿದ್ದ ಚಮ್ಮಾರರ ಬದುಕು!

ಚಮ್ಮಾರ ಕುಟುಂಬಗಳು ಕಣ್ಮರೆ

ಇಂದು ಎಲ್ಲ ಕ್ಷೇತ್ರಗಳ ಮೇಲೆ ಆಧುನಿಕತೆ ತನ್ನ ಪ್ರಭಾವ ಬೀರಿದ್ದು, ಸಾಂಪ್ರದಾಯಿಕ ವೃತ್ತಿ, ಕಲೆಗಳ ಮೇಲೆ ತನ್ನ ಅಧಿಪತ್ಯ ಸಾಧಿಸಿದೆ. ಇದರಿಂದ ಸಾಂಪ್ರದಾಯಿಕ ವೃತ್ತಿಯನ್ನೇ ನಂಬಿ ಬದುಕುತ್ತಿದ್ದ ಅದೆಷ್ಟೋ ಕುಟುಂಬಗಳು ತುತ್ತಿನ ಚೀಲ ತುಂಬಿಸಿಕೊಳ್ಳಲು ಇತರ ವೃತ್ತಿ ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹಲವು ಸಾಂಪ್ರದಾಯಿಕ ವೃತ್ತಿಗಳು ತೆರೆಮರೆಗೆ ಸರಿದಿದ್ದು, ಚಮ್ಮಾರ ವೃತ್ತಿಯೂ ಆಧುನಿಕತೆಯ ದಾಳಿಗೆ ಸಿಲುಕಿದೆ. ಚಮ್ಮಾರಿಕೆಯನ್ನೇ ನಂಬಿ ಬದುಕುತ್ತಿದ್ದ ಇಲ್ಲಿನ ಬಹುತೇಕ ಚಮ್ಮಾರ ಕುಟುಂಬಗಳು ಕಣ್ಮರೆಯಾಗುತ್ತಿವೆ. ಆದರೆ, ಸಾಂಪ್ರದಾಯಿಕ ವೃತ್ತಿ ಬಿಟ್ಟು ಬೇರೆ ವೃತ್ತಿ ತಿಳಿಯದ ಕುಟುಂಬಗಳು ಮಾತ್ರ ಇಂದಿಗೂ ಚಮ್ಮಾರಿಕೆಯನ್ನೇ ನೆಚ್ಚಿಕೊಂಡಿದ್ದು ನಗರದ ಮುಖ್ಯ ಸ್ಥಳಗಳಲ್ಲಿ, ಮರದ ನೆರಳಿನಲ್ಲಿ, ಗೂಡಂಗಡಿಗಳಲ್ಲಿ ತಮ್ಮ ವೃತ್ತಿ ಮುಂದುವರಿಸಿವೆ.

ಬೆಂಗಳೂರು, ಎ.19: ಬೀದಿ ಬದಿಯ ಪುಟ್ಟ ಪೆಟ್ಟಿ ಅಂಗಡಿಯೋ ಅಥವಾ ಗೋಣಿಚೀಲ ಹರಡಿಕೊಂಡು, ಹರಕು ಛತ್ರಿ ಹರಡಿಕೊಂಡು, ಒಂದಷ್ಟು ಹರಿದ ಚಪ್ಪಲಿಗಳನ್ನು ಹೊಲೆಯುತ್ತಾ ಕೂತಿರುವ ಚಮ್ಮಾರರ ಬದುಕು ಇಂದು ಕೊರೋನ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಕ್ಷರಶಃ ಬೀದಿಗೆ ಬಿದ್ದಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷವಾದರೂ, ಸರಕಾರಗಳು ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡಿದರೂ, ಇವತ್ತಿಗೂ ಚಮ್ಮಾರರ ಬದುಕು ಬದಲಾಗಿಲ್ಲ. ವಿಜ್ಞಾನ, ತಂತ್ರಜ್ಞಾನ ಮುಂದುವರಿದರೂ, ಮನುಷ್ಯ ಚಂದ್ರ ಗ್ರಹಕ್ಕೆ ಹೋಗಿಬಂದರೂ ಇವರನ್ನು ಮನುಷ್ಯರಂತೆ ನೋಡುವುದೂ ಸಾಧ್ಯವಾಗಿಲ್ಲ. ಈಗಲೂ ಹಾಗೆಯೇ ಜೀವನ ದೂಡುತ್ತಿದ್ದು, ರಸ್ತೆ ಬದಿಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಚಪ್ಪಲಿ ಹೊಲಿದರೂ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅಲ್ಲದೇ, ನಿತ್ಯ ವೃತ್ತಿಗೆ ಅಗತ್ಯವಿರುವ ಪರಿಕರಗಳಿಗೂ ಪರಿತಪಿಸುವಂತಾಗಿದೆ. ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಇದ್ದರೂ ಇವರ ಪಾಲಿಗೆ ಇಲ್ಲದಂತಾಗಿದೆ.

ಬಿದಿ ಬದಿಯಲ್ಲಿ ಬಿಸಿಲಲ್ಲೋ ಅಥವಾ ಕೊಡೆಯ ಕೆಳಗೋ ಅಥವಾ ಸರಕಾರ ನೀಡಿರುವ ಗೂಡು ಅಂಗಡಿಗಳಲ್ಲೂ ಕುಳಿತು ತಮ್ಮ ಕಾಯಕ ಮಾಡುತ್ತಿದ್ದ ಚಮ್ಮಾರರು, ಕೊರೋನ ಲಾಕ್‌ಡೌನ್‌ನಿಂದ ಈಗ ಹೊಟ್ಟೆಪಾಡಿಗಾಗಿ ಮನೆಮನೆಗೆ ಹೋಗಿ ತಮ್ಮ ಕಾಯಕ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ‘ಜನ ಹೊರಗೇ ಅಡ್ಡಾಡುವುದಿಲ್ಲ. ಹೀಗಾಗಿ ಪಾದರಕ್ಷೆ ರಿಪೇರಿ ಕೆಲಸವೂ ಸಿಗುತ್ತಿಲ್ಲ. ಕೊರೋನ ಲಾಕ್‌ಡೌನ್ ಪರಿಣಾಮದಿಂದ ನಿರುದ್ಯೋಗ ಸೃಷ್ಟಿಯಾಗಿದೆ. ಪರಿಣಾಮ ಸಾವಿರಾರು ಜನರ ಬದುಕು ಈಗ ಮೂರಾಬಟ್ಟೆಯಾಗಿದೆ’ ಎಂಬುದು ಚಮ್ಮಾರ ವೃತ್ತಿಯನ್ನೇ ನಂಬಿ ಬದುಕುತ್ತಿರುವವರ ಮಾತು.

ದುಡಿದರಷ್ಟೇ ಅಂದಿನ ಊಟ ಎನ್ನುವ ಸ್ಥಿತಿಯಲ್ಲಿರುವ ಚಮ್ಮಾರರು ಕೊರೋನ ಲಾಕ್‌ಡೌನ್‌ನಿಂದ ಸಂಪೂರ್ಣ ಅತಂತ್ರವಾಗಿದ್ದು, ಬೀದಿ ಬದಿ ಪಾದರಕ್ಷೆ ಹೊಲಿಯುವ ಕೈಗಳಿಗೆ ಈಗ ಉದ್ಯೋಗ ಬೇಕಾಗಿದೆ. ಲಾಕ್‌ಡೌನ್ ಕಾರಣಕ್ಕೆ ಸಂತೆ, ಬಝಾರ್, ಮಾರುಕಟ್ಟೆ ಬಂದ್ ಇರುವುದರಿಂದ ಅವರು ಹೊಟ್ಟೆಪಾಡಿಗೆ ಪಡಬಾರದ ಕಷ್ಟಪಡುತ್ತಿದ್ದಾರೆ. ಈಗ ಅವರೆಲ್ಲ ಮನೆ ಮನೆಗೆ ತೆರಳಿ ಚಪ್ಪಲಿ ರಿಪೇರಿ ಮಾಡಲು ತೀರ್ಮಾನಿಸಿದ್ದಾರೆ.

ಸರಕಾರಕ್ಕೆ ಬಾಡಿಗೆ: ಪ್ರತಿದಿನ ತಾವು ಕುಳಿತುಕೊಳ್ಳುವ ಸ್ಥಳದ ಅಥವಾ ಗೂಡಂಗಡಿಯ ಬಾಡಿಗೆಯನ್ನು ಸರಕಾರಕ್ಕೆ ಕೊಡಬೇಕು. ವ್ಯಾಪಾರವಾಗಲಿ, ಬಿಡಲಿ, ಸರಕಾರ ಅದನ್ನು ಕೇಳುವುದಿಲ್ಲ. ಹರಿದ ಒಂದು ಚಪ್ಪಲಿ ಹೊಲಿದಿದ್ದಕ್ಕೆ 10-15 ರೂ. ಸಿಗುತ್ತೆ. ಆದರೆ, ಕೆಲವರು ಅದರಲ್ಲೂ ಚೌಕಾಸಿಗಿಳಿದು 5 ರೂಪಾಯನ್ನಷ್ಟೇ ಕೊಟ್ಟು ಹೋಗುತ್ತಾರೆ. ಲಾಕ್‌ಡೌನ್‌ನಿಂದ ದಿನಕ್ಕೆ 2-3 ಮಂದಿ ಬಂದರೆ ಅದೇ ಹೆಚ್ಚು. ಲಾಕ್‌ಡೌನ್‌ನಿಂದ ನನ್ನ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಚಮ್ಮಾರ ವೆಂಕಟೇಶ್ ತಮ್ಮ ಕಷ್ಟವನ್ನು ‘ವಾರ್ತಾಭಾರತಿ’ಯೊಂದಿಗೆ ಹಂಚಿಕೊಂಡರು.

 ನಮ್ಮ ಬಗ್ಗೆ ಕೇಳೋರು ಯಾರಿಲ್ಲ. ಈ ಸರಕಾರಗಳಿಂದ ಯಾವುದೇ ಉಪಯೋಗವಾಗಿಲ್ಲ. ಈ ವೃತ್ತಿ ಬಿಟ್ಟು ನಮಗೆ ಬೇರೇನು ತಿಳಿದಿಲ್ಲ. ನಿವೇಶನ, ಬಿಪಿಎಲ್ ಕಾರ್ಡ್ ಸೇರಿದಂತೆ ಸರಕಾರದಿಂದ ಯಾವುದೇ ಬಗೆಯ ಸೌಲಭ್ಯ ಸಿಕ್ಕಿಲ್ಲ. ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜವಾಗಿಲ್ಲ. ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ ಎಲ್ಲಿದೆ ಎಂಬುದು ತಿಳಿದಿಲ್ಲ. ಅದು ಯಾರ ಸಲುವಾಗಿ ಇದೆಯೋ ತಿಳಿಯುತ್ತಿಲ್ಲ.

ವೆಂಕಟೇಶ್,  ಚಮ್ಮಾರ

ಲಾಕ್‌ಡೌನ್‌ನಿಂದ ಎಲ್ಲ ರೀತಿಯ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಚಮ್ಮಾರರು ತಮ್ಮ ವೃತ್ತಿಯನ್ನು ಮುಂದುವರಿಸುವುದು ಕಷ್ಟವಾಗಿದೆ. ಸರಕಾರ ಬೀದಿ ಬದಿ ವ್ಯಾಪಾರಿಗಳಿಗೆ ಉತ್ತಮ ಸೌಲಭ್ಯ ಒದಗಿಸಬೇಕು. ಇಂತಹ ಪರಿಸ್ಥಿತಿಯನ್ನು ಎದುರಿಸಲು ಆರ್ಥಿಕ ಸಹಾಯ ಮಾಡಬೇಕು.

ರಂಗಸ್ವಾಮಿ,

ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ

Please follow and like us:
error