ಬಿಜೆಪಿ ಸದಸ್ಯರಿಂದ ಹಾಡಹಗಲೇ ಸಂವಿಧಾನಕ್ಕೆ ಅಪಚಾರ, ಪ್ರಜಾಪ್ರಭುತ್ವದ ಕಗ್ಗೊಲೆ-ಸಿದ್ದರಾಮಯ್ಯ

ದೇಶದ ಸಂಸದೀಯ ಪ್ರಜಾಪ್ರಭುತ್ವ ಇತಿಹಾಸದ ಕಪ್ಪು ಅಧ್ಯಾಯ BJP, JDS ಎರಡೂ ಪಕ್ಷಗಳ ನಾಯಕರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು.

ಬೆಂಗಳೂರು : ರಾಜ್ಯದ ವಿಧಾನಪರಿಷತ್ ನಲ್ಲಿ ಬಿಜೆಪಿ ಸಚಿವರು ಮತ್ತು ಸದಸ್ಯರಿಂದ ನಡೆದಿರುವ ಗೂಂಡಾಗಿರಿ ರಾಜ್ಯದ ಮಾತ್ರವಲ್ಲ, ದೇಶದ ಸಂಸದೀಯ ಪ್ರಜಾಪ್ರಭುತ್ವ ಇತಿಹಾಸದ ಕಪ್ಪು ಅಧ್ಯಾಯ. ಇದು ಖಂಡಿತ ಸಾಂವಿಧಾನಿಕ ಪ್ರಜಾಪ್ರಭುತ್ವ ಅಲ್ಲ, ಇದು ನರೇಂದ್ರ ಮೋದಿ ಪ್ರಜಾಪ್ರಭುತ್ವ. This is Criminal act. ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ವಿಧಾನಪರಿಷತ್ ಸಭಾಪತಿಗಳನ್ನು ಅವರ ಕಚೇರಿಯಲ್ಲಿ ಬಲತ್ಕಾರದಿಂದ ಕೂಡಿಹಾಕಿ, ಅವರ ಅನುಮತಿ ಇಲ್ಲದೆ ಉಪಸಭಾಪತಿಗಳನ್ನು ಸಭಾಪತಿ ಪೀಠದ ಮೇಲೆ ಕೂರಿಸಿ ಕಲಾಪ ನಡೆಸಲು ಹೊರಟಿರುವ ಬಿಜೆಪಿ ಸದಸ್ಯರು ಹಾಡಹಗಲೇ ಸಂವಿಂಧಾನಕ್ಕೆ ಅಪಚಾರ ಎಸಗಿದ್ದಾರೆ, ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದ್ದಾರೆ. .ವಿಧಾನಸಭೆ ಮತ್ತು ವಿಧಾನಪರಿಷತ್ ಕಲಾಪ ನಡೆಸಲು ಸರ್ವಸಮ್ಮತಿಯಿಂದ ರಚಿಸಲಾದ ನಿಯಮಾವಳಿಗಳಿವೆ. ಬಿಜೆಪಿ ಸದಸ್ಯರ ಇಂದಿನ ನಡವಳಿಕೆ ಆ ನಿಯಮಾಳಿಗಳಿಗೆ ಅನುಗುಣವಾಗಿತ್ತೇ ಎಂದು ಕಾನೂನು ಸಚಿವರು ಮಾತ್ರವಲ್ಲ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಜನತೆಗೆ ತಿಳಿಸಬೇಕು.

ವಿಧಾನ ಪರಿಷತ್ ಸಭಾಪತಿ ವಿದೇಶ ಪ್ರವಾಸ, ಅನಾರೋಗ್ಯ ಇಲ್ಲವೇ ಇನ್ನು ಯಾವುದೋ ಕಾರಣಕ್ಕೋ ಕರ್ತವ್ಯನಿರ್ವಹಣೆ ಮಾಡಲು ಸಾಧ್ಯವಾಗದೆ ಇದ್ದಾಗ ಸಭಾಪತಿಯಾಗಿ ಕಾರ್ಯನಿರ್ವಹಿಸಲು ಅವರು ಉಪಸಭಾಪತಿಯವರಿಗೆ ಅವಕಾಶವನ್ನು ನೀಡಬಹುದೆಂದು ಸದನದ ನಿಯಮಾವಳಿ ಹೇಳಿದೆ. ಇದರ ಪಾಲನೆಯಾಗಿದೆಯೇ?

ವಿಧಾನಪರಿಷತ್ ನ ಬಿಜೆಪಿ ಸದಸ್ಯರು ಸಭಾಪತಿ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲು ನೋಟೀಸ್ ನೀಡಿದ್ದರು. ನಿಯಮಾವಳಿ ಪ್ರಕಾರ ಅದರ ಇತ್ಯರ್ಥಕ್ಕೆ ಹದಿನಾಲ್ಕು ದಿನಗಳ ಕಾಲಾವಕಾಶ ಇದೆ. ಆದರೆ ನೊಟೀಸ್ ಕ್ರಮಬದ್ದವಾಗಿಲ್ಲ ಎಂದು ಸಭಾಪತಿಯವರು ತಿರಸ್ಕರಿಸಿದ್ದ ಕಾರಣ ಆ ವಿಷಯ ಇಂದಿನ ಅಜೆಂಡಾದಲ್ಲಿ ಇರಲಿಲ್ಲ.

ಅವಿಶ್ವಾಸ ನಿರ್ಣಯ ಅಜೆಂಡಾದಲ್ಲಿ ಸೇರ್ಪಡೆಯಾದ ನಂತರ ಸದನದಲ್ಲಿ ಅದನ್ನು ಕನಿಷ್ಠ ಹತ್ತು ಜನ ಯಾವುದೇ ಚರ್ಚೆ ಇಲ್ಲದೆ ಬೆಂಬಲಿಸಬೇಕು. ಅದರ ಆಧಾರದಲ್ಲಿ ಮುಂದಿನ ಐದು ದಿನಗಳೊಳಗೆ ನಿರ್ಣಯದ ಚರ್ಚೆಗೆ ಸಭಾಪತಿಗಳು ದಿನ ಗೊತ್ತುಪಡಿಸಬೇಕು. ಈ ನಿಯಮ ಪಾಲನೆಯಾಗಿದೆಯೇ?

ಬಿಜೆಪಿಯವರ ಅವಿಶ್ವಾಸ ನಿರ್ಣಯದ ನೊಟೀಸ್ ಸಭಾಪತಿಯವರಿಂದ ತಿರಸ್ಕೃತಗೊಂಡಿದೆ ಮತ್ತು ಅಜೆಂಡಾದಲ್ಲಿಯೂ ಇರಲಿಲ್ಲ. ಹೀಗಿದ್ದಾಗ ಬಿಜೆಪಿ ಸದಸ್ಯರೇ ಅಜೆಂಡಾವನ್ನು ನಿರ್ಧರಿಸಿ, ತಾವೇ ಉಪಸಭಾಪತಿಯವರನ್ನು ಅಕ್ರಮವಾಗಿ ಪೀಠದಲ್ಲಿ ಕೂರಿಸಿ ತಾವೇ ನಿರ್ಧರಿಸಿದ ಅಜೆಂಡಾ ಮೂಲಕ ಕಲಾಪ ನಡೆಸಲು ಇದೇನು ಬನಾನ ರಿಪಬ್ಲಿಕಾ?  ವಿಧಾನಪರಿಷತ್ ಅಧಿವೇಶನ ನಡೆಸಲು ಸಂಸದೀಯ ವ್ಯವಹಾರಗಳ ಖಾತೆಯ ಕಾರ್ಯದರ್ಶಿಗಳು ಸಭಾಪತಿಯವರಿಗೆ ನೇರವಾಗಿ ಪತ್ರ ಬರೆದಿದ್ದೇ ಅಕ್ರಮ ನಡವಳಿಕೆ. ಹೀಗಿದ್ದರೂ ಸಭಾಪತಿಗಳು ಸಂಘರ್ಷಕ್ಕಿಳಿಯದೆ ಸೌಜನ್ಯಪೂರ್ವಕವಾಗಿ ಅಧಿವೇಶನ ಕರೆದಿದ್ದಾರೆ.

ನಿಯಮಾವಳಿ ಪ್ರಕಾರ ಸದನದಲ್ಲಿ ಕೋರಮ್ ಇರುವ ಬಗ್ಗೆ ಮಾರ್ಷಲ್ ಗಳಿಂದ ದೃಡೀಕರಿಸಿದ ನಂತರ ಸೂಚನಾ ಗಂಟೆ ನಿಲ್ಲಿಸಲು ತಿಳಿಸಿ ಸಭಾಪತಿಗಳು ಬಂದು ಪೀಠವನ್ನು ಅಲಂಕರಿಸಬೇಕಾಗುತ್ತದೆ. ಇಂದು ಸೂಚನಾಗಂಟೆ ನಿಲ್ಲಿಸುವ ಮೊದಲೇ ಬಿಜೆಪಿ ಸದಸ್ಯರು ಉಪಸಭಾಪತಿಯವರನ್ನು ಕೂರಿಸಿ ಕಲಾಪ ನಡೆಸಲು ಹೊರಟಿದ್ದಾರೆ.

ರಾಜ್ಯದ ಸಚಿವರಾದ ಡಾ.ಅಶ್ವತ್ ನಾರಾಯಣ್ ಅವರು ಖುದ್ದಾಗಿ ಸಭಾಪತಿ ಪೀಠದಲ್ಲಿ ಉಪಸಭಾಪತಿಯವರನ್ನು ಅಕ್ರಮವಾಗಿ ಕೂರಿಸ್ತಾರೆ, ಕಾನೂನು ಸಚಿವ ಮಾಧುಸ್ವಾಮಿ ಅವರು ಸದನದಲ್ಲಿ ಮಾರ್ಷಲ್ ಗಳಿಗೆ ಧಮಕಿ ಹಾಕ್ತಾರೆ. ಇಬ್ಬರೂ ತಮ್ಮ ಪಕ್ಷದ ಸದಸ್ಯರನ್ನು ಗೂಂಡಾಗಿರಿಗೆ ಪ್ರಚೋದಿಸುತ್ತಾರೆ. ಇವರು ಸಚಿವರಾಗಲು ಅರ್ಹರೇ?

ವಿಧಾನಪರಿಷತ್ ನಲ್ಲಿ ಇಂದು ನಡೆದಿರುವ ಘಟನಾವಳಿಗಳು ಬಿಜೆಪಿ ಮತ್ತು ಜೆಡಿ(ಎಸ್) ಸದಸ್ಯರು ಕೂಡಿ ನಡೆಸಿರುವ ಯೋಜಿತ ಷಡ್ಯಂತ್ರ. ಇದರಿಂದ ಬಿಜೆಪಿ ಮತ್ತು ಜೆಡಿ (ಎಸ್) ನಡುವಿನ ಒಳಒಪ್ಪಂದ ಬಯಲಾಗಿದೆ. ಇದಕ್ಕಾಗಿ ಎರಡೂ ಪಕ್ಷಗಳ ನಾಯಕರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು.

ಘನತೆವೆತ್ತ ರಾಜ್ಯಪಾಲರು ವಿಧಾನಪರಿಷತ್ ನಲ್ಲಿ ನಡೆದ ಘಟನಾವಳಿಗಳನ್ನು ನಿಷ್ಪಕ್ಷಪಾತನದಿಂದ, ಸಂಸದೀಯ ಪ್ರಜಾಪ್ರಭುತ್ವದ ಆಶಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಭರವಸೆ ನಮಗಿದೆ ಎಂದು ಹೇಳಿದ್ದಾರೆ.

 

Please follow and like us:
error