ಬಿಜೆಪಿ ಪಕ್ಷದ ಸದಸ್ಯರ ಸಂಖ್ಯೆ ಎಷ್ಟು ಗೊತ್ತಾ?

ಬಿಲಾಸಪುರ: ಭಾರತೀಯ ಜನತಾ ಪಕ್ಷದ ಒಟ್ಟು ಸದಸ್ಯರ ಸಂಖ್ಯೆ ಇದೀಗ 17.5 ಕೋಟಿಗೆ ಹೆಚ್ಚಿದ್ದು, ಕಳೆದ 54 ದಿನಗಳಲ್ಲಿ ಆರು ಕೋಟಿ ಮಂದಿ ಹೊಸದಾಗಿ ಸದಸ್ಯತ್ವ ಪಡೆದಿದ್ದಾರೆ ಎಂದು ಪಕ್ಷದ ಕಾರ್ಯಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಪ್ರಕಟಿಸಿದ್ದಾರೆ.

ಕಳೆದ ಜೂನ್‌ನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಆರಂಭಿಸಿದಾಗಿನಿಂದ 54 ದಿನದಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 11 ಕೋಟಿಯಿಂದ 17.5 ಕೋಟಿಗೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಜೂನ್‌ನಲ್ಲಿ ಪಕ್ಷದ ನೂತನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಹಿಮಾಚಲ ಪ್ರದೇಶದ ಬಿಲಾಸಪುರ ಜಿಲ್ಲೆಗೆ ಮೊಟ್ಟಮೊದಲ ಬಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಡ್ಡಾ ಈ ವಿಷಯ ಪ್ರಕಟಿಸಿದ್ದಾರೆ. 370ನೇ ವಿಧಿ ರದ್ದತಿ ಸೇರಿದಂತೆ ನರೇಂದ್ರ ಮೋದಿ ಸರ್ಕಾರದ ನೀತಿಗಳು ಹಾಗೂ ಕೆಲಸಗಳು ಪಕ್ಷದ ಜನಪ್ರಿಯತೆ ಹೆಚ್ಚಲು ಕಾರಣ ಎನ್ನುವುದು ಅವರ ಅಭಿಮತ.

ರಾಜ್ಯಸಭೆಯಲ್ಲಿ ಬಹುಮತದ ಕೊರತೆ ಇದ್ದರೂ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನಿಡಿದ್ದ ಸಂವಿಧಾನದ 370ನೇ ವಿಧಿ ಹಾಗೂ 35ಎ ವಿಧಿಯನ್ನು ರದ್ದು ಮಾಡುವ ಮಸೂದೆಯನ್ನು ಆಂಗೀಕರಿಸಲು ಬಿಜೆಪಿಗೆ ಹೇಗೆ ಸಾಧ್ಯವಾಯಿತು ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಅಚ್ಚರಿಯಾಗಿದೆ ಎಂದು ನಡ್ಡಾ ಬಣ್ಣಿಸಿದರು.

ಇದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಂಥ ಪ್ರಮುಖ ಕಾನೂನುಗಳು ಕೂಡಾ ಜಾರಿಯಲ್ಲಿರಲಿಲ್ಲ ಎಂದು ನಡ್ಡಾ ಹೇಳಿದರು.

Please follow and like us:
error