ಬಿಜೆಪಿಗೆ ಬುದ್ಧಿ ಹೇಳುವ ನೈತಿಕತೆ ಕಾಂಗ್ರೆಸ್‌ಗಿಲ್ಲ: ಆರ್.ಅಶೋಕ್

ಬೆಂಗಳೂರು, ಡಿ.18: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನಡೆಯುತ್ತಿರುವ ಆರೋಪ ಪ್ರತ್ಯಾರೋಪಗಳ ಕುರಿತು ಪ್ರತಿಕ್ರಿಯಿಸಿರುವ ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್.ಅಶೋಕ್, ಬಿಜೆಪಿಗೆ ಬುದ್ಧಿ ಹೇಳುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಇದೆ ಅನ್ನೋ ಕಾರಣಕ್ಕೆ ಸುವರ್ಣ ಚತುಷ್ಪಥ ರಸ್ತೆ ಯೋಜನೆಯನ್ನೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಬದಲಾವಣೆ ಮಾಡಿತು ಎಂದು ದೂರಿದರು.

ಅಟಲ್ ಬಿಹಾರಿ ವಾಜಪೇಯಿ ಜಾರಿಗೆ ತಂದ ಯೋಜನೆಯನ್ನು ಯಾವ ಕಾರಣಕ್ಕಾಗಿ ಬದಲಾವಣೆ ಮಾಡಲಾಯಿತು ಎಂಬುದರ ಕುರಿತು ಮೊದಲು ಕಾಂಗ್ರೆಸ್‌ನವರು ಉತ್ತರಿಸಲಿ. ಆನಂತರ, ನಾವು ಇಂದಿರಾ ಕ್ಯಾಂಟೀನ್ ಬಗ್ಗೆ ಮಾತನಾಡುತ್ತೇವೆ. ನಮಗೆ ಬುದ್ಧಿ ಹೇಳುವ ನೈತಿಕತೆ ಕಾಂಗ್ರೆಸ್‌ನವರಿಗಿಲ್ಲ ಎಂದು ಅವರು ತಿರುಗೇಟು ನೀಡಿದರು.

ಶಾಸಕ ರಾಜುಗೌಡ ಇಂದಿರಾ ಕ್ಯಾಂಟೀನ್‌ಗಳಿಗೆ ಮಹರ್ಷಿ ವಾಲ್ಮೀಕಿ ಹೆಸರಿಡುವಂತೆ ಮನವಿ ಸಲ್ಲಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅನ್ನಪೂರ್ಣ ಹೆಸರನ್ನು ಸೂಚಿಸಿದ್ದಾರೆ. ಅದೇ ರೀತಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ‘ಅನ್ನ ಕುಟೀರ’ ಎಂಬ ಹೆಸರಿಡುವಂತೆ ಸಲಹೆ ನೀಡಿದ್ದಾರೆ. ಇವುಗಳನ್ನೆಲ್ಲ ಪರಿಶೀಲಿಸಿ ರಾಜ್ಯ ಸರಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಅಶೋಕ್ ಹೇಳಿದರು.

ಇಂದಿರಾ ಕ್ಯಾಂಟೀನ್ ಬಗ್ಗೆ ಈಗಾಗಲೇ ಹಲವಾರು ಆರೋಪಗಳು ಕೇಳಿ ಬಂದಿವೆ. ಕ್ಯಾಂಟೀನ್ ಊಟ ಮಾಡುವವರಿಗಿಂತ ಹೆಚ್ಚಿನ ಮಂದಿಯ ಲೆಕ್ಕವನ್ನು ತೋರಿಸಲಾಗುತ್ತಿದೆ. ಬಡವರಿಗೆ ಈ ಯೋಜನೆಯ ಲಾಭ ಸಿಗಬೇಕು ಎಂಬುದು ನಮ್ಮ ಉದ್ದೇಶ. ಅದಕ್ಕಾಗಿ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಡಿಸಿಎಂ ಹುದ್ದೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ರೇಣುಕಾಚಾರ್ಯ ಹಾಗೂ ಡಿಸಿಎಂ ಅಶ್ವಥ್ ನಾರಾಯಣ ನಡುವೆ ನಡೆಯುತ್ತಿರುವ ವಾಗ್ವಾದಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಡಿಸಿಎಂ ಹುದ್ದೆ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನಾನು ತುಂಬಾ ಚಿಕ್ಕವನು. ಇದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನನ್ನದು ನೋ ಕಾಮೆಂಟ್ ಎಂದರು.

Please follow and like us:
error