ಬಿಎಸ್‌ವೈ ಮೇಲಿನ ದ್ವೇಷಕ್ಕೆ ಕೇಂದ್ರ ಸರಕಾರ ರಾಜ್ಯದ ಹಿತ ಬಲಿ ಕೊಡುತ್ತಿದೆ: ಸಿದ್ದರಾಮಯ್ಯ

ಬೆಂಗಳೂರು, ಜ. 13: ‘ಮುಖ್ಯಮಂತ್ರಿ ಯಡಿಯೂರಪ್ಪನವರ ಮಾತಿಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕವಡೆ ಕಾಸಿನ ಕಿಮ್ಮತ್ತು ಕೊಡ್ತಿಲ್ಲ. ಅನುದಾನ ಕೋರಿ ಬೇಡಿಕೆ ಸಲ್ಲಿಸಲು ಅವಕಾಶ ನೀಡದೆ ಅವಮಾನಿಸುತ್ತಿದ್ದಾರೆ. ಯಡಿಯೂರಪ್ಪನವರ ಮೇಲಿನ ದ್ವೇಷಕ್ಕೆ ರಾಜ್ಯದ ಹಿತವನ್ನು ಕೇಂದ್ರ ಸರಕಾರ ಬಲಿಕೊಡುತ್ತಿದೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಪ್ರಧಾನ ಮಂತ್ರಿ 15 ಅಂಶಗಳ ಕಾರ್ಯಕ್ರಮಗಳಿಗೆ ಕೇಂದ್ರ ನೀಡಬೇಕಾಗಿದ್ದು 5,335 ಕೋಟಿ ರೂ.ಗಳ ಪೈಕಿ ಬಿಡುಗಡೆಯಾಗಿದ್ದು 911 ಕೋಟಿ ರೂ.ಗಳು ಮಾತ್ರ ಎಂದು ಇದೇ ವೇಳೆ ಲೇವಡಿ ಮಾಡಿದ್ದಾರೆ.

‘ವಸತಿ, ಶಿಶು ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಸೇರಿದಂತೆ 24 ಇಲಾಖೆಗಳ ಕಾರ್ಯಕ್ರಮಗಳು ಹಣದ ಕೊರತೆಯಿಂದ ಸ್ಥಗಿತಗೊಂಡಿವೆ. ರಾಜ್ಯದಲ್ಲಿನ ಬಿಜೆಪಿ ನೇತೃತ್ವದ ಸರಕಾರ ದಿವಾಳಿಯಾಗುತ್ತಿದೆ ಎಂದು ಸಿದ್ದರಾಮಯ್ಯ ಇದೇ ವೇಳೆ ವಾಗ್ದಾಳಿ ನಡೆಸಿದ್ದಾರೆ.

‘ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳ ಅನುದಾನ, ತೆರಿಗೆ ಪಾಲು ಮತ್ತು ಜಿಎಸ್ಟಿ ಪರಿಹಾರ ಸೇರಿದಂತೆ 73 ಸಾವಿರ ಕೋಟಿ ರೂ.ಹಣ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರಕಾರ ನೀಡಬೇಕಾಗಿದೆ. ಈ ಬಾಕಿ ಹಣವನ್ನು ಕೇಳಲು ಅಸಮರ್ಥರಾಗಿರುವ ಸಿಎಂ ಬಿಎಸ್‌ವೈ ಮತ್ತು ಬಿಜೆಪಿ ನಾಯಕರು ರಾಜ್ಯಕ್ಕೆ ದ್ರೋಹ ಎಸಗುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

Please follow and like us:
error