ಬಿಎಸ್‌ವೈ–ಅನಂತಕುಮಾರ ಮಾತು ಅಸಲಿ : ಪ್ರಯೋಗಾಲಯ

ವಿಧಿ ವಿಜ್ಞಾನ ಪ್ರಯೋಗಾಲಯ ವರದಿ

ಬೆಂಗಳೂರು: ‘ಬಿಜೆಪಿ ವರಿಷ್ಠರಿಗೆ ಕಪ್ಪ ಕಾಣಿಕೆ ನೀಡಲಾಗಿದೆ ಎನ್ನಲಾದ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಚ್.ಎನ್‌. ಅನಂತಕುಮಾರ್‌ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ನಡುವೆ ನಡೆದಿರುವ ಮಾತುಕತೆ ಅಸಲಿ’ ಎಂದು ವಿಧಿವಿಜ್ಞಾನ ಪ್ರಯೋಗಾಲಯ ದೃಢಪಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್ ಅವರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ ಸಮಯದಲ್ಲಿ ವಶಪಡಿಸಿಕೊಂಡಿದ್ದಾರೆ ಎನ್ನಲಾದ ಡೈರಿಯ ಆಯ್ದ ಭಾಗಗಳನ್ನು 2017ರ ಫೆಬ್ರುವರಿಯಲ್ಲಿ ಬಿಜೆಪಿ ನಾಯಕರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ಇದರಲ್ಲಿ ರಾಜ್ಯ ಕಾಂಗ್ರೆಸ್‌, ಹೈಕಮಾಂಡ್‌ನ ಪ್ರಮುಖ ನಾಯಕರಿಗೆ ಕಪ್ಪ ಕಾಣಿಕೆ ನೀಡಿರುವ  ವಿವರಗಳಿವೆ ಎಂದೂ ಅವರು ಆರೋಪಿಸಿದ್ದರು.

ಇದರ ಬೆನ್ನಲ್ಲೇ, ಫೆಬ್ರುವರಿ 12ರಂದು ನಡೆದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ ಮತ್ತು ಅನಂತಕುಮಾರ್‌ ತಮ್ಮ ಪಕ್ಷದ ವರಿಷ್ಠರಿಗೆ ಕಪ್ಪ ಕಾಣಿಕೆ ನೀಡಿರುವ ಕುರಿತು ಮಾತುಕತೆಯಾಡಿದ್ದಾರೆ ಎನ್ನಲಾದ ವಿಡಿಯೋ–ಆಡಿಯೋ ಸಿ.ಡಿಗಳನ್ನು ಕಾಂಗ್ರೆಸ್‌ ನಾಯಕರು ಬಿಡುಗಡೆ ಮಾಡಿದ್ದರು. ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ ಸದಾನಂದಗೌಡ ಭಾಷಣ ಮಾಡುತ್ತಿದ್ದಾಗ, ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತಿದ್ದ ಇವರಿಬ್ಬರೂ ನಡೆಸಿದ್ದರೆನ್ನಲಾದ ಮಾತುಕತೆ ಧ್ವನಿ ಮತ್ತು ದೃಶ್ಯಗಳು ಮಾಧ್ಯಮಗಳ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು.

‘ಈ ವಿಡಿಯೋ ಅಸಲಿಯಲ್ಲ, ನಕಲಿ’ ಎಂದು ಬಿಜೆಪಿ ನಾಯಕರು ಪ್ರತಿಪಾದಿಸಿದ್ದರು. ‘ಸರ್ಕಾರವನ್ನು ಉರುಳಿಸಲು ಬಿಜೆಪಿ ನಡೆಸಿದ ಷಡ್ಯಂತ್ರ’ ಇದರಿಂದ ಬಯಲಾಗಿದೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದರು.

Please follow and like us:
error