ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ: ವಿಕಾಸ್ ಕಿಶೋರ್ ಸುರಳ್ಕರ್


ಕೊಪ್ಪಳ,  : ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತವು ಬದ್ಧವಾಗಿದ್ದು, ಜಿಲ್ಲೆಯಲ್ಲಿ 2012 ರಿಂದ ಇಲ್ಲಿಯವರೆಗೆ 1500ಕ್ಕೂ ಹೆಚ್ಚು ಬಾಲ್ಯವಿವಾಹಗಳನ್ನು ತಡೆಗಟ್ಟಲಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯವನ್ನು ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿಸುವ ಸಂಕಲ್ಪದೊAದಿಗೆ, ಕರ್ನಾಟಕ ರಾಜ್ಯ ಸರ್ಕಾರವು ಬಾಲ್ಯವಿವಾಹ ನಿಷೇಧ ಕಾಯ್ದೆ-2006ಕ್ಕೆ ತಿದ್ದುಪಡಿಯನ್ನು ತಂದಿದ್ದು, ರಾಷ್ಟçಪತಿಗಳು ಈ ತಿದ್ದುಪಡಿಯನ್ನು ದಿನಾಂಕ: 26/04/2017 ರಂದು ಅಂಗೀಕರಿಸಿರುತ್ತಾರೆ. ತಿದ್ದುಪಡಿ ಕಾಯ್ದೆಯು ದಿನಾಂಕ: 03/03/2018 ರಿಂದ ಜಾರಿಯಲ್ಲಿರುತ್ತದೆ. ಈ ಕಾಯ್ದೆಯ ಕಲಂ 3(1ಎ) ಅನ್ವಯ ಮಾರ್ಚ್ 2018ರಿಂದ “ಎಲ್ಲಾ ಬಾಲ್ಯವಿವಾಹಗಳು ಅಸಿಂಧು ವಿವಾಹಗಳಾಗಿರುತ್ತವೆ”. ಬಾಲ್ಯವಿವಾಹಕ್ಕೆ ಪ್ರೋತ್ಸಾಹಿಸಿದವರಿಗೆ, ಭಾಗವಹಿಸಿದವರಿಗೆ ಹಾಗೂ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾದವರಿಗೆ ಕನಿಷ್ಠ 1 ರಿಂದ 2 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.2 ಲಕ್ಷವನ್ನು ದಂಡವನ್ನಾಗಿ ವಿಧಿಸಬಹುದಾದ ಅವಕಾಶವನ್ನು ಈ ಕಾಯ್ದೆಯು ನೀಡಿದೆ.
ಅದರಂತೆ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನವರಿಗೆ ಗುಟ್ಟಾಗಿ ಬಾಲ್ಯವಿವಾಹವನ್ನು ಮಾಡಿದವರಿಗೆ, ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆ ಮಾಡಿಕೊಂಡವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದೆ. 2012ರಿಂದ ಇಲ್ಲಿಯವರೆಗೆ ಒಟ್ಟು 46 ಪ್ರಕರಣಗಳನ್ನು ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಮತ್ತು ಇತರೆ ಕಾಯ್ದೆಯಡಿಯಲ್ಲಿ ದಾಖಲಿಸಲಾಗಿದೆ. ತಾಲ್ಲೂಕುವಾರು ಕೊಪ್ಪಳ ತಾಲ್ಲೂಕಿನಲ್ಲಿ-10, ಯಲಬುರ್ಗಾ ತಾಲ್ಲೂಕಿನಲ್ಲಿ-10, ಕುಷ್ಟಗಿ ತಾಲೂಕಿನಲ್ಲಿ-12 ಮತ್ತು ಗಂಗಾವತಿ ತಾಲ್ಲೂಕಿನಲ್ಲಿ -14 ಪ್ರಕರಣಗಳನ್ನು ಇದುವರೆಗೆ ದಾಖಲಿಸಲಾಗಿದೆ. ಈ 46 ಪ್ರಕರಣಗಳಲ್ಲಿ ಈಗಾಗಲೇ 3 ಪ್ರಕರಣಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾದ ಪುರುಷ(ವರ) ಮತ್ತು ವಧು-ವರರ ಪಾಲಕರಿಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 20,000/- ದಂಡವನ್ನು ಹಾಗೂ 1 ಪ್ರಕರಣದಲ್ಲಿ ಬಾಲ್ಯವಿವಾಹಕ್ಕೆ ಪ್ರೋತ್ಸಾಹ, ಸಹಕಾರವನ್ನು ನೀಡಿದ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ 2 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.50,000/- ದಂಡವನ್ನು ನ್ಯಾಯಾಲಯಗಳು ವಿಧಿಸಿರುತ್ತವೆ. ರಾಜ್ಯದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ರಡಿಯಲ್ಲಿ ಶಿಕ್ಷೆಯನ್ನು ವಿಧಿಸಿದ ಪ್ರಥಮ ಪ್ರಕರಣ ಮತ್ತು ಚುನಾಯಿತ ಪ್ರತಿನಿಧಿಗೆ (ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಸಧ್ಯ ಮಾಜಿ ಅಧ್ಯಕ್ಷರಿಗೆ) 2 ವರ್ಷ ಜೈಲು ಶಿಕ್ಷೆ ಮತ್ತು ರೂ. 50,000/-ದಂಡವನ್ನು ವಿಧಿಸಿದ ಪ್ರಥಮ ಪ್ರಕರಣವು ಕೊಪ್ಪಳ ಜಿಲ್ಲೆಯದ್ದಾಗಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012ರಡಿ ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗಿನ ಲೈಂಗಿಕ ಸಂಪರ್ಕವು ಅತ್ಯಾಚಾರವಾಗಿದ್ದು, ಈ ಕೃತ್ಯಕ್ಕೆ ಕನಿಷ್ಠ 20 ವರ್ಷಗಳಿಂದ ಜೀವಾವಧಿ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗಿ ಸಂಸಾರಿಕ ಜೀವನವನ್ನು ನಡೆಸಿದವರ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012ರ ವಿವಿಧ ಕಲಂ ಗಳಡಿ ಜಿಲ್ಲೆಯಲ್ಲಿ 2018ನೇ ಸಾಲಿನಲ್ಲಿ 2 ಪ್ರಕರಣಗಳು ಮತ್ತು 2019ರಲ್ಲಿ 2 ಪ್ರಕರಣಗಳು ಮತ್ತು 2020ನೇ ಸಾಲಿನಲ್ಲಿ 4 ಪ್ರಕರಣಗಳು ಸೇರಿದಂತೆ ಒಟ್ಟು 8 ಪ್ರಕರಣಗಳು ದಾಖಲಾಗಿವೆ.
ಜಿಲ್ಲೆಯ ಕನಕಗಿರಿ ತಾಲ್ಲೂಕಿನ ನಿವಾಸಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಬಾಲ್ಯವಿವಾಹದಿಂದ ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಪೋಷಣೆ ಮತ್ತು ರಕ್ಷಣೆಗಾಗಿ ಹಾಜರುಪಡಿಸಲಾಗಿದೆ. ಬಾಲಕಿಯ ಪೋಷಕರು “ಮಹ್ಮದೀಯನ್ ಕಾನೂನಿನಡಿಯಲ್ಲಿ ‘ಬಾಲಕಿಯು ಪ್ರೌಢವಸ್ಥೆ’ಗೆ ಬಂದ ತಕ್ಷಣವೇ ಮದುವೆಗೆ ಅರ್ಹಳು”ಎಂದಿದ್ದು, ಜಿಲ್ಲಾಡಳಿತವು ಅನಗತ್ಯವಾಗಿ ಮದುವೆಯನ್ನು ತಡೆದಿರುತ್ತಾರೆ ಆದ್ದರಿಂದ ಮಾನ್ಯ ನ್ಯಾಯಾಲಯವು ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಿ, ಮದುವೆಗೆ ಅವಕಾಶವನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ (ಧಾರವಾಡ ಪೀಠ)ಕ್ಕೆ ಪಿಟೇಷನ್ ನಂ 75889/ 2013ರಲ್ಲಿ ಮನವಿಯನ್ನು ಸಲ್ಲಿಸಿದ್ದು ಮಾನ್ಯ ನ್ಯಾಯಾಲಯವು ಎರಡು ಪಕ್ಷಗಾರರ ವಾದ-ಪ್ರತಿವಾದಗಳನ್ನು ಆಲಿಸಿ “ಮಕ್ಕಳ ಬಾಲ್ಯ ಅತ್ಯಮೂಲ್ಯವಾದದ್ದು, ಬಾಲ್ಯತನವನ್ನು ಅನುಭವಿಸುವುದು ಮಗುವಿನ ಹಕ್ಕಾಗಿದ್ದು, ವಿವಾಹದ ನೆಪದಲ್ಲಿ ಯಾವುದೇ ಮಗು ಅದರ ಹಕ್ಕುಗಳಿಂದ ವಂಚಿತರಾಗತಕ್ಕದಲ್ಲ. ಬಾಲ್ಯವಿವಾಹ ನಿಷೇಧ ಕಾಯ್ದೆ-2006 “ಜಾತ್ಯಾತೀತವಾದದ್ದು ಮತ್ತು ಭಾರತದ ಎಲ್ಲಾ ನಾಗರಿಕರಿಗೂ ಅನ್ವಯವಾಗುವುದರಿಂದಾಗಿ” ಮತ್ತು “ಬಾಲ್ಯವಿವಾಹ ನಿಷೇಧಕ್ಕಾಗಿ, ಉತ್ತಮ ಉದ್ದೇಶದಿಂದ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಕೈಗೊಂಡ ಕ್ರಮಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ ಎಂದು ಕಾಯ್ದೆಯ ಕಲಂ 18ರಲ್ಲಿ ಸ್ಪಷ್ಟಪಡಿಸಿರುವದರಿಂದಾಗಿ” ಅರ್ಜಿಯನ್ನು ತಿರಸ್ಕರಿಸಿದೆ ಎಂದು ಆದೇಶವನ್ನು ನೀಡಿ “ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಎಲ್ಲಾ ಧರ್ಮದವರಿಗೂ ಅನ್ವಯವಾಗುತ್ತದೆ” ಎಂದು ಆದೇಶಿಸಿದೆ.
ಅಪ್ರಾಪ್ತ ವಯಸ್ಸಿನ ಮಗುವಿನ ಮದುವೆಯನ್ನು ಮಾಡುವುದಕ್ಕಾಗಿ ಪಾಲಕರಿಗೆ “ನಕಲಿ ಶಾಲಾ ಧೃಡೀಕರಣ ಪತ್ರ”ವನ್ನು ಸೃಷ್ಠಿಸಿ, ನೀಡಿದ್ದು ಕಂಡುಬAದಿದ್ದಕ್ಕಾಗಿ ಕನಕಗಿರಿ ಪೊಲೀಸ್ ಠಾಣೆಗಳಲ್ಲಿ ಸಂಬAಧಿಸಿದ ಮುಖ್ಯೋಪಾಧ್ಯಾಯರ ವಿರುದ್ಧ ‘ನಕಲಿ ದಾಖಲೆಗಳ ಸೃಷ್ಠಿ’ ನೀಡಿದಕ್ಕಾಗಿ ಭಾರತೀಯ ದಂಡ ಸಂಹಿತೆಯಡಿಯಲ್ಲಿ ವಂಚನೆ ಪ್ರಕರಣ ದಾಖಲಾಗಿರುತ್ತದೆ.
ಕೆಲವು ಪ್ರಭಾವಿ ರಾಜಕೀಯ ಮುಖಂಡರುಗಳ ಆಶ್ರಯದಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹಗಳನ್ನು, ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ಕಲಂ 13ರಡಿಯಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ಪಡೆದು, ಬಾಲ್ಯವಿವಾಹಗಳನ್ನು ತಡೆಗಟ್ಟಿದೆ. ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 4 ನ್ಯಾಯಾಲಯದ ತಡೆಯಾಜ್ಞೆಯನ್ನು ಪಡೆದು 7 ಬಾಲ್ಯವಿವಾಹಗಳನ್ನು ತಡೆಗಟ್ಟಲಾಗಿದೆ. ಸಾಮೂಹಿಕ ವಿವಾಹದಲ್ಲಿ ಬಾಲ್ಯವಿವಾಹಗಳು ನಡೆಯುತ್ತಿರುವ ಮಾಹಿತಿಯು ಲಭ್ಯವಾದ ಹಿನ್ನೆಲೆಯಲ್ಲಿ ತಹಶೀಲ್ದಾರರು ಆಯೋಜಿಸಲು ಉದ್ದೇಶಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನೇ ರದ್ದು ಮಾಡಿದ ಘಟನೆಗಳು ಜಿಲ್ಲೆಯಲ್ಲಿ ವರದಿಯಾಗಿವೆ.
ಜಿಲ್ಲೆಯಲ್ಲಿ ಎಲ್ಲಿಯಾದರೂ ಬಾಲ್ಯವಿವಾಹವನ್ನು ಮಾಡುವುದು, ಮಾಡುತ್ತಿರುವ ಬಗ್ಗೆ ಮಾಹಿತಿ/ಅನುಮಾನಗಳಿದಲ್ಲಿ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳಿಗೆ, ಮುಖ್ಯೋಪಾಧ್ಯಾಯರಿಗೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ, ಅಂಗನವಾಡಿ ಮೇಲ್ವಿಚಾರಕಿಯರಿಗೆ, ಆರೋಗ್ಯ ನಿರೀಕ್ಷಕರಿಗೆ, ಮಕ್ಕಳ ಸಹಾಯವಾಣಿ-1098ಕ್ಕೆ ಅಥವಾ ಪೊಲೀಸ್ ಸಹಾಯವಾಣಿ-100ಕ್ಕೆ ಅಥವಾ ಹತ್ತಿರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ, ಪೊಲೀಸ್ ಅಧಿಕಾರಿಗಳಿಗೆ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿಯನ್ನು ನೀಡಿ, ಕೊಪ್ಪಳ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸುವ ಅಭಿಯಾನಕ್ಕೆ ಜಿಲ್ಲೆಯ ನಾಗರಿಕರು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error