fbpx

ಬಾಗ್ದಾದ್ ವಿಮಾನ ನಿಲ್ದಾಣದ ಮೇಲೆ ರಾಕೆಟ್ ದಾಳಿ: ಇರಾನ್ ಸೇನಾಧಿಕಾರಿ ಸಹಿತ 8 ಮಂದಿ ಬಲಿ

ಬಾಗ್ದಾದ್, ಜ.3: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ವಾಯುದಾಳಿಯಲ್ಲಿ ಇರಾನ್‌ನ ಎಲೈಟ್ ಕ್ಯೂಡ್ಸ್ ಫೋರ್ಸ್ (ಇರಾನಿ ಸೇನೆ)ಯ ಮುಖ್ಯಸ್ಥ ಜನರನ್ ಖಾಸಿಂ ಸುಲೈಮಾನಿ ಮೃತಪಟ್ಟಿದ್ದಾರೆ ಎಂದು ಇರಾಕ್ ಅಧಿಕಾರಿಗಳು ಹೇಳಿದ್ದಾರೆ.

ಉಗ್ರ ಸಂಘಟನೆಯಾದ ಪಾಪ್ಯುಲರ್ ಮೊಬಿಲೈಸೇಷನ್ ಫೋರ್ಸಸ್‌ನ ಉಪ ಕಮಾಂಡರ್ ಅಬು ಮೆಹದಿ ಅಲ್ ಮುಹಂದಿಸ್ ಕೂಡಾ ಹತ್ಯೆಗೀಡಾಗಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿ ಮಾಡಿ ನಡೆಸಿದ ಕ್ಷಿಪಣಿ ದಾಳಿಯಿಂದ ಏಳು ಮಂದಿ ಜೀವ ಕಳೆದುಕೊಂಡಿದ್ದಾರೆ. ಇದು ಅಮೆರಿಕದ ಕೃತ್ಯ ಎಂದು ಇರಾನ್ ಬೆಂಬಲಿತ ಅರೆಮಿಲಿಟರಿ ಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪಾಪ್ಯುಲರ್ ಮೊಬಿಲೈಸೇಷನ್ ಫೋಸರ್ಸ್ ಮೂಲಗಳ ಪ್ರಕಾರ, ವಿಮಾನ ನಿಲ್ದಾಣದ ಶಿಷ್ಟಾಚಾರ ಅಧಿಕಾರಿ ಮೊಹ್ಮದ್ ರೇಡಾ ಕೂಡಾ ಮೃತಪಟ್ಟವರಲ್ಲಿ ಸೇರಿದ್ದಾರೆ.

ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಏಳು ಮಂದಿ ಬಲಿಯಾಗಿದ್ದು, ಇದು ವಾಯುದಾಳಿ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೂ ಮುನ್ನ ಇರಾಕ್‌ನ ಭದ್ರತಾ ಮಾಧ್ಯಮ ಕೋಶ ಹೇಳಿಕೆ ನೀಡಿ, ವಿಮಾನ ನಿಲ್ದಾಣದ ಕಾರ್ಗೋ ಹಾಲ್ ಬಳಿ ಕತ್ಯುಷಾ ರಾಕೆಟ್ ಬಿದ್ದಿದೆ. ಘಟನೆಯಲ್ಲಿ ಹಲವು ಮಂದಿ ಮೃತಪಟ್ಟಿದ್ದು, ಎರಡು ಕಾರುಗಳು ಭಸ್ಮವಾಗಿವೆ ಎಂದು ಸ್ಪಷ್ಟಪಡಿಸಿದೆ.

ಕ್ಷಿಪಣಿ ಅಥವಾ ರಾಕೆಟ್ ದಾಳಿಯನ್ನು ಯಾರು ನಡೆಸಿದ್ದಾರೆ ಎನ್ನುವುದು ದೃಢಪಟ್ಟಿಲ್ಲ. ಅಮೆರಿಕ ಈ ಬಗ್ಗೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ದಾಳಿಯಲ್ಲಿ ಮೃತಪಟ್ಟವರ ದೇಹಗಳು ಸುಟ್ಟು ಕರಕಲಾಗಿದ್ದು, ಗುರುತಿಸಲಾಗದ ಸ್ಥಿತಿಯಲ್ಲಿವೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ. ನೆರೆಯ ದೇಶದಿಂದ ಆಗಮಿಸಿದ್ದ ಉನ್ನತ ಮಟ್ಟದ ಸಂದರ್ಶಕರನ್ನು ಕರೆದೊಯ್ಯಲು ರೇಡಾ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.

Please follow and like us:
error
error: Content is protected !!