ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾರಾಯಣ ರಾವ್ ಕರೋನಾಕ್ಕೆ ಬಲಿ

 

ಬೆಂಗಳೂರು : ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾರಾಯಣ ರಾವ್(65) ಕೊರೋನ ಸೋಂಕಿನಿಂದ ಗುರುವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ.

ಶಾಸಕ ಬಿ. ನಾರಾಯಣ ರಾವ್ ಅವರಿಗೆ ಕೊರೋನ ಸೋಂಕು ತಗಲಿದ ಹಿನ್ನೆಲೆ ಸೆ.1ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇತ್ತೀಚೆಗೆ ತೀವ್ರ ಉಸಿರಾಟದ ತೊಂದರೆಯಿಂದಾಗಿ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಗುರುವಾರ ಮಧ್ಯಾಹ್ನ 3.55ಕ್ಕೆ ಅವರು ನಿಧಾನರಾಗಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆ ನಿರ್ದೇಶಕ ಡಾ. ಮನೀಷ್ ರೈ ತಿಳಿಸಿದ್ದಾರೆ.

65 ವರ್ಷದ ನಾರಾಯಣರಾವ್‍ಗೆ ನ್ಯುಮೋನಿಯಾ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಸಮಸ್ಯೆ ಇತ್ತು. ಆಸ್ಪತ್ರೆಗೆ ದಾಖಲಾದ ಎರಡೇ ದಿನಕ್ಕೆ ಅವರ ಸ್ಥಿತಿ ಗಂಭೀರವಾಗಿತ್ತು. ಅಂದಿನಿಂದ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗೆ ಅವರಿಗೆ ಬಹು ಅಂಗಾಂಗ ವೈಫಲ್ಯ ಕಾಣಿಸಿಕೊಂಡಿದ್ದರಿಂದ ಮಣಿಪಾಲ್ ವಿಶೇಷ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ ಅವರು ಗುರುವಾರ ಕೊನೆಯುಸಿರೆಳೆದಿದ್ದಾರೆ.

ಮೊದಲು ಜನತಾ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದ ಬಿ ನಾರಾಯಣರಾವ್, 1982 ಮೊದಲ ಬಾರಿಗೆ ಮಾಳೆಗಾಂವ್ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಆಯ್ಕೆ ಆಗಿದ್ದರು. ಬಳಿಕ ಕಾಂಗ್ರೆಸ್ ಪಕ್ಷ ಸೇರಿ ಎಸ್.ಎಂ ಕೃಷ್ಣ ಸರಕಾರದಲ್ಲಿ 2 ವರ್ಷ ಸಾಕ್ಷರತಾ ಮಿಷನ್‍ನ ಅಧ್ಯಕ್ಷರಾಗಿದ್ದರು. 2013ರಲ್ಲಿ ಬಸವಕಲ್ಯಾಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದರು.

ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸ್, ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಹಲವು ರಾಜಕಾರಣಿಗಳ ಜತೆ ರಾವ್ ಗುರುತಿಸಿಕೊಂಡಿದ್ದರು. ಬಿಎ ಪದವಿ ಪಡೆದಿದ್ದ ಅವರು ಮರಾಠಿ, ಹಿಂದಿ, ಇಂಗ್ಲಿಷ್, ತೆಲುಗು ಮತ್ತು ಕನ್ನಡ ಬಾಷೆಗಳನ್ನು ಮಾತನಾಡುತ್ತಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಅರಣ್ಯ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

 

Please follow and like us:
error