ಬಯಲುಶೌಚಮುಕ್ತ ಗ್ರಾಮ ಸುಳ್ಳು ಘೋಷಣೆ: 450 ಮಂದಿ ವಿರುದ್ಧ ಪ್ರಕರಣ

ಭೋಪಾಲ್, ಅ.29: ಸ್ವಚ್ಛ ಭಾರತ ಅಭಿಯಾನದಡಿ ಮಧ್ಯಪ್ರದೇಶದ 155 ಗ್ರಾಮಗಳನ್ನು ಬಯಲುಶೌಚ ಮುಕ್ತ ಗ್ರಾಮ ಎಂದು ಘೋಷಿಸಿದ್ದಕ್ಕಾಗಿ 450 ಮಂದಿಯ ವಿರುದ್ಧ ಅಪರಾಧ ಮೊಕದ್ದಮೆ ದಾಖಲಿಸಲಾಗಿದೆ. 

ಎಡಿಎಂ ನಿಯಾಝ್ ಖಾನ್ ಭೌತಿಕ ದೃಢೀಕರಣಕ್ಕಾಗಿ 250 ಅಧಿಕಾರಿಗಳ ತಂಡವನ್ನು ರಚಿಸಿದ್ದು, ಇದು ಪರಿಶೀಲನೆ ನಡೆಸಿದಾಗ 2 ,000 ಮಂದಿ ಬಯಲುಶೌಚವನ್ನೇ ಅವಲಂಬಿಸಿರುವುದು ಬೆಳಕಿಗೆ ಬಂದಿದೆ. ಕೆಲ ಪ್ರಕರಣಗಳಲ್ಲಿ ಶೌಚಾಲಯವೇ ನಿರ್ಮಾಣವಾಗಿಲ್ಲ. ಮತ್ತೆ ಕೆಲವು ಪ್ರಕರಣಗಳಲ್ಲಿ ಇರುವ ಶೌಚಾಲಯಗಳನ್ನೂ ಜನ ಬಳಕೆ ಮಾಡುತ್ತಿಲ್ಲ ಎನ್ನುವುದು ಕಂಡುಬಂದಿದೆ.

ಇಂಥ ಪ್ರಕರಣಗಳಲ್ಲಿ ಆಯಾ ಗ್ರಾಮಗಳ ಸರ ಪಂಚರು, ಕಾರ್ಯದರ್ಶಿ ಹಾಗೂ ಸಹಾಯಕ ಉದ್ಯೋಗಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಗ್ರಾಮಗಳಲ್ಲಿ ಗುಣಮಟ್ಟ ಪರಿಶೀಲನೆಗೆ ನೇಮಕ ಮಾಡಿದ್ದ ಸಮಿತಿಗಳು ಕೂಡಾ ಇದಕ್ಕೆ ಹೊಣೆಗಾರರಾಗಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಖಾನ್ ಹೇಳಿದ್ದಾರೆ. “ರಾಜ್ಯ ಸರ್ಕಾರಕ್ಕೆ ಈಗಾಗಲೇ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸುವಂತೆ ಆಯಾ ಜನಪದಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಹಲವು ಗ್ರಾಮಗಳಿಗೆ ಬಯಲುಶೌಚ ಮುಕ್ತ ಗ್ರಾಮಗಳೆಂದು ಸುಳ್ಳು ದೃಢೀಕರಣ ನೀಡಲಾಗಿದೆ ಎಂಬ ಆರೋಪ ವ್ಯಾಪಕವಾಗಿ ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಈ ಕ್ರಮ ಕೈಗೊಳ್ಳಲಾಗಿದೆ. ಇದೀಗ ಪರಿಶೀಲನೆಗೆ ತೆರಳಿರುವ ಅಧಿಕಾರಿಗಳ ತಂಡ ಮುಂದಿನ ಹತ್ತು ದಿನಗಳ ಕಾಲ ಗ್ರಾಮಗಳಲ್ಲಿ ವಾಸ್ತವ್ಯ ಇದ್ದು, ಪರಿಶೀಲನೆ ನಡೆಸಲಿದ್ದಾರೆ ಎಂದು ಖಾನ್ ವಿವರಿಸಿದರು.

ಈ ಕ್ರಮವನ್ನು ಕುಂದೋಲ್ ಸರಪಂಚ ರಾಕೇಶ್ ಸಿಂಗ್ ಖಂಡಿಸಿದ್ದಾರೆ. “ನಾವು ಪ್ರಮಾಣಪತ್ರ ನೀಡಿದಾಗ, ಜನ ಶೌಚಾಲಯ ಬಳಸುತ್ತಿದ್ದರು. ಆದರೆ ಈಗ ಅವುಗಳನ್ನು ಬಳಸುತ್ತಿಲ್ಲ. ನಾವೇನು ಮಾಡಲು ಸಾಧ್ಯ” ಎನ್ನುವುದು ಅವರ ಪ್ರಶ್ನೆ.

Please follow and like us:
error