ಬಡ ಗರ್ಭಿಣಿಯರ ಆಶಾ! ರಾಜೀವಿ ನಾಯಕ್

ಉಡುಪಿಯ ಪೆರ್ನಂಕಿಲದ 53 ವರ್ಷ ಪ್ರಾಯದ ರಾಜೀವಿ ನಾಯಕ್ 20 ವರ್ಷಗಳಿಂದ ಆಟೋ ರಿಕ್ಷಾ ಓಡಿಸಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಜೊತೆಯಲ್ಲಿ, ಕಳೆದ ಹತ್ತು ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿಯೂ ದುಡಿಯುತ್ತಿದ್ದಾರೆ. ಬಸ್ ಡ್ರೈವರ್ ಆಗಿದ್ದ ಪತಿ ರಘುಚಂದ್ರನ್ ನಾಯಕ್ ಐದು ವರ್ಷಗಳ ಹಿಂದೆ ಮಿದುಳು ಸಮಸ್ಯೆಯಿಂದ ತೀರಿಕೊಂಡರು. ಅವರೇ ರಾಜೀವಿಗೆ ರಿಕ್ಷಾ ಚಾಲನೆ ಕಲಿಯಲು ಸ್ಫೂರ್ತಿ. ಮಗಳು ರಶ್ಮಿ ಮದುವೆಯಾಗಿ ಮುಂಬೈಯಲ್ಲಿ ನರ್ಸ್ ಆಗಿದ್ದಾಳೆ. ಮಗ ರವಿಕಿರಣ್ ಕಾರುಗಳನ್ನು ತೊಳೆಯುವ ಉದ್ಯೋಗ ಮಾಡುತ್ತಾನೆ. ಮಧ್ಯಾಹ್ನದ ತನಕ ಗುಲಾಬಿ ಬಣ್ಣದ ಸೀರೆವುಟ್ಟು ಆಶಾ ಕಾರ್ಯಕರ್ತೆಯ ಕರ್ತವ್ಯ ನಿರ್ವಹಿಸಿ ನಂತರ ಅದರ ಮೇಲೆ ಖಾಕಿ ಯೂನಿಫಾರ್ಮ್ ತೊಟ್ಟು ರಿಕ್ಷಾ ಓಡಿಸುವುದು ಇವರ ದಿನಚರಿ.

ಕೋವಿಡ್ ಸಂಕಷ್ಟ ಶುರುವಾದಂದಿನಿಂದ ರಾಜೀವಿ ನಾಯಕರ ಕುಟುಂಬವೂ ಬಿಕ್ಕಟ್ಟಿನಲ್ಲಿದೆ. ದಿನದ ಹೆಚ್ಚಿನ ಸಮಯ ಆಶಾ ಕಾರ್ಯಕರ್ತೆಯ ಕರ್ತವ್ಯಕ್ಕೆ ತಗಲುತ್ತದೆ. ಇವರ ಬಳಿ ಎರಡು ರಿಕ್ಷಾಗಳಿದ್ದು ಒಂದನ್ನು ಇವರೇ ಓಡಿಸಿದರೆ ಇನ್ನೊಂದನ್ನು ಬಾಡಿಗೆ ನೀಡಿದ್ದಾರೆ. ಆದರೆ ಲಾಕ್ ಡೌನ್ ನಿಂದಾಗಿ ರಿಕ್ಷಾಗಳಿಂದ ಬರುತ್ತಿದ್ದ ಸಂಪಾದನೆಯೂ ತೀವ್ರವಾಗಿ ಇಳಿದಿದೆ. ಕಾರು ತೊಳೆಯುವ ಮಗನ ಕೆಲಸಕ್ಕೂ ಸಂಚಕಾರ ಬಂದಿದೆ. ಅತ್ತ ಮುಂಬೈಯಲ್ಲಿ ನರ್ಸ್ ಆಗಿ ಕೋವಿಡ್ ಹೋರಾಟದ ಮುಂಚೂಣಿಯಲ್ಲಿರುವ ಮಗಳ ಸುರಕ್ಷತೆಯ ಆತಂಕ ಕಾಡುತ್ತಿದೆ. ಆಶಾ ಕಾರ್ಯಕರ್ತೆಯರಿಗೆ ಸಿಗುವ ಮಾಸಿಕ 3000 ರುಪಾಯಿ ಗೌರವ ಧನವೇ ಇವರಿಗೀಗ ದೊಡ್ದ ಆಧಾರ. ಇಷ್ಟೆಲ್ಲ ಆಗಿಯೂ ರಾಜೀವಿ ತಾನು ಕೆಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಒಂದು ವಿಶೇಷ ಕೆಲಸವನ್ನು ಮಾತ್ರ ಚಾಚೂ ತಪ್ಪದೆ ಮಾಡುತ್ತಿದ್ದಾರೆ. ಅದೇನಂದರೆ, ಸಾರಿಗೆ ಸೌಕರ್ಯವಿಲ್ಲದ ಬಡ ಗರ್ಭಿಣಿಯರನ್ನು ಉಚಿತವಾಗಿ ತನ್ನ ರಿಕ್ಷಾದಲ್ಲಿ ಆಸ್ಪತ್ರೆಗಳಿಗೆ ಕೊಂಡೊಯ್ಯುವುದು!

ಬುಧವಾರ ರಾಜೀವಿ ಪೆರ್ನಂಕಿಲದ ಶ್ರೀಲತಾ ಎಂಬ ಒಬ್ಬಳು ಗರ್ಭಿಣಿಯನ್ನು ಉಡುಪಿಯ ಹೆರಿಗೆ ಆಸ್ಪತ್ರೆಗೆ ತಪಾಸಣೆಗೆ ತಂದು ವಾಪಾಸು ಮನೆಗೆ ಬಿಟ್ಟು ಬಂದಿದ್ದರು. ಮರುದಿನ ಬೆಳಗ್ಗೆ 3 ಗಂಟೆಗೆ ಶ್ರೀಲತಾಳಿಗೆ ಹೆರಿಗೆ ನೋವು ಶುರುವಾಯಿತು. ಆಕೆ ಫೋನ್ ಮಾಡಿದಾಗ ಆ ಅಪರಾತ್ರಿಯಲ್ಲೂ ರಾಜೀವಿ ಅವಳ ಮೆನೆಗೆ ಬಂದು ರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು 18 ಕಿಮಿ ಜಾಗೃತೆಯಾಗಿ ರಿಕ್ಷಾ ಓಡಿಸಿ ಸುರಕ್ಷಿತವಾಗಿ ಉಡುಪಿಯ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಸಾಗಿಸಿದರು. ಮಧ್ಯಾಹ್ನ ಅವಳು ಏನೂ ತೊಂದರೆಯಿಲ್ಲದೆ ಹೆಣ್ಣು ಮಗುವಿಗೆ ಜನ್ಮ ಕೊಟ್ಟಾಗ ತನ್ನ ಮೆನೆಮಗಳೊಬ್ಬಳು ಹೆತ್ತಷ್ಟೇ ಸಂತೋಷಪಟ್ಟರು ಸುತ್ತಮುತ್ತಲಿನ ಜನರ ಪ್ರೀತಿಯ ಈ ರಾಜೀವಕ್ಕ. ನಿನ್ನೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇವರ ಸೇವೆಯನ್ನು ಗುರುತಿಸಿ ಟ್ವೀಟ್ ಮೂಲಕ ಪ್ರಶಂಸಿಸಿದರು.

Please follow and like us:
error