ಬಡ್ತಿ ಮೀಸಲಾತಿ ಆದೇಶ ಶೀಘ್ರ ಜಾರಿಗೆ:ಬೀರಪ್ಪ ಅಂಡಗಿ ಚಿಲವಾಡಗಿ ಒತ್ತಾಯ


ಕೊಪ್ಪಳ: ವಿಕಲಚೇತನ ನೌಕರರಿಗೆ ಸುಪ್ರೀಂಕೋರ್ಟ ಆದೇಶದಂತೆ ಶೇಕಡಾ ೩ ರಷ್ಟು ಬಡ್ತಿ ಮೀಸಲಾತಿಯ ಆದೇಶವನ್ನು ಶೀಘ್ರವೇ ಜಾರಿಗೊಳಿಸುವಂತೆ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಸರಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಕಲಚೇತನ ನೌಕರರ ಸಭೆಯನ್ನು ಉದ್ದೇಶಿಸಿ ಮಾತನಾಡಿ,ವಿಕಲಚೇತನ ನೌಕರರಿಗೆ ಸೇವಾ ಜೇಷ್ಠತೆಯನ್ನು ಅನುಸರಿಸಿ ಶೇಕಡಾ ೩ ರಷ್ಟು ಬಡ್ತಿಯಲ್ಲಿ ಮೀಸಲಾತಿಯನ್ನು ನೀಡುವಂತೆ ಸುಪ್ರೀಂಕೋರ್ಟ ಸರಕಾರಕ್ಕೆ ಆದೇಶ ಮಾಡಿ ೮ ತಿಂಗಳೂ ಕಳೆದರೂ ಕೂಡಾ ಯಾವುದೇ ಆದೇಶವಾಗದಿರುವುದು ಖಂಡನೀಯ ಸಂಗತಿಯಾಗಿದೆ.ಈ ವಿಷಯದ ಕುರಿತು ಸರಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಅನೇಕ ಸಚಿವರು ಮನವಿ ಪತ್ರವನ್ನು ನೀಡಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಈಗಾಗಲೇ ಅನೇಕ ಇಲಾಖೆಯಲ್ಲಿ ಬಡ್ತಿಯನ್ನು ನೀಡಿದ್ದಾರೆ ಹಾಗೂ ಇನ್ನೂ ಅನೇಕ ಇಲಾಖೆಯಲ್ಲಿ ಬಡ್ತಿ ನೀಡುವ ಸಂಬಂಧ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿರುವುದರಿಂದ ಬಡ್ತಿ ಎಂಬ ಸೌಲಭ್ಯದಿಂದ ವಿಕಲಚೇತನ ನೌಕರರು ವಂಚಿತರಾಗುತ್ತಿದ್ದಾರೆ.ಸರಕಾರಕ್ಕೆ ವಿಕಲಚೇತನ ನೌಕರರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಬಡ್ತಿ ಮೀಸಲಾತಿ ಆದೇಶವನ್ನು ಜಾರಿಗೊಳಿಸಬೇಕು ಇಲ್ಲದಿದ್ದರೆ ಸಂಘದ ವತಿಯಿಂದ ಬೃಹತ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದರ ಜೊತೆಗೆ ಕಾನೂನಾತ್ಮಕ ಹೋರಾಟವನ್ನು ಮಾಡುವ ಬಗ್ಗೆ ಚಿಂತನೆಯನ್ನು ನಡೆಸುವ ಬಗ್ಗೆ ತಿರ್ಮಾನ ಮಾಡಬೇಕಾಗುತ್ತದೆ.ಕೂಡಲೇ ಸರಕಾರವು ಆದೇಶ ಜಾರಿಗೊಳಿಸುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.
ಸಂಘದ ಜಿಲ್ಲಾ ಖಜಾಂಚಿ ಕಾಶಿನಾಥ ಸಿರಿಗೇರಿ ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಅಧ್ಯಕ್ಷರಾದ ಅಂದಪ್ಪ ಬೋಳರಡ್ಡಿ ಮಾತನಾಡುತ್ತಾ,ಸರಕಾರವು ಕೇವಲ ವಿಕಲಚೇತನರ ಬಗ್ಗೆ ದಿನಾಚರಣೆಯ ದಿನದಂದು ಅವರ ಬಗ್ಗೆ ಮಾತನಾಡದೇ ವಿಕಲಚೇತನರ ಬೇಡಿಕೆ ಹಾಗೂ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿದಾಗ ಮಾತ್ರ ಅಂತಹ ದಿನಾಚರಣೆಗೆ ಮಹತ್ವ ಬರಲು ಸಾಧ್ಯವಾಗುತ್ತದೆ.ಎಲ್ಲಾ ವಿಕಲಚೇತನ ನೌಕರರು ಸಂಘದಿಂದ ಕರೆ ನೀಡುವ ಪ್ರತಿಭಟನೆ ಅಥವಾ ಧರಣಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನ ನೌಕರರು ಭಾಗವಹಿಸಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕ ವಿಕಲಚೇತನ ನೌಕರರ ಸಂಘದ ಅಧ್ಯಕ್ಷರಾದ ಅಂದಪ್ಪ ಇದ್ಲಿ ಮಾತನಾಡಿ,ಯಾವುದೇ ಬೇಡಿಕೆಯನ್ನು ಈಡೇರಿಕೆಗೆ ಸಂಘಟನೆಯ ಅಗತ್ಯವಿದೆ.ಸಂಘದಿಂದ ತೆಗೆದುಕೊಳ್ಳುವ ತಿರ್ಮಾನಗಳಿಗೆ ಎಲ್ಲಾ ಸದಸ್ಯರು ಬದ್ದರಾಗಿರಬೇಕು ಎಂದು ಹೇಳಿದರು.
ಸಭೆಯಲ್ಲಿ ವಿಕಲಚೇತನ ನೌಕರರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗಪ್ಪ ದೇವನಾಳ,ತಾಲೂಕ ಸಂಘಟನಾ ಕಾರ್ಯದರ್ಶಿ ಟಿ.ಗೋವಿಂದಪ್ಪ,ಅಶೋಕ ಕಂಚಗಾರ,ಸಿದ್ದಯ್ಯಾ ಪೂಜಾರ,ಸಂಘದ ನಿರ್ದೇಶಕರಾದ ರುದ್ರಪ್ಪ,ಈಶಪ್ಪ ಮತ್ತೂರು,ವಿರುಪಾಕ್ಷಿ.ಎಂ.ಬಿ.,ಶಿವಯೋಗಿ ಜಡಿ,ಸಂಗವ್ವ,ಬಸಮ್ಮ,ಹುಲುಗಪ್ಪ ದೊಡ್ಡಮನಿ,ನಾಗಪ್ಪ ಏಳಬಾವಿ,ಲಕ್ಷ್ಮಣ್ಣ ಮುಂತಾದವರು ಹಾಜರಿದ್ದರು.
ಸಂಘದ ನಿರ್ದೇಶಕರಾದ ಮಹೇಶಗೌಡ ಪಾಟೀಲ ಸ್ವಾಗತಿಸಿ,ಪ್ರಕಾಶ ಮಾಳೆಕೊಪ್ಪ ವಂದಿಸಿದರು.

Please follow and like us:
error