ಬಡ್ತಿ ಮೀಸಲಾತಿ ಆದೇಶ ಜಾರಿಗೆ ಪ್ರಯತ್ನ:ಜಗದೀಶಗೌಡ ಪಾಟೀಲ


ಕೊಪ್ಪಳ: ಸುಪ್ರೀಂಕೋರ್ಟನ ಆದೇಶದಂತೆ ವಿಕಲಚೇತನ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ಶೇಕಡಾ ೩ ರಷ್ಟು ಬಡ್ತಿ ಮೀಸಲಾತಿ ಆದೇಶ ಜಾರಿಗೆ ಬಗ್ಗೆ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಸರಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ ಪಾಟೀಲ ಹೇಳಿದರು.
ಅವರು ಮಂಗಳವಾರ ಸಂಜೆ ವಿಕಲಚೇತನ ನೌಕರರ ಸಂಘದ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ,ವಿಕಲಚೇತನ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ಶೇಕಾಡಾ ೩ ರಷ್ಟು ಬಡ್ತಿಯಲ್ಲಿ ಮೀಸಲಾತಿ ನೀಡುವಂತೆ ಸುಪ್ರೀಂಕೋರ್ಟ ಆದೇಶ ಮಾಡಿ ೯ ತಿಂಗಳು ಕಳೆದರೂ ಕೂಡಾ ಸರಕಾರ ಆದೇಶ ಜಾರಿಗೆ ಮಾಡಿಲ್ಲ.ಈ ವಿಷಯದ ಬಗ್ಗೆ ಸರಕಾರಿ ನೌಕರರ ಸಂಘದಿಂದಲೂ ಕೂಡಾ ಮನವಿ ಸಲ್ಲಿಸಲಾಗಿದೆ.ಅಲ್ಲದೇ ಈಗಾಗಲೇ ಅನೇಕ ಇಲಾಖೆಯಲ್ಲಿ ಬಡ್ತಿ ನೀಡಿದ್ದಾರೆ ಹಾಗೂ ಇನ್ನೂ ಅನೇಕ ಇಲಾಖೆಯಲ್ಲಿ ಬಡ್ತಿ ನೀಡುವ ಎಲ್ಲಾ ಸಿದ್ದತೆಯನ್ನು ಮಾಡಿಕೊಂಡಿದ್ದು,ಬಡ್ತಿ ಎಂಬ ಸೌಲಭ್ಯದಿಂದ ವಿಕಲಚೇತನ ನೌಕರರು ವಂಚಿತರಾಗುತ್ತಿದ್ದಾರೆ.ಕೂಡಲೇ ಸರಕಾರ ಆದೇಶ ಜಾರಿಗೆ ಮಾಡುವ ಬಗ್ಗೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಜೊತೆಗೆ ವಿಕಲಚೇತನ ನೌಕರರ ಕ್ರೀಡಾಕೂಟದ ಬಗ್ಗೆ ಹಾಗೂ ವಿವಿಧ ಬೇಡಿಕೆಗಳ ಕುರಿತು ಅ.೧೧.ರಂದು ದಾವಣಗೇರೆಯಲ್ಲಿ ಕರೆಯಲಾಗಿರುವ ರಾಜ್ಯ ಕಾರ್ಯಕಾರಿ ಮತ್ತು ರಾಜ್ಯ ಪರಿಷತ್ ಸದಸ್ಯರ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು.
ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮಣ್ಣನ್ನವರ ಮಾತನಾಡಿ,ವಿಕಲಚೇತನ ನೌಕರರ ವಿವಿಧ ಬೇಡಕೆಗಳ ಕುರಿತು ಈಗಾಗಲೇ ಜಿಲ್ಲಾ ಘಟಕದ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಕೂಡಾ ವಿಷಯಗಳ ಪ್ರಸ್ತಾಪ ಮಾಡುವುದಾಗಿ ಹೇಳಿದರು.
ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ವಿಕಲಚೇತನರ ನೌಕರರ ಪ್ರಮುಖ ಬೇಡಿಕೆಯಾದ ಬಡ್ತಿ ಮೀಸಲಾತಿ ಆದೇಶವನ್ನು ಜಾರಿಗೊಳಿಸುವ ಬಗ್ಗೆ ಸರಕಾರದ ಗಮನಕ್ಕೆ ತಂದರೂ ಕೂಡಾ ಆದೇಶ ಜಾರಿಗೊಳಿಸಿಲ್ಲ.ಕೂಡಲೇ ಆದೇಶ ಜಾರಿಗೆ ಮಾಡುವುದರ ಜೊತೆಗೆ ಸರಕಾರ ನೌಕರರ ಕ್ರೀಡಾಕೂಟದಲ್ಲಿ ವಿಕಲಚೇತನ ನೌಕರರ ಕ್ರೀಡಾಕೂಟವನ್ನು ಆಯೋಜನೆ ಮಾಡುವಂತೆ ಮನವಿ ಮಾಡಿದರು.
ಈ ಸಮಯದಲ್ಲಿ ಸರಕಾರಿ ನೌಕರರ ಸಂಘದ ರಾಜ್ಯ ಖಜಾಂಚಿ ಶ್ರೀನಿವಾಸ,ಆಂತರಿಕ ಲೆಕ್ಕ ಪರಿಶೋಧಕರಾದ ಹರಿರಾಮ ಕೃಷ್ಣ,ವ್ಯವಸ್ಥಾಪಕರಾದ ಸುರೇಶ,ವಿಕಲಚೇತನ ನೌಕರರ ಸಂಘದ ರಾಜ್ಯ ಖಜಾಂಚಿ ಮಂಜುನಾಥ ಹಿಂಡಿಹುಳಿ, ಜಿಲ್ಲಾ ಖಜಾಂಚಿ ಕಾಶಿನಾಥ ಶಿರಿಗೇರಿ,ನಿರ್ದೇಶಕರಾದ ಕುಮಾರಸ್ವಾಮಿ,ದೈಹಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ವಿರುಪಾಕ್ಷಪ್ಪ ಬಾಗೋಡಿ,ಭಾರತ ಸ್ಕೌಟ್ಸ್‌ನ ಕಾರ್ಯದರ್ಶಿ ಮಲ್ಲಪ್ಪ ಗುಡದಣ್ಣನವರ,ಶಿಕ್ಷಕರಾದ ದೇವಪ್ಪ ಒಂಟಿಗಾರ,ಗುರುಸ್ವಾಮಿ,ಸುನೀಲಕುಮಾರ ಮುಂತಾದವರು ಹಾಜರಿದ್ದರು.
ಪೋಟೊ:೧: ಸರಕಾರಿ ನೌಕರರ ಸಂಘದ ರಾಜ್ಯ ಪದಾಧಿಕಾರಿಗಳನ್ನು ವಿಕಲಚೇತನ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಪೋಟೊ:೨: ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಜಗದೀಶಗೌಡ ಪಾಟೀಲ ಹಾಗೂ ರಾಜ್ಯ ಹಂತದ ಪದಾಧಿಕಾರಿಗಳ ಜೊತೆಗೆ ವಿಕಲಚೇತನ ನೌಕರರ ಸಮಸ್ಯೆಗಳ ಕುರಿತು ಚೆರ್ಚೆ ನಡೆಸಲಾಯಿತು.

Please follow and like us:
error