17ವರ್ಷ ಪ್ರಾಯದ ಜಿ ದೇವಯಾನಿ ತಮಿಳುನಾಡಿನ ಬುಡುಬುಡುಕೆ ಅಲೆಮಾರಿ ಜನಾಂಗಕ್ಕೆ ಸೇರಿದ ಹೆಣ್ಣು ಮಗಳು. ತಿರುಪ್ಪಾರಂಕುಂಡ್ರಂ ಗರ್ಲ್ಸ್ ಹೈಯರ್ ಸೆಕೆಂಡರಿ ಸ್ಕೂಲ್ ನ ಕಾಮರ್ಸ್ ವಿದ್ಯಾರ್ಥಿನಿ. ಈ ಬಾರಿಯ 12 ನೇ ತರಗತಿಯ ಪರೀಕ್ಷೆಯಲ್ಲಿ 500 ರಲ್ಲಿ 400 ಮಾರ್ಕುಗಳನ್ನು ಪಡೆದು ಪ್ರತಿಭೆ ಯಾರೋ ಒಂದಷ್ಟು ಅನುಕೂಲಸ್ಥ ಕುಟುಂಬಗಳ ಮಕ್ಕಳ ಸೊತ್ತಲ್ಲ ಎಂಬುವುದನ್ನು ಸಾರಿ ಹೇಳಿದ್ದಾಳೆ!
ಮಧುರೈ ಹೊರವಲಯದಲ್ಲಿರುವ ಇವಳ ಮನೆ ಅಂದರೆ ಪ್ಲಾಸ್ಟಿಕ್ ಶೀಟ್ ಹೊದೆಸಿದ ತೆಂಗಿನ ಸೋಗೆಯ ಒಂದು ಮುರುಕಲು ಗುಡಿಸಲು. ಕರೆಂಟ್, ನೀರಿನ ಸಂಪರ್ಕ ಎಂಬುದೇನೂ ಇಲ್ಲ. ತಂದೆ ಬುಡುಬುಡುಕೆ ಹಿಡಿದು ಊರು ಕೇರಿ ಸುತ್ತಿ ಜನರ ಭವಿಷ್ಯ ಹೇಳಿ ಬಂದ ಪುಡಿಗಾಸಿನಿಂದ ಇವಳ ಕುಟುಂಬದ ಜೀವನೋಪಾಯ ನಡೆಯುತ್ತದೆ. ಶಾಲೆಗೆ ರಜೆಯಿದ್ದಾಗ ದೇವಯಾನಿಯೂ ತನ್ನ ಕುಟುಂಬ ಸದಸ್ಯರೊಡನೆ ತಿರುಗುತ್ತಾಳೆ. ತಂದೆ ತಾಯಿ ಕುಟುಂಬ ಹೊರೆಯಲು ಪಡುವ ಪಾಡೇ ತನಗೆ ಪರೀಕ್ಷೆಯಲ್ಲಿ ಒಳ್ಳೆಯ ಮಾರ್ಕು ಪಡೆದು ಪಾಸಾಗಲು ಸ್ಫೂರ್ತಿ ಎಂದು ಹೇಳುತ್ತಾಳೆ. ಕಲಿಕೆಯ ನಡುವೆ ತಾನೂ ವಯರಿನ ಬುಟ್ಟಿ ಹೆಣೆದು ಮಾರಿ ಒಂದಷ್ಟು ಗಳಿಸಿ ತಂದೆಗೆ ನೆರವಾಗುತ್ತಾಳೆ.
ದೇವಯಾನಿಯ ಮುಂದಿನ ಗುರಿ ಬಹಳ ದೊಡ್ಡದೇನೂ ಅಲ್ಲ-ಯಾವುದಾದರೂ ಒಂದು ಬ್ಯಾಂಕಿನಲ್ಲಿ ನೌಕರಿ ಪಡೆದು ತನ್ನ ಕುಟುಂಬದ ಬಡತನವನ್ನು ಹೋಗಲಾಡಿಸುವುದು, ಅಷ್ಟೇ. ದೇವಯಾನಿಯ ಸಾಧನೆಯನ್ನು ಮೆಚ್ಚಿ ಹಲವರು ಅವಳ ಸಹಾಯಕ್ಕೆ ಮುಂದಾಗಿದ್ದಾರೆ. ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಅವಳು ಮುಂದೆ ಬಿಕಾಂ, ಬಿಬಿಏ ಏನು ಮಾಡಲು ಇಚ್ಚಿಸಿದರೂ ಆಕೆಗೆ ಮುಂದಿನ ಶಿಕ್ಷಣವನ್ನು ಉಚಿತವಾಗಿ ನೀಡಲು ಮುಂದೆ ಬಂದಿದೆ. ಸ್ಥಳೀಯ ಎಮ್ಮೆಲ್ಲೆ ಮತ್ತು ಎಂಪಿಗಳೂ ಅವಳಿಗೆ ಹಣಕಾಸಿನ ನೆರವಿನ ಭರವಸೆ ನೀಡಿದ್ದಾರೆ. ಇದೆಲ್ಲಕ್ಕಿಂತಲೂ ಮುಖ್ಯವಾದುದೆಂದರೆ, ದೇವಯಾನಿಯ ಈ ಸಾಧನೆ ಇವಳ ಜನಾಂಗದ ಇತರ ಮಕ್ಕಳಿಗೆ ಸ್ಫೂರ್ತಿಯಾಗಿ ಪರಿಣಮಿಸಿರುವುದು. ದೇವಯಾನಿ ತನ್ನ ಗುರಿಯನ್ನು ಸಾಧಿಸುವುದರಲ್ಲಿ ಯಾವ ಅನುಮಾನವೂ ಇರಲಿಕ್ಕಿಲ್ಲ. ಅದಕ್ಕೂ ಹೆಚ್ಚಿನದನ್ನುಆವಳು ಸಾಧಿಸಲಿ ಎಂದು ಹಾರೈಸೋಣ…