fbpx

ಬಕ್ರೀದ್ ಹಬ್ಬ ಆಚರಣೆ ನಿಮಯಾವಳಿಗಳು

ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ : ಸುರಳ್ಕರ್ ವಿಕಾಸ್ ಕಿಶೋರ್

ಕೊಪ್ಪಳ, : ಈದ್-ಉಲ್-ಅದಾ (ಬಕ್ರೀದ್) ಹಬ್ಬವನ್ನು ಎಲ್ಲರೂ ಸೇರಿ ಶಾಂತಿಯುತವಾಗಿ ಆಚರಿಸಿ ಎಂದು ಕೊಪ್ಪಳ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಅವರು ಹೇಳಿದರು.
ಬಕ್ರೀದ್ ಹಬ್ಬ ಆಚರಿಸುವ ಕುರಿತು ಕೊಪ್ಪಳ ಉಪವಿಭಾಗಾಧಿಕಾರಿ ಸಭಾಂಗಣದಲ್ಲಿ ಬುಧವಾರದಂದು ಆಯೋಜಿಸಲಾಗಿದ್ದ ನಾಗರಿಕ ಶಾಂತಿ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾವೆಲ್ಲರೂ ಮಾನವ ಸಮಾಜದವರು. ಹಲವಾರು ಜಾತಿ, ಧರ್ಮಗಳು ಭಾರತದಲ್ಲಿದ್ದು, ವಿವಿಧತೆಯಲ್ಲಿ ಏಕತೆ ಕಾಣುವ ದೇಶ ನಮ್ಮದಾಗಿದೆ. ನಾವು ಪ್ರತಿಯೊಬ್ಬರೂ ಸಹೋದರತ್ವ ಭಾವನೆಯನ್ನು ಹೊಂದಿದವರಾಗಿದ್ದು, ಎಲ್ಲರೂ ಸೇರಿ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈದ್ ಆಚರಿಸುವುದಲ್ಲದೇ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಸಹಕಾರ ನೀಡಬೇಕು. ಕೊರೊನಾ ಸಂದರ್ಭ ಇದಾಗಿದ್ದು, ಸರ್ಕಾರದ ಸೂಚನೆಯನ್ನು ಪಾಲನೆ ಮಾಡುವ ಮೂಲಕ ಬಕ್ರೀದ್ ಹಬ್ಬದ ಆಚರಣೆಯ ವೇಳೆಯಲ್ಲಿ ಪ್ರತಿಯೊಬ್ಬರೂ ಶಾಂತಿ, ಸೌಹಾರ್ದತೆ ಕಾಪಾಡಬೇಕು ಎಂದರು.
ಕೋವಿಡ್-19 ಹಿನ್ನೆಲೆ ಸರ್ಕಾರದ ನಿಯಮಗಳನ್ವಯ ಈದ್ಗಾ ಮೈದಾನಗಳಲ್ಲಿ ಈ ಬಾರಿ ಪ್ರಾರ್ಥನೆ ಮಾಡುವಂತಿಲ್ಲ.

ತೆರೆದ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಒಟ್ಟುಗೂಡುವುದನ್ನು ನಿಷೇಧಿಸಲಾಗಿದೆ. ಮಸೀದಿಗಳಲ್ಲಿ ಮಾತ್ರ ಪ್ರಾರ್ಥನೆ ನಿರ್ವಹಿಸಲು ಅವಕಾಶವಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕಾಗಿದೆ.

ಈದ್ಗಾ, ದರ್ಗಾ ಮಸೀದಿಗಳಲ್ಲಿ 50 ಜನ ಮೀರದಂತೆ ಪ್ರಾರ್ಥನೆ ಮಾಡಬೇಕು.

ಮಸೀದಿ ಸಣ್ಣದಿದ್ದರೆ 20 ಜನ ಸಾಕು. ಒಂದೊಮ್ಮೆ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದರೆ ಸರದಿಯಂತೆ ಪ್ರಾರ್ಥನೆ ಮಾಡಬೇಕು.

ಪ್ರಾರ್ಥನೆ ಮುಗಿದ ಮೇಲೆ ಶುಚಿಗೊಳಿಸಿ ಮತ್ತೆ ಪ್ರಾರ್ಥನೆ ಮಾಡಬೇಕು. ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯವಾಗಿದೆ.

60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು.

ನಮಾಜ್ ಮಾಡುವವರು ತಮ್ಮ ಮಧ್ಯೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು.

ಮಸೀದಿ ಪ್ರವೇಶಿಸುವ ಮೊದಲು ದೇಹದ ತಾಪಮಾನ ತಪಾಸಣೆ ಮಾಡಬೇಕು. ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್‌ನಿಂದ ಶುಚಿಗೊಳಿಸಿಕೊಳ್ಳಬೇಕು. ಮಸೀದಿಗಳಲ್ಲಿರುವ ಧಾರ್ಮಿಕ ಗ್ರಂಥಗಳನ್ನು ಮುಟ್ಟುವಂತಿಲ್ಲ. ತಮ್ಮ-ತಮ್ಮ ಮನೆಗಳಿಂದ ಪ್ರಾರ್ಥನಾ ಹಾಸಿಗೆ (ಜಾಯನಮಾಜ್) ಕಡ್ಡಾಯವಾಗಿ ತರಬೇಕು. ಹಸ್ತಲಾಘವ ಮತ್ತು ಆಲಿಂಗನ ಮಾಡದಂತೆ ಸಮುದಾಯದವರಿಗೆ ಸೂಚಿಸಬೇಕು. ಅಪರಿಚಿತರು ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಬಂದಲ್ಲಿ ಅವರ ಬಗ್ಗೆ ವಿಶೇಷ ಗಮನ ಹರಿಸಬೇಕು. ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಬಕ್ರೀದ್ ಹಬ್ಬ ಆಚರಿಸಬೇಕಿದೆ. ನಾಗರಿಕರ ಹಿತ ಕಾಪಾಡುವುದು ಮತ್ತು ಶಾಂತಿ ಸುವ್ಯವಸ್ಥೆ ಪಾಲನೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸಣ್ಣಪುಟ್ಟ ಯಾವುದೇ ಅಹಿತಕರ ಘಟನೆ ನಡೆದರೂ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಉಪ ವಿಭಾಗಾಧಿಕಾರಿ ನಾರಾಯಣ ರೆಡ್ಡಿ ಕನಕರೆಡ್ಡಿ, ಡಿವೈಎಸ್‌ಪಿ ವೆಂಕಟಪ್ಪ ನಾಯಕ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಬಸಯ್ಯ ಸಾಲಿ, ಜಿಲ್ಲಾ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ಸೈಯದ್ ನೂರೂದ್ದೀನ್ ಖಾದ್ರಿ, ಪಿರಾ ಹುಸೇನ ಹೊಸಳ್ಳಿ, ಜಾಕೀರ ಕಿಲ್ಲೇದಾರ, ಹಸನುದ್ದೀನ್ ಆಲಂ, ಮಾನ್ವಿ ಪಾಶಾ, ರಾಜಶೇಖರ ಆಡೂರ, ರಫಿ, ಸಲೀಂ ಅಳವಂಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Please follow and like us:
error
error: Content is protected !!