ಫೆ. 1ಕ್ಕೆ ಪಾರ್ಲಿಮೆಂಟ್‌ ಚಲೋ; ರೈತ ಹೋರಾಟದ ಮುಂದಿನ ನಡೆ

 

ನವದೆಹಲಿ,: ರೈತರ ಬೃಹತ್ ಟ್ರ್ಯಾಕ್ಟರ್ ರ್ಯಾಲಿಯ ಮುನ್ನಾ ದಿನ ದೆಹಲಿಯ ರೈತ ಮುಖಂಡರು ತಮ್ಮ ಹೋರಾಟದ ಮುಂದಿನ ನಡೆಯನ್ನು ಘೋಷಿಸಿದ್ದಾರೆ. ಫೆ. 1 ರಂದು ಕೇಂದ್ರ ಬಜೆಟ್ ಮಂಡನೆಯ ದಿನ ಪಾರ್ಲಿಮೆಂಟ್‌ಗೆ ಪಾದಯಾತ್ರೆ ನಡೆಸುವ ಮೂಲಕ ಹೋರಾಟ ತೀವ್ರಗೊಳಿಸುವುದಾಗಿ ಸಂಯುಕ್ತ ಕಿಸಾನ್‌ ಮೋರ್ಚಾ ಪ್ರಕಟಿಸಿದೆ.

ಮೋರ್ಚಾದ ನಾಯಕ ದರ್ಶನ್ ಪಾಲ್ ಮಾತನಾಡಿ ” ಫೆ.1 ರಂದು ದೆಹಲಿಯ ವಿವಿಧ ಭಾಗಗಳಿಂದ ರೈತರು ಪಾರ್ಲಿಮೆಂಟ್ ಕಡೆಗೆ ಪಾದಯಾತ್ರೆ ನಡೆಸುತ್ತೇವೆ. ಕರಾಳ ಕಾನೂನುಗಳು ರದ್ದಾಗುವವರೆಗೂ ಹೋರಾಟ ಮುಂದುವರೆಯಲಿದೆ’ ಎಂದು ತಿಳಿಸಿದ್ದಾರೆ.

“ನಾಳೆ ನಾವು ದೆಹಲಿಯಲ್ಲಿ ರೈತ-ಟ್ರಾಕ್ಟರ್‌ ಪರೇಡ್‌ ಹಮ್ಮಿಕೊಳ್ಳುತ್ತಿದ್ದೇವೆ. ಕಳೆದ ಎರಡು ತಿಂಗಳುಗಳಿಂದ, ಕೃಷಿ ಕಾಯ್ದೆಗಳ ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯ ಸುತ್ತಲೂ ಆರು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಲಕ್ಷಾಂತರ ಜನರು ದೆಹಲಿಯನ್ನು ತಲುಪಿದ್ದಾರೆ. ಒಂದೂವರೆ ಲಕ್ಷ ಟ್ರಾಕ್ಟರ್‌ಗಳು ದೆಹಲಿ ತಲುಪಿವೆ. ಇನ್ನೂ ಬರಲಿವೆ” ಎಂದು ಅವರು ಹೇಳಿದ್ದಾರೆ.

ದೆಹಲಿಯ ಗಡಿಗಳಲ್ಲಿ ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ರೈತರು ಇದುವರೆಗೂ ಗಮನ ಸೆಳೆಯುವ ವಿಭಿನ್ನ ಹೋರಾಟವನ್ನು ನಡೆಸಿದ್ದಾರೆ. ಟೋಲ್‌ ಪ್ಲಾಜಾಗಳಿಗೆ ಮುತ್ತಿಗೆ ಹಾಕಿ ವಾಹನಗಳು ಉಚಿತವಾಗಿ ಸಂಚರಿಸುವಂತೆ ಮಾಡುವುದು, ಹೆದ್ದಾರಿ ತಡೆ ನಡೆಸುವುದು, ದೇಶವ್ಯಾಪಿ ಬಂದ್‌ಗೆ ಕರೆ ನೀಡುವುದು ಮಾಡಿದ್ದಾರೆ. ತಮ್ಮ ಹೋರಾಟದ 2 ತಿಂಗಳ ಅಂಗವಾಗಿ ಜನವರಿ 26 ರಂದು ರೈತರು ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿದ್ದಾರೆ. ಇದರ ಮುಂದಿನ ನಡೆಯಾಗಿ ಪಾರ್ಲಿಮೆಂಟ್ ಚಲೋ ನಡೆಯಲಿದೆ.

ಇದುವರೆಗೂ ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವೆ 11 ಸುತ್ತಿನ ಮಾತುಕತೆಗಳು ನಡೆದಿವೆಯಾದರೂ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರ ಕಾಯ್ದೆಗಳನ್ನು ಒಂದೂವರೆ ವರ್ಷ ತಡೆಹಿಡಿಯುವುದಾಗಿ ಹೇಳಿದರೆ ರೈತರು ಕಾಯ್ದೆಗಳ ಸಂಪೂರ್ಣ ರದ್ದತಿಗೆ ಒತ್ತಾಯಿಸಿದ್ದಾರೆ. ಜೊತೆಗೆ ಎಂಎಸ್‌ಪಿ ಖಾತ್ರಿಗೊಳಿಸುವ ಕಾಯ್ದೆ ಜಾರಿಗಾಗಿ ರೈತರು ಆಗ್ರಹಿಸಿದ್ದಾರೆ.

ಹೋರಾಟವನ್ನು ಹಂತ ಹಂತವಾಗಿ ತೀವ್ರಗೊಳಿಸಲು ರೈತರು ನಿರ್ಧರಿಸಿದ್ದಾರೆ. ನಾಳೆಯ ಟ್ರ್ಯಾಕ್ಟರ್ ರ್ಯಾಲಿಯಂತೂ ವಿಶ್ವದ ಗಮನ ಸೆಳೆದಿದೆ. ಈ ರ್ಯಾಲಿ ತಡೆಯಲು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ಶತಾಯ-ಗತಾಯ ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ನಾಳೆ ರೈತರು ಶಾಂತಿಯುತವಾಗಿ ಟ್ರ್ಯಾಕ್ಟರ್ ಪರೇಡ್ ನಡೆಸುವ ಮೂಲಕ ಹೋರಾಟವನ್ನು ವಿಶ್ವಕ್ಕೆ ಸಾರಲು ಮುಂದಾಗಿದ್ದಾರೆ.

ಗಣರಾಜ್ಯೋತ್ಸದ ದಿನ ದೆಹಲಿಯಲ್ಲಿ ಟ್ರಾಕ್ಟರ್ ಪರೇಡ್‌ ನಡೆಸುತ್ತಿರುವಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಗಣತಂತ್ರ ಪರೇಡ್, ಟ್ರಾಕ್ಟರ್ ಪರೇಡ್‌ ಹೆಸರಿನಲ್ಲಿ ರೈತರ ಬೃಹತ್‌ ರ್‍ಯಾಲಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಂಘಟಿಸಲಾಗುತ್ತಿರುವ ಈ ಹೋರಾಟಕ್ಕೆ ಸಂಯುಕ್ತ ಕಿಸಾನ್‌ ಮೋರ್ಚಾ ಅಭಿನಂದಿಸಿದೆ.

Please follow and like us:
error