ಫಲಾನುಭವಿಗಳಿಗೆ ಸಕಾಲಕ್ಕೆ ಸೌಲಭ್ಯ ಒದಗಿಸಿ : ವಿಕಾಸ್ ಕಿಶೋರ್ ಸುರಳ್ಕರ್

ವಿವಿಧ ಅಭಿವೃದ್ಧಿ ನಿಗಮಗಳ ಪ್ರಗತಿ ಪರಿಶೀಲನಾ ಸಭೆ

ಕೊಪ್ಪಳ,  ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ನೀಡುವ ಹಲವು ಯೋಜನೆಗಳಡಿ ಫಲಾನುಭವಿಗಳಿಗೆ ಸಕಾಲಕ್ಕೆ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಇನ್ನಿತರ ನಿಗಮಗಳು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಇದರ ಅಡಿಯಲ್ಲಿ ಬರುವ ಉಪ್ಪಾರ, ಅಂಬಿಗರ, ಸವಿತಾ, ಮಡಿವಾಳ, ಅಲೆಮಾರಿ, ಆರ್ಯವೈಶ್ಯ ಮತ್ತು ವಿಶ್ವಕರ್ಮ ಅಭಿವೃದ್ಧಿ ನಿಗಮಗಳಿಂದ ಅನುಷ್ಠಾನಗೊಳಿಸಲಾಗುತ್ತಿರುವ ಯೋಜನೆಗಳ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ (ಫೆ.08) ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಗಳು ಜಾರಿಯಲ್ಲಿವೆ. ಹಲವು ಅಭಿವೃದ್ಧಿ ನಿಗಮಗಳ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಕಿರುಸಾಲ ಯೋಜನೆ, ನೇರಸಾಲ ಯೋಜನೆ, ಭೂ ರಹಿತ ಕೃಷಿಕರಿಗೆ ಭೂ-ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್, ಪ್ರವಾಸಿ ಟ್ಯಾಕ್ಸಿ, ಹೈನುಗಾರಿಕೆ, ಕುರಿ ಸಾಕಾಣಿಕೆ ಹೀಗೆ ಹಲವು ಯೋಜನೆಗಳಡಿ ಸಹಾಯಧನ, ಸಾಲ ಸೌಲಭ್ಯಗಳಿದ್ದು, ಇವುಗಳ ಸದುಪಯೋಗ ಅರ್ಹರಿಗೆ ತಲುಪಬೇಕು. ಭೂ ರಹಿತ ಕೃಷಿಕರಿಗೆ ಭೂಮಿ ಒದಗಿಸುವ ಯೋಜನೆಗಾಗಿ, ಭೂಮಿ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಅರ್ಹ ಫಲಾನುಭವಿಗಳಿಗೆ ವಿತರಿಸಲು ಕ್ರಮ ಕೈಗೊಳ್ಳಿ ಎಂದು ಅವರು ಹೇಳಿದರು.
ಗಂಗಾ ಕಲ್ಯಾಣ ಯೋಜನೆಯಡಿ ಅರ್ಹ ಫಲಾನುಭವಿಗಳ ಜಮೀನಿನಲ್ಲಿ ಬೋರ್‌ವೆಲ್ ಕೊರೆಯಿಸುವುದು ಬಾಕಿ ಇದ್ದು, ಬಾಕಿ ಉಳಿದ ಕೊಳವೆ ಬಾವಿಗಳನ್ನು ತುರ್ತಾಗಿ ಕೊರೆಯಿಸಿಕೊಡಿ. ಅಲ್ಲದೇ ಕೊರೆಸಲಾದ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸಹ ಬಾಕಿ ಇದ್ದು, ಹಲವು ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಪದೇ ಪದೇ ಈ ವಿಷಯ ಚರ್ಚಿತವಾಗುತ್ತಿದೆ. ಈ ಬಗ್ಗೆ ಆಯಾ ನಿಗಮಗಳ ವ್ಯವಸ್ಥಾಪಕರು ಹಾಗೂ ಜೆಸ್ಕಾಂನ ಸಂಬAಧಿಸಿದ ತಾಲ್ಲೂಕುಗಳ ಸಹಾಯಕ ಕಾರ್ಯ ಪಾಲಕ ಅಭಿಯಂತರರು ಸೇರಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಟ್ಯಾಕ್ಸಿ ಅಥವಾ ಗೂಡ್ಸ್ ವಾಹನ ಖರೀದಿಸಲು, ಹೈನುಗಾರಿಕೆ ಮತ್ತು ಕುರಿಸಾಕಾಣಿಕೆ ಸೇರಿದಂತೆ ವಿವಿಧ ಯೋಜನೆಯಡಿ ಸಹಾಯಧನ ಹಾಗೂ ಸಾಲ ಸೌಲಭ್ಯ ಮಂಜೂರಿಸುವ ಕುರಿತಂತೆ ಬ್ಯಾಂಕಿನಿAದ ತಿರಸ್ಕೃತವಾದ ಫಲಾನುಭವಿಗಳ ಅರ್ಜಿಗಳನ್ನು ಪುನಃ ಪರಿಶೀಲಿಸಿ ಸಣ್ಣ ಪುಟ್ಟ ಲೋಪಗಳಿದ್ದಲ್ಲಿ ಅವುಗಳನ್ನು ಸರಿ ಪಡಿಸಿ ಸೌಲಭ್ಯ ಒದಗಿಸಿ. ಸಮುದಾಯಗಳು ಆರ್ಥಿಕವಾಗಿ, ಸಮಾಜಿಕ, ಶೈಕ್ಷಣಿಕವಾಗಿ ಸ್ವಾವಲಂಬಿಯಾಗಬೇಕಾದರೆ ನಿಗಮಗಳಿಂದ ಜಾರಿಗೊಳ್ಳುವ ಯೋಜನೆಗಳು ಆಯಾ ಸಮುದಾಯಗಳ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಎಲ್ಲಾ ನಿಗಮಗಳಲ್ಲಿ ಬಾಕಿ ಉಳಿದಿರುವ ಆಯ್ಕೆ ಪ್ರಕ್ರಿಯೆ ನಿಯಮಾನುಸಾರ ಪೂರ್ಣಗೊಳಿಸಿ ಅರ್ಹರಿಗೆ ಸೌಲಭ್ಯ ನೀಡಿ ಎಂದು ಜಿಲ್ಲಾಧಿಕಾರಿಗಳು ನಿಗಮಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನವೀನ್ ಶಿಂತ್ರೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ದೊಡ್ಡಮನಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಾವೇದ ಕರಂಗಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವೈ. ಕಾಳೆ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಕ್ಬುಲ್ ಪಾಶಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error