ಪ್ಲಾಸ್ಮಾ ಶೃದ್ಧಾಂಜಲಿ! GOOD POSITIVE NEWS

ದೆಹಲಿಯ ಫರೀದಾಬಾದಿನ 54 ವರ್ಷ ಪ್ರಾಯದ ಎಂಜಿನಿಯರ್ ಸುಭಾಶ್ ನಾಗ್ಪಾಲ್ (ಎಡಭಾಗದಲ್ಲಿರುವವರು) ರದ್ದು ತಂದೆ, ತಾಯಿ, ಹೆಂಡತಿ, ಮಗ, ತಮ್ಮನ ಕುಟುಂಬ ಮತ್ತು ಮನೆಯಾಳು ಒಟ್ಟು ಹತ್ತು ಜನ ಸದಸ್ಯರು ಖುಷಿಯಾಗಿ ಬದುಕುತ್ತಿದ್ದ ಒಂದು ದೊಡ್ಡ ಸಂಸಾರ. ಲಾಕ್ ಡೌನ್ ಅವಧಿಯಲ್ಲಿ ಯಾರೂ ಹೊರಗೆ ಹೋಗಿರಲಿಲ್ಲ. ವಾರಕ್ಕೊಮ್ಮೆ ಮನೆಯಾಳು ಹೊರ ಹೋಗಿ ಅಗತ್ಯ ವಸ್ತುಗಳನ್ನು ತರುತ್ತಿದ್ದಳು. ಹಾಗೆ ತಂದ ವಸ್ತುಗಳಲ್ಲಿ ತೊಳೆಯ ಬಹುದಾದ ವಸ್ತುಗಳನ್ನು ಅರಶಿಣ ನೀರಿನಲ್ಲಿ ಚೆನ್ನಾಗಿ ತೊಳೆದು ಉಳಿದ ವಸ್ತುಗಳನ್ನು 2-3 ದಿನ ಹೊರಗಿಟ್ಟು ಉಪಯೋಗಿಸುತ್ತಿದ್ದರು. ಇಷ್ಟೆಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಂಡೂ ಜೂನ್ 4 ರಂದು ಮನೆಮಂದಿಗೆಲ್ಲ ಕೋವೀಡ್ ಸೋಂಕು ತಗಲಿತು. ಆಶ್ಚರ್ಯವೆಂದರೆ, ಹೊರಹೋಗಿ ಸಾಮಾನು ತರುತ್ತಿದ್ದ ಮನೆಯಾಳಿಗೆ ಸೋಂಕು ತಗಲಿಲ್ಲ!

ಉಳಿದವರಿಗೆಲ್ಲ ಲಘು ಪ್ರಮಾಣದ ಸೋಂಕು ಆಗಿದ್ದುದರಿಂದ ಅವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲಾಯಿತಾದರೂ ಗಂಭೀರ ಸ್ಥಿತಿಗೆ ಹೋದ 84 ವರ್ಷ ಪ್ರಾಯದ ತಂದೆ ಮತ್ತು 78 ವರ್ಷ ಪ್ರಾಯದ ತಾಯಿಯನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರಿಬ್ಬರೂ ಐದು ದಿನಗಳ ಅಂತರದಲ್ಲಿ ಆಸ್ಪತ್ರೆಯಲ್ಲೇ ತೀರಿಕೊಂಡರು. ಮನೆಯ ಯಾರೊಬ್ಬ ಸದಸ್ಯರಿಗೂ ಅವರ ಮುಖ ನೋಡಲಾಗಲೀ ಅಂತ್ಯಕ್ರಿಯೆಯಲ್ಲಿ ಭಾಗಿವಹಿಸಲಾಗಲೀ ಅವಕಾಶ ಸಿಗದೆ ಮಮ್ಮಲು ಮರುಗಿದರು. ಜೂನ್ 20 ರಂದು ಎಲ್ಲರೂ ಗುಣಮುಖರಾದರೂ ಎಲ್ಲರಲ್ಲೂ ಆ ಪಾಪಪ್ರಜ್ಞೆ ಕಾಡುತ್ತಿತ್ತು.

ಜುಲೈ 7 ಸುಭಾಷ್ ನಾಗ್ಪಾಲರ ಜನ್ಮದಿನ. ಅವರ ತಂದೆ ತಾಯಿ ಅವರ ಜನ್ಮದಿನದಂದು ಹವನ ನಡೆಸುತ್ತಿದ್ದರು. ಈ ಬಾರಿ ಅವರಿಲ್ಲ. ದೆಹಲಿಯಲ್ಲಿ ಕೋವಿಡ್ ಗುಣ ಪಡಿಸಲು ಪ್ಲಾಸ್ಮಾದ ಕೊರತೆಯಿರುವುದು ನಾಗ್ಪಾಲಿಗೆ ಗೊತ್ತಿತ್ತು. ತನ್ನ ತಂದೆ ತಾಯಿ ಯಾವ ಕಾಯಿಲೆಯಿಂದ ಪ್ರಾಣ ಕಳೆದುಕೊಂಡರೋ ಆ ಕಾಯಿಲೆಯಿಂದ ಬೇರೆಯವರ ಪ್ರಾಣವನ್ನು ರಕ್ಷಿಸುವುದು ಅವರಿಗೆ ತಾನು ಸಲ್ಲಿಸುವ ಅತ್ಯುತ್ತಮ ಶೃದ್ಧಾಂಜಲಿಯಾಗಬಹುದು ಎಂದು ಆಲೋಚಿಸಿದ ನಾಗ್ಪಾಲ್ ‘ದೆಹಲಿ ಇನ್ಸ್ಟಿಟ್ಯೂಟ್ ಆಫ್ ಲಿವರ್ ಆಂಡ್ ಬೈಲಿಯರಿ ಸೈಯನ್ಸಸ್’ ಸಂಸ್ಥೆಗೆ ಹೋಗಿ ಪ್ಲಾಸ್ಮಾ ದಾನ ಮಾಡಿ ಬಂದರು! ಅಷ್ಟೇ ಅಲ್ಲದೆ, ತನ್ನ ಸಹೋದರ ಮತ್ತು ಅವರ ಮಗನಿಗೂ ಪ್ಲಾಸ್ಮಾ ದಾನ ಮಾಡುವಂತೆ ಕೇಳಿಕೊಂಡಿದ್ದಾರೆ.

(ಕೋವಿಡ್ ಸೋಂಕು ತಗಲಿ ವಾಸಿಯಾದವರ ರಕ್ತದಲ್ಲಿ ಅಧಿಕ ಪ್ರಮಾಣದಲ್ಲಿ ಆಂಟಿಬಾಡಿಗಳು ಉತ್ಪತ್ತಿಯಾಗಿರುತ್ತವೆ. ಈ ರಕ್ತವನ್ನು ತೀವ್ರ ಸ್ವರೂಪದ ಕೋವಿಡ್ ಸೋಂಕು ತಗಲಿದವರಿಗೆ ವರ್ಗಾಯಿಸಿದಾಗ ಅವರ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದೇ ಪ್ಲಾಸ್ಮಾ ಥೆರಪಿ. ಕೋವಿಡ್ ಸೋಂಕಿನಿಂದ ವಾಸಿಯಾದ 14 ದಿನಗಳಲ್ಲಿ ಪ್ಲಾಸ್ಮಾ ದಾನ ಮಾಡಬಹುದು. 14 ದಿನಗಳ ನಂತರ ಮತ್ತೆ ದಾನ ಮಾಡಬಹುದು)

Panju Gangolli

Panju Ganguli
Please follow and like us:
error