ಲಾಕ್ ಡೌನ್ ನಿಯಮ ಮುರಿದರೆ ಕೊರೋನ ವೈರಸ್ ನಿಂದ ಪಾರಾಗುವುದು ಕಷ್ಟ -ಪ್ರಧಾನ ಮಂತ್ರಿ ನರೇಂದ್ರ ಮೋದಿ

ಹೊಸದಿಲ್ಲಿ, ಮಾ.29: ಜಗತ್ತಿನಲ್ಲಿ ಕೊರೋನ ವೈರಸ್ ಸೋಂಕು ಹರಡುತ್ತಿದೆ.  ಇದನ್ನು ತಡೆಯಲು ಭಾರತಲ್ಲಿ ಲಾಕ್ ಡೌನ್  ಮಾಡಲಾಗಿದೆ. ಲಾಕ್ ಡೌನ್  ಉಲ್ಲಂಘಿಸಿದವರು ಬಚಾವ್ ಆಗಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

‘ಮನ್ ಕಿ ಬಾತ್’ ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು ಕೆಲವರು ನಿಯಮಗಳನ್ನು ಮುರಿಯುತ್ತಿದ್ದಾರೆ. ಲಾಕ್ ಡೌನ್ ನಿಯಮ ಮುರಿದರೆ ಕೊರೋನ ವೈರಸ್ ನಿಂದ ಪಾರಾಗುವುದು ಕಷ್ಟ ಎಂದರು.

ಲಾಕ್ ಡೌನ್ ನಿಮ್ಮ ರಕ್ಷಣೆಗೆ ಇರುವಂತದ್ದು. ಇದರಿಂದ ನನ್ನ ಮೇಲೆ ನಿಮಗೆ ಕೋಪ ಬಂದಿರಬಹುದು. ಹಲವರಿಗೆ ಇದರ ಬಗ್ಗೆ ಅಸಮಾಧಾನವಾಗಿರಬಹುದು. ಆದರೆ  ವೈರಸ್ ಹರಡುವುದನ್ನು ತಡೆಗಟ್ಟಲು ಇಂತಹ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ. ನಿಮ್ಮನ್ನು ನಿಮ್ಮ ಕುಟುಂಬವನ್ನು ರಕ್ಷಿಸಲು ಇದೊಂದೇ ದಾರಿ. ನಿಮ್ಮ ಕುಟುಂಬದ ರಕ್ಷಣೆಗೆ ಕಠಿಣ  ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಲಾಕ್ ಡೌನ್  ಅವಧಿಯನ್ನು ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳಿ. ಮನೆಯಲ್ಲಿದ್ದುಕೊಂಡು ದೇಶದ ಭವಿಷ್ಯದ ಬಗ್ಗೆ  ಚಿಂತನೆ ನಡೆಸಿ. ಇಷ್ಟದ ಪುಸ್ತಕಗಳನ್ನು ಓದಿ, ಸಂಗೀತ ಅಭ್ಯಾಸ ನಡೆಸಿ. ಇದರಿಂದ ನಿಮಗೆ ಮುಂದೆ  ಲಾಭವಾಗಬಹುದು.

ದೇಶದ ಜನರಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ . ನೀವು ನನ್ನ ಕ್ಷಮೆಯನ್ನು ಸ್ವೀಕರಿಸುತ್ತೀರಿ ಎಂಬ ನಂಬಿಕೆ ನನಗೆ ಇದೆ.  ಎಲ್ಲಾ ಸುಖಗಳ ಮೂಲವೇ ಆರೋಗ್ಯವಾಗಿದೆ. ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಇನ್ನೊಂದಿಲ್ಲ. ಹೀಗಾಗಿ ಮನೆಯಲ್ಲಿದ್ದುಕೊಂಡೇ ಕೊರೋನ ವಿರುದ್ಧ ಹೋರಾಡಿ ಇದದಕ್ಕಾಗಿ ದೃಢ ಸಂಕಲ್ಪ ಮಾಡಬೇಕಾಗಿದೆ  ಎಂದರು.

ಇನ್ನೂ ಕೆಲವರು ಕೊರೋನವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ಲಕ್ಷ್ಮಣ ರೇಖೆ ದಾಟಿದ್ದರೆ ಆಪತ್ತು ಖಚಿತ. ನೀವು ಸೋಂಕಿತರೊಂದಿಗೆ  ಭಾವನಾತ್ಮಕ ಅಂತರ ತೆಗೆದು ಹಾಕಿ . ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

 ಕಷ್ಟದಲ್ಲಿರುವ ಬಡವರನ್ನು ಪ್ರೀತಿಯಿಂದ ಕಾಣಬೇಕಾಗಿದೆ. ಅವರ ಕಷ್ಟಗಳಿಗೆ  ನಾವು ಸ್ಪಂದಿಸಬೇಕಾಗಿದೆ ಎಂದರು.

ಕೊರೋನ ವೈರಸ್ ನಿಂದ ಎಲ್ಲರಿಗೂ ಸಮಸ್ಯೆ ಎದುರಾಗಿದೆ. ಇದರ ವಿರುದ್ಧ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕಾಗಿದೆ.  ಇದೊಂದು ಯುದ್ಧ .  ಈ ಯುದ್ಧದಲ್ಲಿ ನಾವು ಜಯ ಗಳಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ.  ಮುಂದೆ ನಾವು ಕಷ್ಟಪಟ್ಟು ದೇಶವನ್ನು ಕಟ್ಟಬೇಕಾಗಿದೆ ಎಂದು  ಅವರು  ಹೇಳಿದರು.

 

Please follow and like us:
error