ಪ್ರಧಾನಿ ಮೋದಿಗಿಂತ ಹೆಚ್ಚು ಮನಮೋಹನ್ ಸಿಂಗ್ ವಿದೇಶ ಪ್ರವಾಸ ಕೈಗೊಂಡಿದ್ದಾರೆ: ಶಾ

ಹೊಸದಿಲ್ಲಿ, : ಪ್ರಧಾನಮಂತ್ರಿ ನರೇಂದ್ರ ಮೋದಿಗಿಂತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೆಚ್ಚು ಬಾರಿ ವಿದೇಶಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಮೋದಿ ವಿಶ್ವದಲ್ಲಿ ಜನಪ್ರಿಯ ಪ್ರಧಾನಮಂತ್ರಿಯಾಗಿದ್ದು, ಇದನ್ನು ನೋಡಿ ಕಾಂಗ್ರೆಸ್‌ಗೆ ಹೊಟ್ಟೆನೋವಾಗುತ್ತಿದೆ’’ ಎಂದು ಬಿಜೆಪಿ ಮುಖ್ಯಸ್ಥ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

‘‘ಮೋದಿ ಎಲ್ಲಿಗೇ ಹೋದರೂ, ಏರ್‌ಪೋರ್ಟ್‌ನಲ್ಲಿ ಸಾವಿರಾರು ಜನರು ಜಮಾಯಿಸಿ ‘ಮೋದಿ, ಮೋದಿ’ಎಂದು ಘೋಷಣೆ ಕೂಗುತ್ತಿರುತ್ತಾರೆ. ಇದನ್ನು ಕಾಂಗ್ರೆಸ್‌ಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಆ ಪಕ್ಷ ಮೋದಿ ಏಕೆ ಯಾವಾಗಲೂ ವಿದೇಶಕ್ಕೆ ಪ್ರವಾಸ ಕೈಗೊಳ್ಳುತ್ತಾರೆ ಎಂದು ಪ್ರಶ್ನಿಸುತ್ತಿದೆ. ಮೋದಿ ಮೋದಿ ಎಂಬ ಘೋಷಣೆ ಭಾರತಕ್ಕೆ ಗೌರವವಿದ್ದಂತೆ’’ ಎಂದು ಶಾ ಹೇಳಿದ್ದಾರೆ.

ಸೆ.27ರಂದು ವಿಶ್ವ ಪ್ರವಾಸೋದ್ಯಮ ದಿನದಂದು ಕಾಂಗ್ರೆಸ್ ಪಕ್ಷ, ಪ್ರಧಾನಿ ಮೋದಿ ಅವರು ವಿಮಾನವನ್ನು ಏರುವ ಹಾಗೂ ಇಳಿಯುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿ, ‘‘ಹ್ಯಾಪಿ ವರ್ಲ್ಡ್ ಟೂರಿಸಂ ಡೇ’ಎಂದು ಅಡಿಬರಹ ನೀಡಿತ್ತು.

ಪ್ರಧಾನಿ ಮೋದಿ ಮೇ, 2014ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ 48 ವಿದೇಶಿ ಪ್ರವಾಸದ ವೇಳೆ 55ಕ್ಕೂ ಅಧಿಕ ದೇಶಗಳಿಗೆ ಭೇಟಿ ನೀಡಿದ್ದಾರೆ. ಇದರಲ್ಲಿ ಕೆಲವು ದೇಶಗಳಿಗೆ ಹಲವು ಬಾರಿ ಭೇಟಿ ನೀಡಿದ್ದಾರೆ ಎಂದು ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ.ಕೆ.ಸಿಂಗ್ ಮಾಹಿತಿ ನೀಡಿದ್ದರು.

Please follow and like us:
error