ಪ್ರಕರಣವನ್ನು ದಿಕ್ಕು ತಪ್ಪಿಸಲು ಬಿಜೆಪಿ ಸರಕಾರ ಪೊಲೀಸ್ರ ಮೂಲಕ ವೀಡಿಯೊ ಬಿಡುಗಡೆ ಮಾಡಿದೆ – ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ

ಮಂಗಳೂರು, ಡಿ.24: ದುರುದ್ದೇಶ ಪೂರಿತ ಮಂಗಳೂರು ಗೋಲಿಬಾರ್, ಪೊಲೀಸ್ ದೌರ್ಜನ್ಯದ ವಿರುದ್ಧ ವ್ಯಾಪಕ ಜನಾಭಿಪ್ರಾಯ ರೂಪುಗೊಳ್ಳುತ್ತಿರುವುದನ್ನು ತಡೆಯಲು, ಪ್ರಕರಣವನ್ನು ದಿಕ್ಕು ತಪ್ಪಿಸಲು ರಾಜ್ಯ ಬಿಜೆಪಿ ಸರಕಾರವು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಮೂಲಕ ಆಕ್ರೋಶಿತ ಪ್ರತಿಭಟನಾಕಾರರು ಕಲ್ಲು ತೂರಿದ ಆಯ್ದ ವೀಡಿಯೊಗಳನ್ನು ಬಿಡುಗಡೆ ಮಾಡಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ತನ್ನ ಪರವಾಗಿರುವ ಸುದ್ದಿ ವಾಹಿನಿಗಳಲ್ಲಿ ಅವುಗಳ ಎಡಿಟೆಡ್ ತುಣಕುಗಳನ್ನು ಬಳಸಿ ಪ್ರತಿಭಟನಾಕಾರರು ಅನಾಹುತ ಸೃಷ್ಟಿಸಲು ಸಜ್ಜಾಗಿದ್ದ ತೀರಾ ಅಪಾಯಕಾರಿ ಗುಂಪು ಆಗಿದ್ದರು ಎಂದು ಚಿತ್ರಿಸಲು ಯತ್ನಿಸುತ್ತಿದೆ. ಇದು ಅತ್ಯಂತ ನಾಚಿಕೆಗೇಡಿನ ಖಂಡನಾರ್ಹ ನಡವಳಿಕೆಯಾಗಿದೆ ಎಂದು ಅವರು ಖಂಡಿಸಿದ್ದಾರೆ.

ಸರ್ಕಾರಕ್ಕೆ ಪ್ರಾಮಾಣಿಕತೆ ಇದ್ದರೆ ಕಲ್ಲು ತೂರಾಟ, ಗೋಲಿಬಾರ್ ಸಹಿತ ಇಡೀ ಪ್ರಕರಣವನ್ನು ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಲಿ, ಎಲ್ಲವೂ ಬಹಿರಂಗವಾಗಲಿ ಎಂದು ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ ಎಂದು ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದ್ದನ್ನು, ಹಿಂಸಾಚಾರ ನಡೆಸಿದ್ದನ್ನು ಯಾರೂ ನಿರಾಕರಿಸಿಲ್ಲ. ಅಂದಿನ ಕಲ್ಲು ತೂರಾಟ, ರಸ್ತೆಯಲ್ಲಿ ಬೆಂಕಿ ಹಚ್ಚಿದ ಘಟನೆಗಳನ್ನು ಇದೇ ಚಾನಲ್ ಗಳು ನೇರ ಪ್ರಸಾರದಲ್ಲಿ ತೋರಿಸಿದ್ದವು. ನಾಗರಿಕ ಗುಂಪುಗಳ ಪ್ರಶ್ನೆ ಇರುವುದು 200 ರಷ್ಟಿದ್ದ ಪ್ರತಿಭಟನಾಕಾರರನ್ನು ಮನವೊಲಿಸುವ ಬದಲಾಗಿ ಏಕಾಏಕಿ ಲಾಠಿ ಚಾರ್ಜ್ ಮಾಡಿ ಉದ್ರೇಕಿಸಿದ್ದು ಯಾಕೆ ? ಎಂಬುದಾಗಿತ್ತು ಎಂದರು.

ಲಾಠಿ ಚಾರ್ಜ್, ಪೊಲೀಸ್ ಬಲ ಪ್ರಯೋಗದಿಂದ ಸಿಟ್ಟಿಗೆದ್ದ ಗುಂಪಿನ ಜೊತೆ ಮತ್ತೊಂದಿಷ್ಟು ಜನರು ಸೇರಿಕೊಂಡು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಆಗಲಾದರೂ ಎಚ್ಚರ ವಹಿಸಿದ್ದರೆ, ಒಂದು ಕಿ.ಮೀ. ವ್ಯಾಪ್ತಿಯೊಳಗಡೆ ಸಣ್ಣ ಸಣ್ಣ ಗುಂಪುಗಳು ನಡೆಸುತ್ತಿದ್ದ ಕಲ್ಲು ತೂರಾಟವನ್ನು ಪೊಲೀಸ್ ಇಲಾಖೆ ನಿಯಂತ್ರಿಸಬಹುದಿತ್ತು. ಆದರೆ ಮತ್ತಷ್ಟು ಬಲಪ್ರಯೋಗಿಸಿ ಜನ ಸಮೂಹ ವನನ್ನು ಉದ್ರೇಕಿಸುವ, ಕಾರ್ಮಿಕರು, ವ್ಯಾಪಾರಿಗಳು ತುಂಬಿ ತುಳುಕುವ ಬೀದಿಗಳಲ್ಲಿ ಏಕಾಏಕಿ ಜನರ ನೇರ ಗುಂಡು ಹಾರಿಸಿ ಇಬ್ಬರು ಅಮಾಯಕರನ್ನು ಕೊಲ್ಲಲಾಗಿದೆ ಎಂದರು.

ಇಂತಹ ಘೋರ ತಪ್ಪನ್ನು ಪೊಲೀಸ್ ಇಲಾಖೆ ಮಾಡಿದ್ದನ್ನು ಸಹಜವಾಗಿ ನಾಗರಿಕ ಸಮಾಜ ಪ್ರಶ್ನಿಸಿದೆ. ಅಂದಿನ ಪೊಲೀಸ್ ಅತಿರೇಕದ ವೀಡಿಯೋಗಳನ್ನು ಮುಂದಿಟ್ಟು ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹಿಸಿವೆ ಎಂದರು.

ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ರಕ್ಷಿಸಲು ಎಲ್ಲ ಕಸರತ್ತುಗಳನ್ನು ನಡೆಸುತ್ತಿರುವ ಬಿಜೆಪಿ ಸರಕಾರ, ಕಲ್ಲು ತೂರಾಟದ ಕೆಲವೊಂದು ವೀಡಿಯೊ ತುಣುಕುಗಳನ್ನು ಪೊಲೀಸ್ ಕಮಿಷನರ್ ಹರ್ಷ ಮೂಲಕ ಈಗ ಹರಿಯಬಿಟ್ಟಿದೆ. ಕೆಲವು ಸುದ್ದಿವಾಹಿನಿಗಳಂತೂ ಈ ತುಣುಕುಗಳ ಜೊತೆಗೆ ಪೊಲೀಸರು ಕಟ್ಟಿಕೊಟ್ಟ ಸುದ್ದಿಗಳನ್ನೇ ಇಡೀ ದಿನ ಪ್ರದರ್ಶಿಸುತ್ತಾ, ಸತ್ತವರು, ಗುಂಡೇಟಿನಿಂದ ಗಾಯಗೊಂಡ ಕೂಲಿಗಳನ್ನು, ಖರೀದಿಗೆ ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ ಅಮಾಯಕರನ್ನೇ ಅಪರಾಧಿ ಸ್ಥಾನದಲ್ಲಿ ಯಾವುದೇ ಮುಜುಗರವಿಲ್ಲದೆ ನಿಲ್ಲಿಸುತ್ತಿವೆ. ಟಿವಿ ಮಾಧ್ಯಮಗಳು ಪೊಲೀಸರ ಪರ ವಹಿಸಿ ದೌರ್ಜನ್ಯಕ್ಕೊಳ ಗಾದವರ ವಿರುದ್ಧ ಸುದ್ದಿ ಮಾಡುತ್ತಿರುವುದು ಆತಂಕದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಪೊಲೀಸರ ಗುಂಡಿಗೆ ಬಲಿಯಾದ ಕೂಲಿ ಕಾರ್ಮಿಕ ಜಲೀಲ್ ತನ್ನ ಮನೆಯ ಓಣಿಯಲ್ಲಿ, ಕುಟುಂಬಸ್ಥರ ಕಣ್ಣ ಮುಂದೆಯೇ ಪೊಲೀಸ್ ಗುಂಡಿಗೆ ಬಲಿಯಾಗಿರುವುದು ಕಮೀಷನರ್ ಹರ್ಷ ಕಟ್ಟುತ್ತಿರುವ ಕತೆಯನ್ನು ಬಿಚ್ಚಿಡುತ್ತದೆ. ಆದರೆ ಇಂದು ಕೆಲವು ಟಿವಿ ಮಾಧ್ಯಮಗಳ ಜೊತೆ ಸೇರಿ ಪೊಲೀಸ್ ಇಲಾಖೆ ನಡೆಸಿದ ಕಾರ್ಯಾಚರಣೆಯ ನಂತರ ಬಿಜೆಪಿಯ ಕೆಲವು ಜನಪ್ರತಿನಿಧಿಗಳು ಗುಂಡಿಗೆ ಬಲಿಯಾದವರನ್ನೇ ಅಪರಾಧಿಗಳನ್ನಾಗಿಸಿ, ಸರಕಾರದಿಂದ ನೀಡಿರುವ ಪರಿಹಾರ ವಾಪಸಾತಿಗೆ ಆಗ್ರಹಿಸುತ್ತಿದ್ದಾರೆ. ಇದು ನಾಡಿನ ಎಲ್ಲಿಯೂ ಕಂಡು ಕೇಳರಿಯದ ನಿಷ್ಕರುಣೆ, ನಿರ್ಲಜ್ಜ ನಡೆ ಎಂದು ಅವರು ಟೀಕಿಸಿದರು.

ಅಂದಿನ ಗಲಭೆ, ಹಿಂಸಾಚಾರದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕು. ನಿಜವಾದ ತಪ್ಪಿತಸ್ಥರ ಬಂಧನವಾಗಬೇಕು. ಅದಕ್ಕೆ ಯಾರ ತಕರಾರೂ ಇಲ್ಲ. ಅದೇ ಸಂದರ್ಭ ಪೊಲೀಸರು ಏಕಪಕ್ಷೀಯವಾಗಿ ನಡೆಸಿದ ಕಾರ್ಯಾಚರಣೆ, ಅನಗತ್ಯ ಗೋಲಿಬಾರ್, ಜೀವಹಾನಿಯ ಕುರಿತೂ ಸಮಗ್ರ ತನಿಖೆಯಾಗಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಗುಂಪನ್ನು ಪ್ರಚೋದಿಸಲು ಕಾಣದ ಕೈಗಳು ಪ್ರಯತ್ನಿಸಿದ್ದರೆ ಅದೂ ಬಯಲಾಗಲಿ. ಆದರೆ ಇಂದು ಪೊಲೀಸ್ ಠಾಣೆಯ ಮುಂಭಾಗ ಆರೇಳು ಸಾವಿರ ಜನ ಸೇರಿದಕ್ಕೆ ವೀಡಿಯೊ ತುಣುಕು, ಸಾಕ್ಷ ಒದಗಿಸಲಾಗದ ಪೊಲೀಸ್ ಇಲಾಖೆ ಕಲ್ಲು ತೂರಾಟದ ಕೆಲವು ವೀಡಿಯೊಗಳನ್ನು ತೋರಿಸಿ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರದ ಈ ರೀತಿಯ ನಡೆಯನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ವಿರೋಧ ಪಕ್ಷಗಳ, ನಾಗರಿಕ ಗುಂಪುಗಳ ಆಗ್ರಹದಂತೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸರಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಎಲ್ಲ ಸತ್ಯಗಳು ಹೊರ ಬರಲಿ ಎಂದು ಡಿವೈಎಫ್‌ಐ ಆಗ್ರಹಿಸುತ್ತದೆ ಎಂದು ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Please follow and like us:
error