ಪೌರತ್ವ ಮಸೂದೆ: ಸುಪ್ರೀಂ ಮೆಟ್ಟಿಲೇರಿದ ಭಾರತೀಯ ಯೂನಿಯನ್ ಮುಸ್ಲಿಂ ಲೀಗ್

ಹೊಸದಿಲ್ಲಿ, ಡಿ.12: ಸಂಸತ್ತಿನಲ್ಲಿ ಬುಧವಾರ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದ ಬೆನ್ನಿಗೇ ಮೊದಲ ಕಾನೂನು ತೊಡಕನ್ನು ಎದುರಿಸುವಂತಾಗಿದೆ. ವಿವಾದಾತ್ಮಕ ಮಸೂದೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಭಾರತೀಯ ಯೂನಿಯನ್ ಮುಸ್ಲಿಂ ಲೀಗ್(ಐಯುಎಂಎಲ್)ನಿರ್ಧರಿಸಿದೆ.

ಪೌರತ್ವ ಮಸೂದೆ ಒಮ್ಮೆ ಸಂಸತ್ತಿನಲ್ಲಿ ಅಂಗೀಕಾರವಾದ ತಕ್ಷಣ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಐಯುಎಂಎಲ್ ಈ ಹಿಂದೆಯೇ ಹೇಳಿತ್ತು. ಧರ್ಮ ಆಧರಿತ ಪೌರತ್ವ ಮಸೂದೆ ಜಾರಿಗೆ ತರುವ ಮೂಲಕ ಈ ಶಾಸನವು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪೌರತ್ವ ತಿದ್ದುಪಡಿ ಮಸೂದೆಯು ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಲು ಅವಕಾಶ ನೀಡಲಿದೆ. ಪೌರತ್ವ ಮಸೂದೆಯು ಬುಧವಾರ ರಾಜ್ಯಸಭೆಯಲ್ಲೂ 125-105 ಮತಗಳಿಂದ ಅಂಗೀಕಾರವಾಗಿದೆ.

Please follow and like us:
error