ಪೌರತ್ವ ಮಸೂದೆ ಸಂಘರ್ಷಕ್ಕೆ ಜೀವ ಕಳೆದುಕೊಂಡ ಕಂದಮ್ಮ

ಅಗರ್ತಲ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ತ್ರಿಪುರಾ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆ ವೇಳೆ ಎರಡು ತಿಂಗಳ ಅಸ್ವಸ್ಥ ಮಗುವನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ವಾಹನ ರಸ್ತೆ ತಡೆಯಲ್ಲಿ ಸಿಕ್ಕಿಹಾಕಿಕೊಂಡು ಮಗು ಪ್ರಾಣ ಬಿಟ್ಟ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.

ಮಂಗಳವಾರ ತ್ರಿಪುರಾದಲ್ಲಿ ನಡೆದ 11 ಗಂಟೆಗಳ ಬಂದ್ ವೇಳೆ ಮೂರು ಕಡೆಗಳಲ್ಲಿ ಹಿಂಸಾಚಾರ ನಡೆದಿದ್ದು, ಒಟ್ಟು 40 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತ್ರಿಪುರಾದಲ್ಲಿ ವದಂತಿಗಳನ್ನು ತಡೆಯುವ ಪ್ರಯತ್ನವಾಗಿ ಬಿಜೆಪಿ ಸರ್ಕಾರ 48 ಗಂಟೆಗಳ ಕಾಲ ಇಂಟರ್‌ನೆಟ್ ಸೇವೆ ರದ್ದುಪಡಿಸಿದೆ. ಇದರ ನಡುವೆಯೇ ಹಲವು ಮಂದಿ ಪ್ರತಿಭಟನಾಕಾರರು ಅಗರ್ತಲದಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ವಿವಾದಾತ್ಮಕ ಮಸೂದೆಯ ಪರಿದಿಯಿಂದ ರಾಜ್ಯವನ್ನು ಹೊರಗಿಡಬೇಕು ಎಂದು ಆಗ್ರಹಿಸಿದರು.

ಸೆಪಿಜಲ ಜಿಲ್ಲೆಯ ಬಿಶ್ರಮ್‌ಗಂಜ್ ಪ್ರದೇಶದಲ್ಲಿ ಸಂಘರ್ಷದಲ್ಲಿ ತೊಡಗಿದ್ದ ಗುಂಪುಗಳನ್ನು ಚದುರಿಸಲು ನಾಲ್ಕು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ. ರಸ್ತೆ ತಡೆಯಿಂದಾಗಿ ಆ್ಯಂಬುಲೆನ್ಸ್ ಸಿಕ್ಕಿಹಾಕಿಕೊಂಡ ಬಿಷ್ರಮ್‌ಗಂಜ್‌ನಲ್ಲಿ ನಡೆದ ಹಿಂಸಾಚಾರದಲ್ಲಿ 15 ಮಂದಿ ಗಾಯಗೊಂಡಿದ್ದಾರೆ. ಮಗುವನ್ನು ಗೋಮತಿ ಜಿಲ್ಲೆಯ ಉದಯಪುರದಿಂದ ಧಲಾಯಿ ಜಿಲ್ಲೆಯ ಅಂಬಸ್ಸಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಷ್ರಮ್‌ಗಂಜ್ ಹೊರತುಪಡಿಸಿ ಉತ್ತರ ತ್ರಿಪುರಾದ ಕಾಂಚನಪುರ ಹಾಗೂ ಧಲಾಯಿ ಜಿಲ್ಲೆಯ ಮಂಗುಘಾಟ್ ಬಳಿ ಕೂಡಾ ಹಿಂಸಾಚಾರ ಸಂಭವಿಸಿದೆ. ಮೂರು ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಪ್ರತಿಭಟನಾಕಾರರು ಬುಡಕಟ್ಟು ಗ್ರಾಮವಾದ ಆನಂದಬಜಾರ್ ಪ್ರದೇಶಕ್ಕೆ ನುಗ್ಗಿ ಜನರ ಮೇಲೆ ದಾಳಿ ನಡೆಸಿದ್ದರಿಂದ ನೂರಾರು ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Please follow and like us:
error