ಪೌರತ್ವ ತಿದ್ದುಪಡಿ ಮಸೂದೆಯಿಂದ ಇಸ್ರೇಲ್ ಆಗಲಿದೆ ಭಾರತ: ಉವೈಸಿ ಆಕ್ರೋಶ

ಹೊಸದಿಲ್ಲಿ: ಪ್ರಸ್ತಾವಿತ ಪೌರತ್ವ (ತಿದ್ದುಪಡಿ) ಮಸೂದೆ ಭಾರತದಲ್ಲಿ ಜಾರಿಯಾದಲ್ಲಿ ನಮ್ಮ ದೇಶ ತಾರತಮ್ಯಕ್ಕೆ ಹೆಸರಾದ ಇಸ್ರೇಲ್ ಆಗಲಿದೆ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸದುದ್ದೀನ್ ಉವೈಸಿ ಹೇಳಿದ್ದಾರೆ.

ಎಎನ್‍ಐ ಜತೆ ಮಾತನಾಡಿದ ಅವರು, “ಪೌರತ್ವ ತಿದ್ದುಪಡಿ ಕಾಯ್ದೆ ಭಾರತವನ್ನು ನಿರ್ದಿಷ್ಟ ಧರ್ಮದ ದೇಶವಾಗಿ ಮಾಡಲು ಹೊರಟಿದ್ದಾರೆ ಎನ್ನುವುದನ್ನು ತೋರಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

ಹಾಗೆ ಮಾಡಿದಲ್ಲಿ ಭಾರತ, ವಿಶ್ವದಲ್ಲೇ ಗರಿಷ್ಠ ತಾರತಮ್ಯಕ್ಕೆ ಹೆಸರಾದ ಇಸ್ರೇಲಿನ ಸಾಲಿಗೆ ಸೇರಲಿದೆ ಎಂದು ಹೇಳಿದರು.

ಮಾಧ್ಯಮ ವರದಿ ಸರಿ ಎಂದಾದಲ್ಲಿ ಈಶಾನ್ಯ ರಾಜ್ಯಗಳನ್ನು ಈ ಪ್ರಸ್ತಾವಿತ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ. ಹಾಗೆ ಮಾಡಿದಲ್ಲಿ ಅದು ಸಂವಿಧಾನದ 14ನೇ ವಿಧಿಯ ಅನ್ವಯ ನೀಡಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ದೇಶದಲ್ಲಿ ಪೌರತ್ವಕ್ಕೆ ಸಂಬಂಧಿಸಿದಂತೆ ಎರಡು ಕಾಯ್ದೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಪ್ರಸ್ತಾವಿತ ಕಾಯ್ದೆಯು ನಮ್ಮ ಸಂವಿಧಾನದ ತತ್ವಗಳಿಗೆ ವಿರುದ್ಧ ಎಂದು ಅವರು ಹೇಳಿದರು.

Please follow and like us:
error