ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಅಭಿಯಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ

ಬೆಂಗಳೂರು, ಜ.5: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಾಸ್ತವ ಸಂಗತಿಗಳನ್ನು ರಾಜ್ಯದ ಜನತೆಗೆ ತಿಳಿಸಲು ಬಿಜೆಪಿಯಿಂದ ಜನಜಾಗೃತಿ ಅಭಿಯಾನ ಆರಂಭಿಸಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ರವಿವಾರ ಇಲ್ಲಿನ ವಸಂತ ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮನೆ- ಮನೆಗೆ ತೆರಳಿ ಜನಜಾಗೃತಿ ಮೂಡಿಸುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ 30ಲಕ್ಷ ಮನೆಗಳು ಸೇರಿದಂತೆ 3ಕೋಟಿ ಮನೆಗಳಿಗೆ ತಲುಪಿ ಸಿಎಎ ಬಗ್ಗೆ ವಾಸ್ತವ ಸಂಗತಿಗಳನ್ನು ತಿಳಿಸಲಾಗುವುದು ಎಂದು ತಿಳಿಸಿದರು.

ಸಿಎಎಯಿಂದ ದೇಶದಲ್ಲಿನ 130ಕೋಟಿ ಜನರಲ್ಲಿ ಯಾರೊಬ್ಬರಿಗೂ ತೊಂದರೆ ಆಗುವುದಿಲ್ಲ. ತಪ್ಪು ಮಾಹಿತಿಗಳಿಗೆ ಯಾರು ಕಿವಿಗೊಡಬಾರದು. ಜವಾಹರ್ ಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ ಈ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಆಗ ಯಾರ ವಿರೋಧವು ಇರಲಿಲ್ಲ. ಈಗ ವಿರೋಧಿಸುತ್ತಿರುವುದು ಸರಿಯಲ್ಲವೆಂದು ಅವರು ತಿಳಿಸಿದರು.

ಪ್ರಧಾನಿ ಮೋದಿ ಸರಕಾರವನ್ನು ಟೀಕಿಸಲೇಬೇಕೆಂಬ ದುರುದ್ದೇಶದಿಂದ ಸಿಎಎ ಕುರಿತು ತಪ್ಪು ಮಾಹಿತಿಗಳನ್ನು ನೀಡಲಾಗುತ್ತಿದೆ. ಆ ಮೂಲಕ ಅಲ್ಪಸಂಖ್ಯಾತರಲ್ಲಿ ಗೊಂದಲ ಮೂಡಿಸಲಾಗುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದರು.

ಈ ವೇಳೆ ಸಂಸದ ಪಿ.ಸಿ.ಮೋಹನ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅಭಿಯಾನದ ಸಂಚಾಲಕ ಎನ್.ರವಿಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Please follow and like us:
error