ಪೌರತ್ವ ತಿದ್ದುಪಡಿ ಕಾಯ್ದೆಯ ಮೊದಲ ಬಲಿಪಶುಗಳು ದೇಶದ ಮೂಲ ನಿವಾಸಿಗಳು: ನ್ಯಾ.ಎಚ್.ಎಸ್. ನಾಗ್‌ಮೋಹನ್‌ದಾಸ್

Justice Nagmohan Das, Karnataka High court
Justice Nagmohan Das, Karnataka High court

♦ ದೇಶದ ಸಂವಿಧಾನಕ್ಕೆ 70ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ತಮ್ಮ ಅಭಿಪ್ರಾಯ ವೇನು?

ನ್ಯಾ.ನಾಗ್‌ಮೋಹನ್ ದಾಸ್:  ದೇಶದ ಸಂವಿಧಾನಕ್ಕೆ 70 ವರ್ಷಗಳಾಗಿವೆ. ಸಾಕಷ್ಟು ತಿದ್ದುಪಡಿಗಳು ಆಗಿವೆ. ದೇಶದ ಆಡಳಿತ ವ್ಯವಸ್ಥೆಯಲ್ಲಿ ಕಾರ್ಯಾಂಗ, ಶಾಸಕಾಂಗ ಎರಡೂ ವಿಫಲವಾಗಿವೆ. ದೇಶದ ಆರ್ಥಿಕ ವ್ಯವಸ್ಥೆ ದಿವಾಳಿಯ ಅಂಚಿಗೆ ತಲುಪಿದೆ. ದೇಶದಲ್ಲಿ 60 ಲಕ್ಷ ಉದ್ಯೋಗ ಭರ್ತಿಯಾಗದೆ ಸರಕಾರಿ ಕ್ಷೇತ್ರದಲ್ಲಿ ಖಾಲಿ ಇದೆ. ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ, ಹೊರಗುತ್ತಿಗೆ ನೀಡುವ ತೀರ್ಮಾನ ತೆಗದುಕೊಳ್ಳಲಾಗುತ್ತಿದೆ. ನಮಗೆ ಇನ್ನೂ ಹಣ ಹೆಚ್ಚು ಕೊಟ್ಟರೆ ದಿನನಿತ್ಯದ ಸಾಮಗ್ರಿಗಳು, ಪೆಟ್ರೋಲ್ ದೊರೆಯುತ್ತದೆ ಎನ್ನುವುದು ಬಿಟ್ಟರೆ ಬೇರೆ ಆಶಾದಾಯಕ ಪರಿಸ್ಥಿತಿ ಇಲ್ಲ. ಸಂಸತ್ತಿನಲ್ಲಿ ಈ ವಿಚಾರಗಳ ಬಗ್ಗೆ ಧ್ವನಿ ಎತ್ತಬೇಕಾದವರು ವೌನವಹಿಸಿದ್ದಾರೆ. ಗಂಭೀರ ಚರ್ಚೆಗಳು ನಡೆಯುತ್ತಿಲ್ಲ. ಎನ್‌ಆರ್‌ಸಿ, ಪೌರತ್ವ ಕಾಯ್ದೆ ತಿದ್ದುಪಡಿ ಇತ್ಯಾದಿ ರೊಟ್ಟಿ ಕೇಳುವವರಿಗೆ ದಾರಿ ತಪ್ಪಿಸಲು ಸರ್ಕಸ್ ತೋರಿಸಿದಂತೆ ಎನ್ನುವಂತಾಗಿದೆ. ಈಗ ನಮ್ಮ ಪಾಲಿಗೆ ಆಶಾದಾಯಕವಾಗಿರುವುದು ಮೂರನೇ ಅಂಗವಾದ ನ್ಯಾಯಾಂಗ. ನ್ಯಾಯಾಂಗ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಸಾಕಷ್ಟು ತೀರ್ಪುಗಳನ್ನು ನೀಡಿದೆ. ಸಂವಿಧಾನದ ಆಶಯವನ್ನು ಎತ್ತಿಹಿಡಿಯಬೇಕಾದುದು ಅದರ ಹೊಣೆಗಾರಿಕೆ. ಕೆಲವು ಸಂದರ್ಭದಲ್ಲಿ ನ್ಯಾಯಾಂಗ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯದೆ ಇದ್ದ ಉದಾಹರಣೆಗಳು ಕೂಡಾ ಇವೆ. ಉದಾಹರಣೆಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂತಹ ಪ್ರಕರಣ ನಡೆದಿದೆ. ಆದರೆ ನಾವು ನ್ಯಾಯಾಂಗದ ಮೇಲೆ ನಂಬಿಕೆ ಕಳೆದುಕೊಳ್ಳಬಾರದು.

 ♦ ದೇಶದಲ್ಲಿ ಎನ್‌ಆರ್‌ಸಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸುಪ್ರೀಂಕೋರ್ಟ್ ಸಂವಿಧಾನದ ಪರ ನಿಲುವು ತಳೆಯ ಬಹುದೇ?

ನ್ಯಾ.ನಾಗ್ ಮೋಹನ್‌ದಾಸ್:   ಸಂವಿಧಾನ ವಿರೋಧಿ ಕಾಯ್ದೆಯನ್ನು ರಾಜ್ಯ ಸರಕಾರಗಳು ಪಾಲಿಸದೆ ಇದ್ದರೆ ಕೇಂದ್ರ ಸರಕಾರ ರಾಜ್ಯ ಸರಕಾರದ ಮೇಲೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ಆದರೆ ಕೆಲವು ಕಾಯ್ದೆಗಳನ್ನು ರಾಜ್ಯ ಸರಕಾರಗಳು ಹಿಂದೆ ಜಾರಿ ಮಾಡಿದ್ದರೂ ಬಳಿಕ ಕೇಂದ್ರ ಸರಕಾರ ಅದೇ ವಿಷಯಕ್ಕೆ ಸಂಬಂಧಿಸಿದ ಕಾನೂನು ಜಾರಿಗೆ ತಂದಾಗ ಕೇಂದ್ರ ಸರಕಾರದ ಕಾನೂನು ವ್ಯಾಪ್ತಿ ರಾಜ್ಯಸರಕಾರಕ್ಕೂ ವಿಸ್ತರಿಸಲ್ಪಡುತ್ತದೆ. ಉದಾಹರಣೆಗೆ 1985ರಲ್ಲಿ ಕರ್ನಾಟಕದಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕಾಲದಲ್ಲಿ ಹಿಂದೂ ಉತ್ತರದಾಯಿತ್ವ ಕಾಯ್ದೆಗೆ ತಿದ್ದುಪಡಿ ತಂದು ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲನ್ನು ನೀಡುವ ಕಾಯ್ದೆ ಜಾರಿಗೆ ತರಲಾಯಿತು. ಕೇಂದ್ರ ಸರಕಾರ ಈ ರೀತಿಯ ಕಾಯ್ದೆಯನ್ನು 2005ರಲ್ಲಿ ಜಾರಿಗೆ ತಂದಿದೆ. ಬಳಿಕ ಕೇಂದ್ರದ ಕಾನೂನು ರಾಜ್ಯಕ್ಕೂ ಅನ್ವಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರಗಳು ತೆಗೆದುಕೊಳ್ಳುವ ನಿರ್ಧಾರ ಮುಖ್ಯವಾಗುತ್ತದೆ. ಕೇಂದ್ರ ಸರಕಾರಗಳು ರಾಜ್ಯಗಳ ಮೇಲೆ ಈ ಕಾನೂನನ್ನು ಜಾರಿಗೊಳಿಸಲು ಒತ್ತಡ ಹೇರುವಂತಿಲ್ಲ. ಸುಪ್ರೀಂ ಕೋರ್ಟ್ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಯಾವ ನಿಲುವು ತೆಗೆದುಕೊಳ್ಳುತ್ತದೆ ಎನ್ನುವ ಆತಂಕ ನನಗೂ ಇದೆ. ಒಂದು ವೇಳೆ ಅದು ನೀಡುವ ತೀರ್ಪಿನ ಬಗ್ಗೆ ಸಂದೇಹಗಳಿದ್ದರೆ ಆ ತೀರ್ಪನ್ನು ಪ್ರಶ್ನಿಸಬಹುದಾಗಿದೆ. ಆದರೂ ಇದು ಈಗಿನ ವಾತಾವರಣದಲ್ಲಿ ನೂರಕ್ಕೆ ನೂರು ಸಮರ್ಪಕವಾಗಿ ಇತ್ಯರ್ಥವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

  ♦ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಲು ಪ್ರಮುಖ ಕಾರಣಗಳೇನು?

ನ್ಯಾ.ನಾಗ್‌ಮೋಹನ್ ದಾಸ್: ಭಾರತಕ್ಕೆ ಒಂದು ಕಾಲದಲ್ಲಿ ಆಹಾರ ಹುಡುಕಿಕೊಂಡು, ಕೃಷಿಗಾಗಿ, ನದಿ ತೀರದಲ್ಲಿ ವಾಸಮಾಡಲು, ವ್ಯಾಪಾರ ಮಾಡಲು, ಆಕ್ರಮಣಕಾರರಾಗಿ ಇಲ್ಲಿನ ವಿಶ್ವ ವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಲು ಸಾಕಷ್ಟು ಮಂದಿ ಬೇರೆ ಬೇರೆ ದೇಶಗಳಿಂದ ನಮ್ಮ ದೇಶಕ್ಕೆ ಬಂದಿದ್ದಾರೆ. ಇಂತಹ ವಲಸಿಗರು ಇಲ್ಲಿ ವಾಸಮಾಡುವುದರ ಜೊತೆ ಇಲ್ಲಿನ ಜನರ ಸಂಪರ್ಕ ಹೊಂದಿ ಹೊಸ ಜನಾಂಗ ಸೃಷ್ಟಿಯಾಗಿದೆ. ಇದು ಅಧ್ಯಯನವೊಂದರಿಂದ ಬೆಳಕಿಗೆ ಬಂದಿರುವ ಸಂಗತಿ. ಆ ಕಾರಣದಿಂದ ಭಾರತ ದೇಶದಲ್ಲಿರುವ ಜನಸಂಖ್ಯೆಯಲ್ಲಿ ಶೇ. 98 ವಲಸಿಗರ ಮೂಲದವರು, ಶೇ. 8 ಮಂದಿ ಮಾತ್ರ ಇಲ್ಲಿನ ಮೂಲನಿವಾಸಿಗಳಾಗಿರುವವರು ಎಂದು ದೇಶದ ಸರ್ವೊಚ್ಚ ನ್ಯಾಯಾಲಯ 2011ರಲ್ಲಿ ಕೈಲಾಸಂ ಪ್ರಕರಣದಲ್ಲಿ ತೀರ್ಪು ನೀಡಿದೆ. ದೇಶದಲ್ಲಿ 4,635 ಜಾತಿ, ಉಪಜಾತಿಗಳಿವೆ. ಬೇರೆ ಬೇರೆ ಕಾರಣಗಳಿಗೆ ಈ ದೇಶಕ್ಕೆ ವಲಸೆ ಬಂದ ಜನರಿಂದ ರೂಪುಗೊಂಡ ಈ ಸಮುದಾಯವಿರುವಾಗ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರೈಸ್ತರು ಮಾತ್ರ ಗುರುತಿಸಿರುವುದು, ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾ ದೇಶದ ವಲಸಿಗರನ್ನು ಗುರಿ ಮಾಡಿ ಧರ್ಮದ ಆಧಾರವನ್ನು ಪ್ರಸ್ತಾಪಿಸಿ ಕಾನೂನು ರೂಪಿಸಿರುವುದು ಸಂವಿಧಾನ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಎನ್‌ಆರ್‌ಸಿ ಪ್ರಕ್ರಿಯೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಈ ಹಿಂದೆ ಸಂವಿಧಾನ ನೀಡಿರುವ ಪೌರತ್ವಕ್ಕಿಂತ ಭಿನ್ನವಾಗಿದೆ. 1950ರಲ್ಲಿ ಸಂವಿಧಾನ ರಚನೆಯಾದಾಗ ದೇಶದ ಸಂವಿಧಾನದ ಅನುಚ್ಛೇದ 5ರಿಂದ 11 ಹೇಳಿರುವ ಪ್ರಕಾರ ಭಾರತದಲ್ಲಿ ಜನಿಸಿದವರು, ತಂದೆ ತಾಯಿಯ ಪೈಕಿ ಒಬ್ಬರು ಭಾರತದಲ್ಲಿ ಜನಿಸಿದ್ದರೆ ಅವರ ಮಕ್ಕಳು, ಭಾರತದಲ್ಲಿ ವಾಸಿಸುತ್ತಿದ್ದವರು, ಸಂವಿಧಾನ ಅನುಷ್ಠಾನ ಗೊಳಿಸುವ 5ವರ್ಷ ಹಿಂದೆ ಭಾರತದಲ್ಲಿ ವಾಸಿಸುತ್ತಿದ್ದವರು ಇಲ್ಲಿನ ನಾಗರಿಕರಾಗುತ್ತಾರೆ. ಈ ಪೌರತ್ವ ಕಾಯ್ದೆ ತಿದ್ದುಪಡಿಗೆ ಹೊರಟಿರುವುದು ನಾಗರಿಕತ್ವದ ಹಕ್ಕಿನ ಉಲ್ಲಂಘನೆಯಾಗಿದೆ, ಜೊತೆಗೆ ಭಾರತದ ಸಂವಿಧಾನದ ಅನುಚ್ಛೇದ 14 ಮತ್ತು 21ರಲ್ಲಿ ಹೇಳುವ ಸಮಾನತೆಯ ಹಕ್ಕಿನ ವಿರುದ್ಧವಾದ ಕಾಯ್ದೆಯಾಗಿದೆ. ಧರ್ಮದ ಆಧಾರದಲ್ಲಿ ಕಾನೂನು ರಚನೆ ಮಾಡುವುದು ಭಾರತದ ಸಂವಿಧಾನದ ಮೂಲಕ ಹೇಳಿರುವ ಮೂಲ ಸಂರಚನೆಯಾದ ಜಾತ್ಯತೀತತೆಯ ವಿರುದ್ಧವಾದ ಕಾಯ್ದೆಯಾಗಿದೆ. ಈ ಬಗ್ಗೆ 1970ರಲ್ಲಿ ಕೇಶವಾನಂದ ಭಾರತಿ ಸ್ವಾಮೀಜಿಗಳ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಇನ್ನೊಂದು ಪ್ರಮುಖ ಅಂಶ ಈ ದೇಶದ ಮೂಲನಿವಾಸಿಗಳ ಪ್ರಶ್ನೆ. ಅವರಲ್ಲಿ ಮುಖ್ಯವಾಗಿ ಬುಡಕಟ್ಟುಗಳ ಜನರು. ಅಕ್ಷರದಿಂದ ವಂಚಿತರಾದವರು. ಶತಮಾನಗಳಿಂದ ಬಡತನ, ಶೋಷಣೆಗೆ ಒಳಗಾದವರು. ಅವರ ಬಳಿ ಇಲ್ಲಿನವರು ಎಂದು ಹೇಳಿಕೊಳ್ಳುವ ಯಾವ ದಾಖಲೆಗಳೂ ಇಲ್ಲ. ಅವರು ಈ ಕಾಯ್ದೆಯ ಮೊದಲ ಬಲಿಪಶುಗಳಾಗುತ್ತಿದ್ದಾರೆ. ಆದುದರಿಂದ ಇದೊಂದು ಆದಿವಾಸಿಗಳ ವಿರುದ್ಧವಾದ ಕಾನೂನಾಗಿದೆ. ಭಾರತದ ಸಂವಿಧಾನದ ವೌಲ್ಯಗಳನ್ನು ಎತ್ತಿ ಹಿಡಿಯುವುದು ಮುಖ್ಯ ಅಂಶ. ಇನ್ನೊಂದು ಈ ದೇಶದ ಬಹುತ್ವದ ಸಂರಕ್ಷಣೆಯ ಅನಿವಾರ್ಯ. ಇದು ಕೇವಲ ಹಿಂದೂ-ಮುಸ್ಲಿಮರ ನಡುವಿನ ವಿಷಯವಲ್ಲ. ಉದಾಹರಣೆಗೆ ದೇಶದಲ್ಲಿ ಪ್ರಥಮ ಬಾರಿಗೆ ಅಸ್ಸಾಮಿನಲ್ಲಿ ಎನ್‌ಆರ್‌ಸಿ ಪ್ರಕ್ರಿಯೆ ಆರಂಭವಾದ ಬಳಿಕ 19 ಲಕ್ಷ ಮಂದಿ ಎನ್‌ಆರ್‌ಸಿ ಪ್ರಕ್ರಿಯೆಯಿಂದ ಹೊರಗುಳಿದರು. ಈ ಪೈಕಿ 12 ಲಕ್ಷ ಮಂದಿ ಮುಸ್ಲಿಮರಲ್ಲ. ಆರು ಲಕ್ಷ ಮಂದಿ ಮಾತ್ರ ಮುಸ್ಲಿಮರು. ಈ 19 ಲಕ್ಷ ಜನ ಯಾವ ದೇಶದಿಂದ ಬಂದವರು ಎಂದು ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಇವರನ್ನು ಯಾವ ದೇಶಕ್ಕೆ ಕಳುಹಿಸುತ್ತಾರೆ? ಅವರನ್ನು ಬೇರೆ ದೇಶಕ್ಕೆ ಕಳುಹಿಸಿದರೆ ಆ ದೇಶದವರು ಇವರು ನಮ್ಮ ದೇಶದವರಲ್ಲ ಎಂದು ತಿರಸ್ಕರಿಸಿದರೆ ಅವರು ಎಲ್ಲಿಗೆ ಹೋಗಬೇಕು?. ಅವರ ಪರಿಸ್ಥಿತಿ ಏನಾಗಬಹುದು?. ಒಂದು ವೇಳೆ ಅವರನ್ನು ನಿರಾಶ್ರಿತರ ಶಿಬಿರದಲ್ಲಿ ಉಳಿಸಿದರೆ ಅವರ ಖರ್ಚುಗಳನ್ನು ಯಾರು ಭರಿಸುತ್ತಾರೆ? ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರು ಪ್ಲಾಂಟೇಶನ್ ಕಾರ್ಮಿಕರಾಗಿ ಭಾರತದ ಹೊರಗಿನ ದೇಶಗಳ ಕಾರ್ಮಿಕರನ್ನು, ದೇಶದ ವಿವಿಧ ರಾಜ್ಯಗಳ ಕಾರ್ಮಿಕರನ್ನು ತಂದು ದುಡಿಸುತ್ತಿದ್ದರು. ಅಂತಹ ಕಾರ್ಮಿಕರು ಸಂಘಟಿತರಾಗುವುದನ್ನು ತಡೆಯುವುದು ಬ್ರಿಟಿಷರ ಗುರಿಯಾಗಿತ್ತು. ಈಗ ಪೌರತ್ವದ ಪ್ರಶ್ನೆ ಬಂದಾಗ ಅವರು ಸಮಸ್ಯೆಗೊಳಗಾಗುತ್ತಾರೆ. ಈ ಎಲ್ಲಾ ಪ್ರಶ್ನೆಗಳಿಗೆ ಈಗಿನ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಲು ಹೊರಟವರ ಬಳಿ ಉತ್ತರ ಇಲ್ಲ. ಇದರಿಂದ ದೇಶದ ಎಲ್ಲಾ ವರ್ಗದ, ಸಮುದಾಯದ ಜನರು ಸಂಕಷ್ಟಕ್ಕೀಡಾಗುತ್ತಾರೆ. ಈ ಕಾಯ್ದೆಯ ಬಳಿಕ ಅತಿಕ್ರಮವಾಗಿ ಪ್ರವೇಶ ಮಾಡಿದವರು ಎಂದು ಜನರನ್ನು ಪ್ರತ್ಯೇಕಿಸಿದರೆ ಅವರಿಗೆ ಸಂವಿಧಾನ ದತ್ತವಾಗಿ ದೇಶದಿಂದ ಸಿಗಬೇಕಾದ ಸರಕಾರಿ ಸೌಲಭ್ಯಗಳಿಂದ, ಹಕ್ಕುಗಳಿಂದ ವಂಚಿತರಾಗುತ್ತಾರೆ. ಆದುದರಿಂದ ಇದೊಂದು ಜನ ವಿರೋಧಿಯಾದ ಕಾಯ್ದೆಯಾಗಿದೆ ಎಂದು ನಾನು ಹೇಳುತ್ತೇನೆ.

 ♦ ಇಂತಹ ಮಹತ್ವದ ಬಿಲ್ ಸಂಸತ್‌ನಲ್ಲಿ ಹೇಗೆ ಸುಲಭವಾಗಿ ಮಂಜೂರಾಯಿತು?

ನ್ಯಾ.ನಾಗ್‌ಮೋಹನ್ ದಾಸ್: ನಮ್ಮ ಸಂಸತ್‌ನಲ್ಲಿ ಇಂತಹ ವಿಚಾರಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿಲ್ಲ. ಅಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕು ನಮಗಿದೆ. ಕಳೆದ 18 ವರ್ಷಗಳಲ್ಲಿ ಶೇ. 47 ಕರಡು ಮಸೂದೆಗಳು ಚರ್ಚೆಗಳಿಲ್ಲದೆ ಸಂಸತ್‌ನಲ್ಲಿ ಪಾಸಾಗಿವೆೆ. ಸಂಸತ್ತಿನ ಅಧಿವೇಶನದ ಕಡೆಯ ದಿನ ಶೇ. 60 ಬಿಲ್‌ಗಳು ಪಾಸಾಗುತ್ತವೆ. ಸಂಸತ್‌ನ ಅಧಿವೇಶನದ ಶೇ. 23 ಭಾಗ ಗಲಾಟೆಯಲ್ಲಿ ವ್ಯರ್ಥವಾಗುತ್ತವೆ. ಇಲ್ಲಿ ಆಯ್ಕೆಯಾಗುವವರು ಕಡಿಮೆ ಶಿಕ್ಷಣ ಪಡೆದವರಲ್ಲ. ಶೇ. 73 ಮಂದಿ ಪದವಿ, ಸ್ನಾತಕೋತ್ತರ ಪದವಿ ಪಡೆದವರು. ಶೇ.27ರಷ್ಟು ಪದವಿಗಿಂತ ಕಡಿಮೆ ಓದಿದವರು. ಇಲ್ಲಿ ಶಿಕ್ಷಣ ಹೆಚ್ಚು ಪಡೆದವರು ಬೇಕು ಎನ್ನುವುದು ಮುಖ್ಯವಲ್ಲ. ಸಂಸತ್‌ನಲ್ಲಿ ನಮಗೆ ಬೇಕಾಗಿರುವುದು ಜನರ ಬಗ್ಗೆ ಕಾಳಜಿ ಇರುವವರು ಎಷ್ಟಿದ್ದಾರೆ ಎನ್ನುವುದು ಮುಖ್ಯ.

 ♦ ಈಶಾನ್ಯ ರಾಜ್ಯಗಳಲ್ಲಿ ಈ ಪ್ರತಿಭಟನೆ ಹೆಚ್ಚು ಏಕೆ?

ನ್ಯಾ.ನಾಗ್‌ಮೋಹನ್ ದಾಸ್: ದೇಶದಲ್ಲಿ ಪ್ರಥಮ ಬಾರಿಗೆ ಎನ್‌ಆರ್‌ಸಿಯನ್ನು ಜಾರಿಗೆ ತಂದಿರುವುದು ಅಸ್ಸಾಮಿನಲ್ಲಿ. ನಾನು ತ್ರಿಪುರಾಕ್ಕೆ ಭೇಟಿ ನೀಡಿದಾಗ ಅಲ್ಲಿನ ಗಡಿ ಭಾಗಕ್ಕೆ ಒಂದು ಬಾರಿ ಹೋಗುವ ಸಂದರ್ಭ ಬಂತು. ಆಗ ಗಡಿಭಾಗದಲ್ಲಿ ಪ್ರತಿನಿತ್ಯ ಬಾಂಗ್ಲಾದಿಂದ ಕಾರ್ಮಿಕರು ಬೆಳಗ್ಗೆ ಬಂದು ಇಲ್ಲಿ ಕೆಲಸ ಮಾಡಿ ಸಂಜೆ ಹೋಗುತ್ತಿದ್ದರು. ವಿಚಾರಿಸಿದಾಗ ಅಲ್ಲಿ ಬಡತನ, ಅದಕ್ಕಾಗಿ ದುಡಿಯಲು ಇಲ್ಲಿಗೆ ಬರುತ್ತಾರೆ ಎನ್ನುತ್ತಾರೆ. ಹೀಗೆ ಬಂದವರು ಇಲ್ಲಿ ಮದುವೆಯಾಗಿ ನೆಲೆಸಿದವರು ಇದ್ದಾರೆ, ಇದು ಸಾಮಾನ್ಯ. ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ಮುಸ್ಲಿಮರನ್ನು ಮಾತ್ರ ಗುರಿ ಮಾಡಿರಲಿಲ್ಲ. ಈಗ ಬಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಮುಸ್ಲಿಮರನ್ನು ಮಾತ್ರ ಗುರಿ ಮಾಡಲಾಗಿದೆ.ಸಹಜವಾಗಿ ಆದಿವಾಸಿಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಅವರು ಹೆಚ್ಚು ಪ್ರತಿಭಟನೆ ಮಾಡುತ್ತಿದ್ದಾರೆ.

 ♦ ಸಂವಿಧಾನದ ಆಶಯಗಳನ್ನು ರಕ್ಷಿಸಬೇಕಾದರೆ ಮುಂದೆ ಯಾವ ದಾರಿ?

 ನ್ಯಾ.ನಾಗ್ ಮೋಹನ್ ದಾಸ್: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಸರಕಾರ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಕೆಲ ಕಾಲ ಜನರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಬಹುದು. ವಾಸ್ತವದಲ್ಲಿ ಇದು ಜಾರಿಯಾಗುವ ಕಾಯ್ದೆಯಲ್ಲ. ದೇಶದ ಸಂವಿಧಾನಕ್ಕೆ ಬುದ್ಧನ ಧರ್ಮ, ಬಸವಣ್ಣನ ಸಮಾನತೆ, ಅಂಬೇಡ್ಕರರ ಸಾಮಾಜಿಕ ನ್ಯಾಯದ ತಳಹದಿ ಆಧಾರ. ಇವುಗಳ ಆಶಯದೊಂದಿಗೆ ಸಂವಿಧಾನ ನಿಂತಿದೆ. ಈ ಹಿನ್ನೆಲೆಯಲ್ಲಿ ಈ ರೀತಿಯ ಜನವಿರೋಧಿ ನೀತಿಯ ವಿರುದ್ಧ ಸೈದ್ಧಾಂತಿಕ ಸಂಘರ್ಷ ಅನಿವಾರ್ಯ.

 ಪೌರತ್ವ ಕಾಯ್ದೆ ತಿದ್ದುಪಡಿಗೆ ಹೊರಟಿರುವುದು ನಾಗರಿಕತ್ವದ ಹಕ್ಕಿನ ಉಲ್ಲಂಘನೆಯಾಗಿದೆ, ಜೊತೆಗೆ ಭಾರತದ ಸಂವಿಧಾನದ ಅನುಚ್ಛೇದ 14 ಮತ್ತು 21ರಲ್ಲಿ ಹೇಳುವ ಸಮಾನತೆಯ ಹಕ್ಕಿನ ವಿರುದ್ಧವಾದ ಕಾಯ್ದೆಯಾಗಿದೆ. ಧರ್ಮದ ಆಧಾರದಲ್ಲಿ ಕಾನೂನು ರಚನೆ ಮಾಡುವುದು ಭಾರತದ ಸಂವಿಧಾನದ ಮೂಲಕ ಹೇಳಿರುವ ಮೂಲ ಸಂರಚನೆಯಾದ ಜಾತ್ಯತೀತತೆಯ ವಿರುದ್ಧವಾದ ಕಾಯ್ದೆಯಾಗಿದೆ. ಈ ಬಗ್ಗೆ 1970ರಲ್ಲಿ ಕೇಶವಾನಂದ ಭಾರತಿ ಸ್ವಾಮೀಜಿಗಳ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಇನ್ನೊಂದು ಪ್ರಮುಖ ಅಂಶ ಈ ದೇಶದ ಮೂಲನಿವಾಸಿಗಳ ಪ್ರಶ್ನೆ. ಅವರಲ್ಲಿ ಮುಖ್ಯವಾಗಿ ಬುಡಕಟ್ಟುಗಳ ಜನರು. ಅಕ್ಷರದಿಂದ ವಂಚಿತರಾದವರು. ಶತಮಾನಗಳಿಂದ ಬಡತನ, ಶೋಷಣೆಗೆ ಒಳಗಾದವರು. ಅವರ ಬಳಿ ಇಲ್ಲಿನವರು ಎಂದು ಹೇಳಿಕೊಳ್ಳುವ ಯಾವ ದಾಖಲೆಗಳೂ ಇಲ್ಲ. ಅವರು ಈ ಕಾಯ್ದೆಯ ಮೊದಲ ಬಲಿಪಶುಗಳಾಗುತ್ತಿದ್ದಾರೆ. ಆದುದರಿಂದ ಇದೊಂದು ಆದಿವಾಸಿಗಳ ವಿರುದ್ಧವಾದ ಕಾನೂನಾಗಿದೆ.

courtesy : varthabharati

Please follow and like us:
error