ಪೌರತ್ವ ಕಾಯ್ದೆಯಿಂದ ಧಾರ್ಮಿಕ ತಾರತಮ್ಯ: ನೊಬೆಲ್ ಪುರಸ್ಕೃತ ಪ್ರೊ.ಅಮರ್ತ್ಯ ಸೇನ್

ಬೆಂಗಳೂರು, ಜ.7: ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವ ಪೌರತ್ವ(ತಿದ್ದುಪಡಿ) ಕಾಯ್ದೆಯು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾದುದಾಗಿದ್ದು, ಧಾರ್ಮಿಕ ತಾರತಮ್ಯ ಮಾಡುತ್ತದೆ ಎಂದು ನೊಬೆಲ್ ಪ್ರಶಸ್ತ್ರಿ ಪುರಸ್ಕೃತ ಹಾಗೂ ಅರ್ಥಶಾಸ್ತ್ರಜ್ಞ ಪ್ರೊ.ಅಮರ್ತ್ಯ ಸೇನ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ 2019 ನೆ ಸಾಲಿನ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ನೀಡುವ ಇನ್ಫೋಸಿಸ್ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಕೇಂದ್ರ ಸರಕಾರ ಹಿಂದೂಗಳ ಸಿಂಪಥಿ ಗಳಿಸಲು ಈ ಕಾಯ್ದೆಯನ್ನು ರೂಪಿಸಲಾಗಿದೆ. ಭಾರತದ ನೆರೆ ರಾಷ್ಟ್ರಗಳಲ್ಲಿರುವವರಿಗೆ ನಮ್ಮ ದೇಶದಲ್ಲಿ ವಾಸಿಸಲು ಅರ್ಹತೆ ನೀಡುವವರು, ನಮ್ಮಲ್ಲಿಯೇ ಇರುವವರನ್ನು ಕಡೆಗಣಿಸುತ್ತಿದ್ದಾರೆ. ಇದು ಧಾರ್ಮಿಕ ತಾರತಮ್ಯವಲ್ಲವಾ ಎಂದು ಅವರು ಪ್ರಶ್ನಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತೀಯರ ಮೂಲಭೂತ ಹಕ್ಕುಗಳನ್ನು ದಮನ ಮಾಡುತ್ತದೆ. ಇದು ಸರಿಯಾದ ಮಾರ್ಗವಲ್ಲ. ಇದಕ್ಕೆ ನಮ್ಮ ಸಹಮತವಿಲ್ಲ. ಈ ಕಾಯ್ದೆಯ ಮೂಲಕ ಹಿಂದೂಗಳನ್ನು ರಕ್ಷಿಸುತ್ತೇವೆ ಎನ್ನುತ್ತಾರೆ. ಆದರೆ, ಅದು ಸುಳ್ಳಾಗಿದೆ ಎಂದು ಅವರು ಪ್ರತಿಪಾದಿಸಿದರು.

ಜೆಎನ್‌ಯು ಮೇಲಿನ ದಾಳಿ ಖಂಡನೀಯ: ನಮ್ಮ ದೇಶದ ಶೈಕ್ಷಣಿಕ ಸಂಸ್ಥೆಗಳ ಮೇಲೆ ದಾಳಿಯು ಸಲ್ಲ. ದಿಲ್ಲಿಯ ಜೆಎನ್‌ಯು ವಿವಿಯೊಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ, ಹಲ್ಲೆ ನಡೆಸಿರುವುದು ಖಂಡನಾರ್ಹ. ನಮ್ಮ ದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಡುತ್ತಿದೆ ಎಂದು ಅವರು ತೀವ್ರವಾಗಿ ಖಂಡಿಸಿದರು.

ಅದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐದನೇ ಶತಮಾನದ ನಂತರ ಆರ್ಯಭಟ ನೇತೃತ್ವದಲ್ಲಿ ನಡೆದ ಗಣಿತದ ಕ್ರಾಂತಿಗೆ ಗ್ರೀಸ್, ಬ್ಯಾಬಿಲಾನ್ ಮತ್ತು ರೋಮ್‌ನಲ್ಲಿ ನಡೆದ ಬುದ್ಧಿಮತ್ತೆಯ ಬೆಳವಣಿಗೆಯ ಪ್ರಭಾವ ಕಾರಣವಾಯಿತು. ಆದರೆ, ಆರ್ಯಭಟನಲ್ಲಿ ಗಣಿತ, ಭಾರತದಲ್ಲಿ ಬಹುದೊಡ್ಡ ಯಶಸ್ಸು ಸಾಧಿಸಿತು ಎಂದು ಹೇಳಿದರು.

ಭಾರತದಲ್ಲಿ ಯಶಸ್ಸು ಪಡೆದ ಬಳಿಕ ಅದು ದೇಶ ವಿದೇಶಗಳಲ್ಲಿ ಪಸರಿಸಿತು. ಚೀನಾ, ಅರಬ್ ಜಗತ್ತಿನ, ಕೊನೆ ಗಳಿಗೆಯಲ್ಲಿ ಯೂರೋಪ್ ಮೇಲೆಯೂ ಪರಿವರ್ತನಾತ್ಮಕ ಪ್ರಭಾವ ಬೀರಿದೆ ಎಂದು ಅಮಾರ್ತ್ಯ ಸೇನ್ ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ಪ್ರಾಧ್ಯಾಪಕಿ ಸುನಿತಾ ಸುರವಗಿ, ಮಾನವೀಯತೆ ವಿಭಾಗದಲ್ಲಿ ಡಾ.ದೇವದೇವನ್ ಜೀವ ವಿಜ್ಞಾನ ಕ್ಷೇತ್ರದಲ್ಲಿ ವಿಜ್ಞಾನಿ ಡಾ.ಮಂಜುಳಾ ರೆಡ್ಡಿ, ಗಣಿತ ವಿಜ್ಞಾನದಲ್ಲಿ ಪ್ರೊ.ಸಿದ್ದಾರ್ಥ ಮಿಶ್ರಾ, ಭೌತಿಕ ವಿಜ್ಞಾನದಲ್ಲಿ ಜಿ.ಮುಗೇಶ್ ಹಾಗೂ ಸಾಮಾಜಿಕ ವಿಜ್ಞಾನದಲ್ಲಿ ಪ್ರೊ.ಆನಂದ್ ಪಾಂಡಿಯನ್‌ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಇನ್ಫೋಸಿಸ್ ಅಧ್ಯಕ್ಷ ನಾರಾಯಣಮೂರ್ತಿ ಉಪಸ್ಥಿತರಿದ್ದರು.

Please follow and like us:
error